ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಮ್ಯುನಲ್ ಗೌರ್ನಮೆಂಟ್ ಆಗಿ ಬದಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ಮಂಗಳೂರಿನಲ್ಲಿ ಮೋದಿ ಪ್ರಮಾಣ ವಚನ ಸ್ವೀಕರಿಸುವವೇಳೆಯಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಸರ್ಕಾರದಲ್ಲಿ ಅರಾಜಕತೆ, ಗೂಂಡಾಗಿರಿ, ಹತ್ಯೆಗಳು ಕಣ್ಣಿಗೆ ಕಾಣುತ್ತಿದೆ.ಜನ ಸಾಮಾನ್ಯರ ಬದಲು ಗೂಂಡಾಗಳು ನಿರ್ಭಯರಾಗಿದ್ದಾರೆಂದು ಹೇಳಿದರು.
ರಾಜ್ಯ ಸರ್ಕಾರ ಮತೀಯ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದೆ. ಒಂದಷ್ಟು ಜನ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಯಾವುದೇ ಅನುಮತಿ ಇಲ್ಲದೆ ನಮಾಜ್ ಮಾಡೋಕೆ ಮಸೀದಿ ಇದೆ, ನಮಾಜ್ ಮಾಡೋದು ರಸ್ತೆಯಲ್ಲಿ ಅಲ್ಲವೆಂದು ತಿಳಿಸಿದರು.
ಪೊಲೀಸರು ಸೂಮೋಟೋ ಕೇಸ್ ಹಾಕಿದರೆ, ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ಸರ್ಕಾರ ಅವರ ಮೇಲಿನ ಎಲ್ಲಾ ಕೇಸ್‌ಗಳನ್ನ ವಾಪಸ್ ತೆಗೆದುಕೊಳ್ಳುತ್ತದೆ.ಸರ್ಕಾರ ನೀವು ಬೇಕಾದ್ದು ಮಾಡಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶ ಕೊಡುತ್ತಿದೆ ಎಂದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಜನರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ.ಕಾಂಗ್ರೆಸ್ ನೀತಿ ಗೃಹ ಸಚಿವರನ್ನು ದುರ್ಬಲರನ್ನಾಗಿಸಿದೆಯೋ, ದುರ್ಬಲತೆ ಅವರನ್ನು ಆವರಿಸಿದೆಯೊ ಗೊತ್ತಿಲ್ಲ ಮುಖ್ಯ ಮಂತ್ರಿ ರೇಸ್ ನಲ್ಲಿದ್ದವರು ಸಿಎಂ ಆಗದ ಹತಾಶೆಯಿಂದ ತಮ್ಮ ಸ್ಥಾನವನ್ನು ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲವೋ ಗೊತ್ತಿಲ್ಲವೆಂದರು.
ರಾಜ್ಯದಲ್ಲಿ ಕಂಡು ಕಾಣದಂತೆ, ಕೇಳಿದರು ಕೇಳದಂತೆ ಇರುವ ದುರ್ಬಲ ಗೃಹ ಇಲಾಖೆ ಇದೆ.ರಾಜ್ಯದಲ್ಲಿ ಪೊಲೀಸರ ನೈತಿಕ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.