ಅವಕಾಶವಾದಿ ಅನಾಥ ಭಕ್ಷಕರು

Advertisement

ನಿಜ ಹೇಳಿ, ಜಮೀನು ಸ್ವಾಧೀನದಲ್ಲಿ ನೀವೇ ಇದ್ದೀರಾ?. ನನ್ನ ಪ್ರಶ್ನೆಯ ಅದೇ ವೇಗದಲ್ಲಿ, ಹೌದು ಸರ್ ನಾವೇ ಸ್ವಾಧೀನದಲ್ಲಿ ಇದ್ದೇವೆ ಎಂದು ಅನಸೂಯಾ, ಪಾರ್ವತಿ ಸಹೋದರಿಯರು ತಟ್ಟನೆ ಉತ್ತರಿಸಿದರು. ಹೇಳುವ ಸಂಗತಿಗಳನ್ನು ನಾನೇನು ಶಂಕಿಸಿರಲಿಲ್ಲ, ಆದರೆ ನ್ಯಾಯಾಲಯಕ್ಕೆ ಯಾವುದೇ ವ್ಯಾಜ್ಯವನ್ನು ತೆಗೆದುಕೊಂಡು ಹೋಗುವ ಮುಂಚೆ ಸತ್ಯ, ವಾಸ್ತವಿಕ ಅಂಶಗಳನ್ನು ಪರಿಶೀಲಿಸಿ ಅವುಗಳನ್ನು ಹೇಗೆ ಸಾದರಪಡಿಸಬೇಕೆಂಬುದಕ್ಕೆ ಕಕ್ಷಿದಾರರ ಪ್ರಾಥಮಿಕ ವಿಚಾರಣೆ ಅವಶ್ಯ ಇದೆ.
ಸಹೋದರಿಯರು ಹೇಳುವುದನ್ನು ಕಣ್ಣಾಗಿಸಿ ನೋಡಿದ್ದೇ. ಅಷ್ಟು ಅರ್ಥವತ್ತಾಗಿ, ನಿಖರತೆಯಿಂದ ಕಣ್ಣಿಗೆ ಕಟ್ಟುವಂತೆ ಕಥೆಯಾಗಿ ಹೇಳಿದರು. ಸಹೋದರಿಯರಿಗೆ, ಅನಾಥ ರಕ್ಷಕರೆಂದು ಜೀವನದಲ್ಲಿ ಸಹಾಯ ಮಾಡುವರಂತೆ ಪ್ರವೇಶಿಸಿ, ನಂಬಿಕೆದ್ರೋಹ, ಮೋಸ ಮಾಡಿದ್ದನ್ನು ಕಣ್ಣಿಗೆ ಕಟ್ಟುವಂತೆ ಹೇಳಿದರು.
ಸಹೋದರಿಯರ ತಾಯಿ ನೀಲಮ್ಮಳಿಗೆ ಮೂವರು ಹೆಣ್ಣು ಮಕ್ಕಳು ಗಂಡು ಸಂತಾನ ಇಲ್ಲ. ತವರು ಮನೆ ಉತ್ತರಾಧಿಕೆಯಿಂದ ಬಂದ ಹತ್ತು ಎಕರೆ ಜಮೀನು, ಮನೆ ಇದೆ. ನೀಲಮ್ಮಳ ಗಂಡ ಮೃತನಾಗಿದ್ದ. ಮೃತನಿಗೆ ಯಾವುದೇ ಆಸ್ತಿ ಇಲ್ಲವಾದ್ದರಿಂದ ಹೆಂಡತಿ ಹೆಣ್ಣು ಮಕ್ಕಳು ಯಾವುದೇ ಆಸ್ತಿಗೆ ಉತ್ತರಾಧಿಕಾರಿಗಳಾಗುವ ಪ್ರಶ್ನೆ ಉದ್ಭವ ಆಗಲಿಲ್ಲ. ಮೃತನಿಗೆ ಇಬ್ಬರು ನೀಲಕಂಠ, ಶಿವಪುತ್ರ ಅನ್ನುವ ಸಹೋದರರು(ಎಲ್ಲ ಹೆಸರುಗಳನ್ನು ಬದಲಿಸಲಾಗಿದೆ) ಅವರಿಗೆ ಯಾವುದೇ ಆಸ್ತಿ ಇಲ್ಲ. ನೀಲಕಂಠ ಮತ್ತು ಶಿವಪುತ್ರನಿಗೆ ಅಣ್ಣನ ಹೆಂಡತಿ ಆಸ್ತಿಯ ಮೇಲೆ ಕಣ್ಣು. ಸಹಾಯ ಮಾಡುವಂತೆ ಮನಸ್ಸಿನಲ್ಲಿ ದುರಾಸೆ ಇಟ್ಟುಕೊಂಡು ನಟಿಸುತ್ತಿದ್ದರು. ನೀಲಮ್ಮ ಮೃತಳಾದಳು. ಹೆಣ್ಣು ಮಕ್ಕಳಿಗೆ ಕಕ್ಕಂದಿರು ಅನಾಥ ಬಂಧುವಾಗಿ ನಿಂತರು. ಮನೆತನದ ಎಲ್ಲ ಆಗುಹೋಗುಗಳನ್ನು ಕಕ್ಕಂದಿರು ನಿರ್ವಹಿಸಿದರು. ಹೆಣ್ಣು ಮಕ್ಕಳು ಕಕ್ಕಂದಿರಿಗೆ ಚಿರಋಣಿಯಾದರು.
ವರ್ಷಗಳು ಕಳೆದವು. ಕಕ್ಕಂದಿರು ಜಮೀನಿನಲ್ಲಿ ನಮಗೆ ಪಾಲು ಬೇಕು, ನಾವು ಜಂಟಿ ಮಾಲೀಕರು ಎಂದು ತಗಾದೆ ತೆಗೆದು ಜಮೀನು ಸ್ವಾಧೀನ ಪಡೆಯಲು ಪ್ರಯತ್ನಿಸಿದರು. ಕಂಗಾಲಾದ ಸಹೋದರಿಯರಿಗೆ ಅವರ ತಾಯಿಯ ಸಹೋದರಿ ಸಂಬಂಧಿ ವಿಠ್ಠಲ ಸಹಾಯಕ್ಕೆ ಅನಾಥ ರಕ್ಷಕನಾಗಿ ಉದಯಿಸಿದ. ಸಹೋದರಿಯರಿಗೆ, ನೀರಲ್ಲಿ ಮುಳುಗುವನಿಗೆ ಹುಲ್ಲು ಕಡ್ಡಿ ಆಸರೆ ಆಗುವಂತೆ ಆಸರೆಯಾದ. ವಿಠ್ಠಲನ ಸಹಾಯ, ಸಹಕಾರ, ಮಾರ್ಗದರ್ಶನದಂತೆ ಜಮೀನಿನ ಕಂದಾಯ ದಾಖಲೆ ಪರೀಕ್ಷಿಸಿದಾಗ ನೀಲಮ್ಮ ಮೃತನಾದ ನಂತರ ಅವಳಿಗೆ ಮೂವರು ಹೆಣ್ಣು ಮಕ್ಕಳ ಜೊತೆ ತಾವು ಕೂಡ ವಾರಸುದಾರರು ಎಂದು ವರದಿ ಸಲ್ಲಿಸಿ, ಸಹೋದರಿಯರ ಹೆಸರಿನ ಜೊತೆ ಕಕ್ಕಂದಿರಾದ ನೀಲಕಂಠ ಮತ್ತು ಶಿವಪುತ್ರ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದರು. ಸಹೋದರಿಯರು ವಿಠ್ಠಲನ ಸಹಾಯ, ಮಾರ್ಗದರ್ಶನ ಪಡೆದುಕೊಂಡು ನ್ಯಾಯಾಲಯದ ಕದ ತಟ್ಟಿದ್ದರು. ತಾವು ಜಮೀನಿನ ಸಂಪೂರ್ಣ ಮಾಲೀಕರು ಮತ್ತು ಸ್ವಾಧೀನದಾರರು ಎಂದು ಘೋಷಣೆ ಮತ್ತು ಶಾಶ್ವತ ತಡೆಯಾಜ್ಞೆ ಪ್ರಾರ್ಥಿಸಿ ಕಕ್ಕಂದಿರ ಮೇಲೆ ಸಿವಿಲ್ ಕೋರ್ಟ್‌ನಲ್ಲಿ ಸಿವಿಲ್ ದಾವೆ ದಾಖಲಿಸಿದ್ದರು. ದಾವೆಯನ್ನು ತಾನೇ ನಡೆಸುವುದಾಗಿ, ಹೆಣ್ಣು ಮಕ್ಕಳು ಕೋರ್ಟ್ ಕಚೇರಿಗೆ ಅಲೆಯುವುದು ಬೇಡ ಎಂದು ವಿಠ್ಠಲ ತನ್ನ ಹೆಸರಿಗೆ ಹೆಣ್ಣು ಮಕ್ಕಳಿಂದ ಪವರ್ ಆಫ್ ಅಟಾರ್ನಿ ಪತ್ರಕ್ಕೆ, ಹಲವಾರು ಖಾಲಿ ಹಾಳೆಗಳಿಗೆ ಸಹಿ ಪಡೆದುಕೊಂಡನು. ಹಲವಾರು ವರ್ಷ ವ್ಯಾಜ್ಯ ನಡೆಯಿತು. ವಿಠ್ಠಲ ಒಂದು ದಿನವೂ ಹೆಣ್ಣು ಮಕ್ಕಳನ್ನು ಕೋರ್ಟಿಗೆ ಅಲೆದಾಡಿಸಲಿಲ್ಲ. ಖರ್ಚಿಗೆ ಕೈ ತುಂಬ ಸಾಕಷ್ಟು ಹಣ ನೀಡಿದರು. ಕೊನೆಗೆ ಹೆಣ್ಣು ಮಕ್ಕಳ ಪರವಾಗಿ ತೀರ್ಪು ಬಂದಿತು. ಕಕ್ಕಂದಿರ ಹೆಸರು ಜಮೀನಿನ ಕಂದಾಯ ದಾಖಲೆಯಲ್ಲಿ ಕಡಿಮೆಯಾಯಿತು. ಕೇವಲ ಸಹೋದರಿಯರು ಹೆಸರು ಕಂದಾಯ ದಾಖಲೆಯಲ್ಲಿ ಉಳಿಯಿತು. ವಿಠ್ಠಲನ ಸಹಾಯ ಕೊಂಡಾಡಿದರು. ದೇವರೇ ವಿಠ್ಠಲನ ರೂಪದಲ್ಲಿ ಬಂದು ಸಹಾಯ ಮಾಡಿದ್ದಾನೆಂದು ಹೊಗಳಿ, ಪ್ರತಿಫಲವಾಗಿ ಹಣ, ಬಂಗಾರ ನೀಡಿ ಋಣ ಮುಕ್ತರಾದರು.
ಹೀಗೆ ವರ್ಷಗಳು ಉರುಳಿದವು. ಜಮೀನಿನ ಪಕ್ಕ ಹರಿಯುವ ಹಳ್ಳದಲ್ಲಿ ಸಾಕಷ್ಟು ಸಿಹಿ ನೀರು ಹರಿದುಹೋಯಿತು. ಕಾಲ ಉರುಳಿತು. ದೊಡ್ಡ ಅಕ್ಕ ತೀರಿಕೊಂಡಳು. ಆಗಲೂ ಸಹಾಯಕ್ಕೆ ದೇವಸ್ವರೂಪಿ ವಿಠ್ಠಲ ಪ್ರತ್ಯಕ್ಷನಾದ. ಅನಸೂಯ, ಪಾರ್ವತಿಯರ ಗಂಡ ಮಕ್ಕಳು, ಮೃತ ಸಹೋದರಿ ಮಕ್ಕಳು ತೋಟದ ಮನೆಯಲ್ಲಿ ಠಿಕಾಣಿ ಹೂಡಿದರು. ವಿಠ್ಠಲ ತೀರಿಕೊಂಡನು. ತಮ್ಮ ಪಾಲಿನ ದೇವರು ತೊರೆದುಹೋದನು, ತಾವು ಮತ್ತೆ ಅನಾಥರಾದ ಭಾವ. ಅಂತ್ಯಸಂಸ್ಕಾರವನ್ನು ಸಹೋದರಿಯರ ಕುಟುಂಬ ನೆರವೇರಿಸಿತು. ಮೃತನ ಹೆಂಡತಿ, ಮಕ್ಕಳಿಗೆ ಉಪಜೀವನದ ಎಲ್ಲ ವ್ಯವಸ್ಥೆ ಮಾಡಿದರು.
ವರ್ಷಗಳು ನಿಲ್ಲುವುದಿಲ್ಲ. ಹೀಗೊಂದು ದಿನ ಮುಂಜಾನೆ, ಮೃತ ವಿಠ್ಠಲನ ಮಕ್ಕಳು ಜಮೀನಿಗೆ ಪ್ರವೇಶಿಸಿ, ಎಲ್ಲರೂ ತೋಟ ಮತ್ತು ಮನೆಯಿಂದ ಹೊರಗೆ ನಡೆಯಿರಿ, ಈ ತೋಟ, ಮನೆ ನಮ್ಮದು, ನಿಮಗೆ ಹಕ್ಕಿಲ್ಲ ಎಂದು ಖ್ಯಾತೆ ತೆಗೆದರು. ಸಹೋದರಿಯರು ದಿಗ್ಭ್ರಮೆಗೊಂಡರು. ಎಲ್ಲರಿಂದ ಮೋಸಗೊಂಡು ಯಾರನ್ನು ನಂಬದೆ ತಾವೇ ಜಮೀನಿನ ದಾಖಲೆ ಪಡೆದುಕೊಂಡು ಕಟ್ಟಕಡೆಯ ಆಸರೆ ಆಶಾಕಿರಣ ನ್ಯಾಯಾಲಯದಲ್ಲಿ ನ್ಯಾಯ ಅರಸಿ ನನ್ನ ಬಳಿಗೆ ಬಂದರು.
ಶಿವಪುತ್ರ, ನೀಲಕಂಠ ಮೋಸ ಮಾಡಿದಂತೆ, ವಿಠ್ಠಲ ಕೂಡ ನಂಬಿಕೆ, ವಿಶ್ವಾಸದ್ರೋಹ ಮೋಸ ಮಾಡಿದ್ದ. ಮೃತ ಸಹೋದರಿ ತನ್ನ ಹೆಸರಿಗೆ ಮೃತ್ಯು ಪತ್ರ ಮಾಡಿ ಕೊಟ್ಟಿರುವುದಾಗಿ ನಕಲಿ ಮೃತ್ಯು ಪತ್ರ ಸೃಷ್ಟಿಸಿದ್ದ, ಅವಳ ಸಹೋದರಿಯರು ತಮ್ಮ ಹಕ್ಕು ಬಿಟ್ಟುಕೊಟ್ಟಿರುವುದಾಗಿ ಹಕ್ಕು ಬಿಟ್ಟ ಪತ್ರ ತಯಾರಿಸಿ ತನ್ನ ಹೆಸರನ್ನು ಜಮೀನುಗಳ ದಾಖಲೆಯಲ್ಲಿ ಗೊತ್ತಾಗದ ಹಾಗೆ ದಾಖಲಿಸಿಕೊಂಡಿದ್ದನು. ವಿಠ್ಠಲ ಮೃತನಾದ ನಂತರ ಅವನ ಹೆಂಡತಿ ಮಕ್ಕಳು ವಿಠ್ಠಲನ ವಾರಸುದಾರರೆಂದು ತಮ್ಮ ಹೆಸರು ದಾಖಲಿಸಿಕೊಂಡು ಖ್ಯಾತೆ ತೆಗೆದಿದ್ದರು. ಸಹೋದರಿಯರಿಗೆ ಆಕಾಶವೇ ಕಳಚಿ ಬಿದ್ದ ಹಾಗಿತ್ತು. ಯಾರನ್ನು ನಂಬುವುದು, ಬಿಡುವುದು ತಿಳಿಯದಾಗಿತ್ತು. ಬೇಲಿಯೇ ಎದ್ದು ಹೊಲ ಮೈದಂತೆ, ತಾಯಿಯ ಮೊಲೆ ಹಾಲು ವಿಷವಾದಂತೆ, ಮನೆಯೊಡತಿ ಮನೆಯ ಕಳವು ಮಾಡಿದ ಕೆಟ್ಟ ಅನುಭವದಿಂದ ನಲುಗಿ ಹೋಗಿದ್ದರು. ಅವರಿಗೆ ಧೈರ್ಯ, ಭರವಸೆ ನೀಡಿ ನ್ಯಾಯಾಲಯದ ಮೇಲೆ ವಿಶ್ವಾಸ ಇಡಿರಿ, ಸಂಯಮದಿಂದ ಕಾಯಿರಿ, ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಮಾನಸಿಕವಾಗಿ ಸಿದ್ಧಪಡಿಸಿದೆ.
ಅನುಸೂಯ, ಪಾರ್ವತಿ ಸಹೋದರಿಯರು, ಮೃತ ಅಕ್ಕನ ಮಕ್ಕಳನ್ನು ವಾದಿಯಾರನ್ನಾಗಿಸಿ, ವಾದಿಯರು ದಾವೆ ಆಸ್ತಿಯ ಮಾಲೀಕರು ಮತ್ತು ಸ್ವಾಧೀನದಾರರು ಎಂದು ಘೋಷಣೆ ಮತ್ತು ಶಾಶ್ವತ ತಡೆಯಾಜ್ಞೆ ದಾವೆಯನ್ನು, ವಿಠ್ಠಲನ ಹೆಂಡತಿ ಮಕ್ಕಳನ್ನು ಪ್ರತಿವಾದಿಯಾಗಿಸಿ ಸಿವಿಲ್ ಕೋರ್ಟ್‌ನಲ್ಲಿ ದಾಖಲಿಸಿದೆ.
ಪ್ರತಿವಾದಿಯರು ವಕೀಲರನ್ನು ನೇಮಿಸಿ ತಮ್ಮ ಕೈಫಿ ಯತ್/ತಕರಾರು/ರಿಟನ್ ಸ್ಟೇಟ್ಮೆಂಟ್ ಸಲ್ಲಿಸಿದರು. ವಿಚಾರಣೆ ಪ್ರಾರಂಭವಾಯಿತು. ವಾದಿ, ಪ್ರತಿವಾದಿಯರು ದಾಖಲೆ ಸಹಿತ ತಮ್ಮ ಸಾಕ್ಷಿ ಹೇಳಿಕೆ ನೀಡಿದರು, ಪಾಟಿ ಸವಾಲಿಗೆ ಒಳಪಟ್ಟರು.
ಕೊನೆಯ ಹಂತ ಆರ್ಗ್ಯುಮೆಂಟ್: ಮೊದಲಿಗೆ ವಾದಿ ಸುತ್ತ, ವಾದಿಯರು ತಮ್ಮ ತಾಯಿ ಮರಣದ ನಂತರ, ಯಾವ ರೀತಿಯಾಗಿ ಮೋಸಗೊಂಡರು. ಅಶಿಕ್ಷಿತ ಹೆಣ್ಣು ಮಕ್ಕಳು ಹೇಗೆ ಶೋಷಣೆಗೆ ಒಳಪಟ್ಟರು ಎಂದು ದಾಖಲೆ ಸಹಿತ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟೆನು. ಪ್ರತಿ ವಾದಿಯರು ವಿಠ್ಠಲ ತನ್ನ ಹೆಸರಿಗೆ ಬರೆದುಕೊಂಡ ಮೃತ್ಯು ಪತ್ರ, ಹಕ್ಕುಬಿಟ್ಟ ಪತ್ರ ಬೆಳಕಿಗೆ ಬಂದಿಲ್ಲ, ಅವುಗಳನ್ನು ಕೋರ್ಟಿಗೆ ಹಾಜರುಪಡಿಸಿಲ್ಲವೆಂದು ಗಮನಕ್ಕೆ ತಂದೆನು. ಪ್ರತಿವಾದಿ ತನ್ನ ಹೆಸರು ಕಂದಾಯ ದಾಖಲೆಯಲ್ಲಿದ್ದು ತಾವೇ ಮಾಲೀಕರು ಎಂದು ವಾದಿಸಿದರು.
ತೀರ್ಪು: ನ್ಯಾಯಾಲಯವು, ವಾದಿಯರು ಎಲ್ಲರಿಂದಲೂ ಮೋಸ, ನಂಬಿಕೆದ್ರೋಹಕ್ಕೆ ಒಳಪಟ್ಟಿದ್ದನ್ನು, ಪ್ರತಿವಾದಿಯರು ಮೃತ್ಯು ಪತ್ರ, ಹಕ್ಕುಪತ್ರ ಹಾಜರು ಪಡಿಸಿಲ್ಲದನ್ನು ಗಮನದಲ್ಲಿರಿಸಿ, ಸಾಕ್ಷ್ಯಾಧಾರ, ಪುರಾವೆ ಅವಲೋಕಿಸಿ, ವಾದಿಯರು ದಾವೆ ಸ್ವತ್ತುಗಳ ಮಾಲೀಕರು ಮತ್ತು ಸ್ವಾಧೀನದಾರರೆಂದು ಘೋಷಿಸಿ ತೀರ್ಪು ನೀಡಿದರು. ವಾದಿಯರು ನ್ಯಾಯಾಲಯದ ಮೇಲೆ ಇಟ್ಟ ನಂಬಿಕೆ, ವಿಶ್ವಾಸ ಹುಸಿಯಾಗಲಿಲ್ಲ.