ಮೂವರ ಜೀವಕ್ಕೆ ಕುತ್ತು ತಂದ ದಂಪತಿ ಜಗಳ

ವಂಟಮೂರಿ
Advertisement

ಬೆಳಗಾವಿ: ದೀಪಾವಳಿ ಹೊಸ್ತಿಲಲ್ಲಿ ಕುಡುಕ ಗಂಡನ ಕಿರಿಕಿರಿಗೆ ಬೇಸತ್ತ ಪತ್ನಿ ಆತನಿಗೆ ಬುದ್ಧಿ ಮಾತು ಹೇಳಿದ್ದೇ ಮೂವರ ಜೀವಕ್ಕೆ ಕುತ್ತು ತಂದ ಘಟನೆ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
ಹೊಸ ವಂಟಮೂರಿ ಗ್ರಾಮದ ನಿವಾಸಿ ಹೊಳೆಪ್ಪ ಮಾರುತಿ ಮಸ್ತಿ (25) ಪತ್ನಿ ವಾಸಂತಿ ಹೊಳೆಪ್ಪ ಮಸ್ತಿ (22) ಹಾಗೂ ಒಂದೂವರೆ ವರ್ಷದ ಮಗು ಅನ್ಯಾಯವಾಗಿ ಸಾವನ್ನಪ್ಪಿದೆ.
ಕುಡಿತದ ಚಟ ಹೊಂದಿದ್ದ ಹೊಳೆಪ್ಪ ಹಾಗೂ ಪತ್ನಿ ವಾಸಂತಿ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು. ದೀಪಾವಳಿ ಹಿನ್ನೆಲೆಯಲ್ಲಿ ಮಕ್ಕಳಿಗೆ ಹೊಸ ಬಟ್ಟೆ ತರುವ ವಿಚಾರದಲ್ಲಿ ಶುಕ್ರವಾರ ಮತ್ತೆ ದಂಪತಿಯ ಮಧ್ಯೆ ಕಲಹವಾಗಿದೆ. ಕುಡಿತದ ಚಟ ಬಿಡುವಂತೆ ವಾಸಂತಿ ಪತಿಗೆ ಬುದ್ಧಿಮಾತು ಹೇಳಿದ್ದಾಳೆ. ಇದೇ ವಿಚಾರಕ್ಕೆ ಇವರ ಮಧ್ಯೆ ವಾಗ್ವಾದ ನಡೆದಿದೆ.
ಈ ನಡುವೆ ಪತ್ನಿಗೆ ಹೆದರಿಸುವ ಉದ್ದೇಶದಿಂದ ಹೊಳೆಪ್ಪ ಮನೆಯಲ್ಲಿದ್ದ ವಿಷ ಕುಡಿದಿದ್ದಾನೆ. ತಕ್ಷಣವೇ ಹೊಳೆಪ್ಪನ ಗೆಳೆಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಹೊಳೆಪ್ಪ ಕೊನೆಯುಸಿರೆಳೆದಿದ್ದಾರೆ.
ಪತಿಯ ಸಾವಿನ ಸುದ್ದಿ ತಿಳಿಯುತ್ತಲೇ ಗಾಬರಿಯಾದ ವಾಸಂತಿ ಮಗುವಿನೊಂದಿಗೆ ಮನೆಯಿಂದ ಊರಹೊರಗಿನ ಹೊಲಕ್ಕೆ ಓಡಿ ಹೋಗಿದ್ದಾಳೆ. ಅಲ್ಲಿ ಮಗುವಿನ ಕತ್ತುಕೊಯ್ದು ಕೊಲೆ ನಡೆಸಿ ತಾನೂ ನೇಣಿಗೆ ಶರಣಾಗಿದ್ದಾಳೆ.
ನಾಪತ್ತೆಯಾದ ವಾಸಂತಿಗಾಗಿ ಹುಡುಕಾಟ ನಡೆಸಿದ ಊರವರಿಗೆ ಹೊಲದಲ್ಲಿ ವಾಸಂತಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ದಂಪತಿಯ ಮೂರು ವರ್ಷದ ಮತ್ತೊಬ್ಬ ಪುತ್ರಿ ಈಗ ಅನಾಥಳಾಗಿದ್ದಾಳೆ.