ಮಂತ್ರಿಗಳ ಅಧಿಕಾರಕ್ಕೆ ಮುಖ್ಯಮಂತ್ರಿ ಕತ್ರಿ

ವಿಧಾನಸೌಧ
Advertisement

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ (ಡಿಪಿಎಆರ್) ಹಿಂತೆಗೆಯಲಾಗಿದ್ದ ಮಹತ್ವದ ಜವಾಬ್ದಾರಿಯನ್ನು ಹಿಂದಿರುಗಿಸಿ ರಾಜ್ಯ ಸರಕಾರ ಮಂಗಳವಾರ ಅಧಿಸೂಚನೆ ಪ್ರಕಟಿಸಿದೆ.
ನಾಗರಿಕ ಸೇವಾಯೇತರ ತಾಂತ್ರಿಕ ಹಾಗೂ ವೃತ್ತಿಪರ ವೃಂದಗಳ ಇಲಾಖಾ ಮುಖ್ಯಸ್ಥರ ಅಧಿಕಾರ ಹಂಚಿಕೆ ಹಾಗೂ ಅಧಿಕಾರಿಗಳ ಬಡ್ತಿ ಸೇವೆಗಳ ಜವಾಬ್ದಾರಿಯನ್ನು ಆಯಾ ಇಲಾಖೆಗಳಿಂದ ಡಿಪಿಎಆರ್‌ಗೆ ವರ್ಗಾಯಿಸಿ ರಾಜ್ಯಪಾಲರು ಮಂಗಳವಾರ ಅಧಿಸೂಚನೆ ಹೊರಡಿಸಿದ್ದಾರೆ. ಇದರಿಂದ ಇನ್ನು ಮುಂದೆ ಎಲ್ಲ ಇಲಾಖೆಗಳ ಮುಖ್ಯಸ್ಥರ ಅಧಿಕಾರ ಹಂಚಿಕೆ, ಬಡ್ತಿ ಮತ್ತಿತರ ಸೇವೆಗಳ ವಿಚಾರದಲ್ಲಿ ಆಯಾ ಇಲಾಖೆ ಸಚಿವರು ಮತ್ತು ಕಾರ್ಯದರ್ಶಿಗಳ ಅಧಿಕಾರ ಮೊಟಕುಗೊಂಡಿದ್ದು, ನೇರವಾಗಿ ಮುಖ್ಯಮಂತ್ರಿಗಳೇ ಇದರ ಜವಾಭ್ದಾರಿ ನೋಡಿಕೊಳ್ಳಲಿದ್ದಾರೆ. ಈವರೆಗೆ ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಕೆಎಎಸ್ ಅಧಿಕಾರಿಗಳ ಬಡ್ತಿ ಮತ್ತಿತರ ವಿಷಯಗಳನ್ನು ಮಾತ್ರ ಡಿಪಿಎಆರ್ ನೋಡಿಕೊಳ್ಳುತ್ತಿತ್ತು.
ಹಿಂದಿನ ಸರಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ೨೦೨೧ರ ನವೆಂಬರ್ ೩೦ರಂದು ಇಲಾಖಾ ಮುಖ್ಯಸ್ಥರ ಬಡ್ತಿ ಮತ್ತಿತರ ವಿಷಯಗಳ ನಿರ್ವಹಣೆಯನ್ನು ಡಿಪಿಎಆರ್‌ನಿಂದ ಆಯಾ ಇಲಾಖೆಗಳಿಗೆ ವಹಿಸಲಾಗಿತ್ತು. ಅಂದಿನ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ೨೦೨೨ರ ಜನವರಿಯಲ್ಲಿ ಸುತ್ತೋಲೆ ಹೊರಡಿಸಿ ಲೋಕಾಯುಕ್ತ ಪ್ರಕರಣ ಎದುರಿಸುತ್ತಿರುವ ಪ್ರಕರಣಗಳಲ್ಲಿ ಮಾತ್ರ ಇಲಾಖಾ ಮುಖ್ಯಸ್ಥರ ಕಡತಗಳನ್ನು ಸಿಎಂ ಕಚೇರಿಗೆ ಸಲ್ಲಿಸಲು ಸೂಚಿಸಿದ್ದರು. ಅಂತಹ ಪ್ರಕರಣ ಬಿಟ್ಟು ಉಳಿದೆಲ್ಲ ಇಲಾಖಾ ಮುಖ್ಯಸ್ಥರ ಬಡ್ತಿ ಹಾಗೂ ಸೇವಾ ವಿಚಾರಗಳನ್ನು ಆಯಾ ಇಲಾಖೆಯೇ ನಿರ್ವಹಣೆ ಮಾಡುತ್ತಿತ್ತು. ಹೀಗಾಗಿ ತಾಂತ್ರಿಕ ಮತ್ತು ವೃತ್ತಿಪರ ಇಲಾಖಾ ಮುಖ್ಯಸ್ಥರ ಸೇವಾ ವಿಷಯಗಳನ್ನು ಆಯಾ ಇಲಾಖೆ ಸಚಿವರು ಮತ್ತು ಕಾರ್ಯದರ್ಶಿಗಳು ನಿರ್ಧರಿಸುತ್ತಿದ್ದರು. ಇದರಿಂದ ಸ್ವಜನಪಕ್ಷಪಾತ, ಅನಗತ್ಯ ವಿಳಂಬ ಹಾಗೂ ಅಕ್ರಮಕ್ಕೆ ದಾರಿಯಾಗಲಿದೆ ಎಂಬ ಆಕ್ಷೇಪ ಆಗಲೇ ವ್ಯಕ್ತವಾಗಿತ್ತು.
ಇದೀಗ ರಾಜ್ಯ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಾರ್ವಜನಿಕ ಸೇವೆಗಳು ಶೀರ್ಷಿಕೆಗೆ ಇಲಾಖಾ ಮುಖ್ಯಸ್ಥರ ದರ್ಜೆಯ ಎಲ್ಲ ಅಧಿಕಾರಿಗಳ ಕೆಲಸ ಹಂಚಿಕೆಯ ಅಧಿಕಾರವನ್ನು ಸೇರ್ಪಡೆ ಮಾಡಲಾಗಿದೆ. ರಾಜ್ಯಪಾಲರು ಈ ಕುರಿತು ಮಂಗಳವಾರ ಅಧಿಸೂಚನೆ ಪ್ರಕಟಿಸಿದ್ದಾರೆ. ಅಧಿಸೂಚನೆಯಲ್ಲಿ ಸರ್ಕಾರದ ಕೆಲಸಗಳ ಹಂಚಿಕೆ ತಿದ್ದುಪಡಿ ನಿಯಮಗಳು ೨೦೨೪ನ್ನು ಅನುಷ್ಠಾನಗೊಳಿಸಿದ್ದು, ಇದರ ಅನ್ವಯ ಡಿಪಿಎಆರ್ ಇಲಾಖೆಯ ಸಾರ್ವಜನಿಕ ಸೇವೆಗಳು ನಿಯಮದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ತಿದ್ದುಪಡಿಯ ಪರಿಣಾಮವೇನು?
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ೧೯೫ ಐಎಎಸ್, ೧೬೧ ಐಪಿಎಸ್, ೧೨೨ ಐಎಫ್‌ಎಸ್, ೧೦೪ ಕೆಎಎಸ್ ಅಧಿಕಾರಿಗಳ ಜತೆಜತೆಗೆ ೧೪ ಇಲಾಖಾ ನಿರ್ದೇಶಕರು, ೫೦ ಮುಖ್ಯ ಎಂಜಿನಿಯರ್‌ಗಳನ್ನು ವಿವಿಧ ಇಲಾಖೆಗಳ ಮುಖ್ಯಸ್ಥರ ಸೇವೆಗಳನ್ನು ಹಂಚಿಕೆ ಮಾಡಲಿದೆ. ಅಂದರೆ ೧೪ ಮಂದಿ ಇಲಾಖಾ ನಿರ್ದೇಶಕರು ಮತ್ತು ೫೦ ಮಂದಿ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಯ ೫೦ ಮುಖ್ಯ ಎಂಜಿನಿಯರ್‌ಗಳ ಕೆಲಸ ನಿಯೋಜನೆ, ಬಡ್ತಿ ಹಾಗೂ ಮತ್ತಿತರ ಸೇವಾ ವಿಷಯಗಳನ್ನು ಡಿಪಿಎಆರ್ ಮಾಡಲಿದೆ. ಆಡಳಿತ ಸುಧಾರಣಾ ಆಯೋಗ ಸೇರಿದಂತೆ ಯಾವುದೇ ಆಯೋಗ ಅಥವಾ ಸಮಿತಿಗಳು ಡಿಪಿಎಆರ್‌ನಿಂದ ಇಲಾಖಾ ಮುಖ್ಯಸ್ಥರ ಹುದ್ದೆ ಕೈಬಿಡುವಂತೆ ಶಿಫಾರಸು ಮಾಡಿರಲಿಲ್ಲವಾದರೂ ಹಿಂದಿನ ಸರಕಾರ ಇದನ್ನು ಬೇರ್ಪಡೆ ಮಾಡಿತ್ತು. ಐಎಎಸ್ ಲಾಬಿ ಈ ವಿಷಯವನ್ನು ಗುಟ್ಟಾಗಿ ಸರ್ಕಾರದ ಮುಂದೆ ಮಂಡಿಸಿ, ಮನವೊಲಿಸುವಲ್ಲಿ ಯಶಸ್ವಿಯಾಗಿದೆ ಎಂಬ ದೂರುಗಳಿದ್ದವು. ಈ ಬಗ್ಗೆ ಇತ್ತೀಚೆಗೆ ಐಎಎಸ್‌ಯೇತರ ಇಲಾಖಾ ಮುಖ್ಯಸ್ಥರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಅಳಲು ತೋಡಿಕೊಂಡಿದ್ದರು.