ಭೋವಿ ನಿಗಮದಲ್ಲಿ ನಕಲಿ ಫಲಾನುಭವಿ ಹಗರಣ

Advertisement

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು
: ಪರಿಶಿಷ್ಟ ಪಂಗಡದ ಸಮುದಾಯದವರ ಬದುಕಿಗೆ ಬೆಳಕಾಗಬೇಕಾಗಿದ್ದ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರದ ದೊಡ್ಡ ರಾಮಾಯಣವೇ ನಡೆದು ಹೋಗಿದ್ದು, ನೇರವಾಗಿ ಖಾತೆಯಿಂದಲೇ ಲೂಟಿ ಮಾಡುವ ಹೈಬ್ರಿಡ್' ಮಾದರಿ ಅವ್ಯವಹಾರ ನಡೆದಿರುವುದು ಇತಿಹಾಸ. ಆದರೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿಸಾಂಪ್ರದಾಯಿಕ’ ಶೈಲಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಹಣ ದೋಚಿರುವ ಆರೋಪ ಕೇಳಿಬಂದಿದೆ.
ಈ ಕುರಿತು `ಸಂಯುಕ್ತ ಕರ್ನಾಟಕ’ ಕ್ಕೆ ಸಮಗ್ರ ದಾಖಲೆಗಳು ಲಭ್ಯವಾಗಿದ್ದು, ಹಗರಣದ ಕುರಿತಂತೆ ಲೋಕಾಯುಕ್ತ, ಸಿಐಡಿ, ರಾಜ್ಯ ಪೊಲೀಸ್ ಸೇರಿದಂತೆ ನಾನಾ ತನಿಖಾ ಸಂಸ್ಥೆಗಳು ಪ್ರತ್ಯೇಕ ಹಗರಣಗಳ ತನಿಖೆ ಕೈಗೊಂಡಿವೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯ ತಡೆಯಾಜ್ಞೆಯನ್ನೂ ನೀಡಿದೆ. ಹೀಗಾಗಿ ನ್ಯಾಯಾಲಯದ ಮುಂದೆ ಚಾಲ್ತಿಯಲ್ಲಿರುವ ಪ್ರಕರಣಗಳಲ್ಲಿ ಕೇಳಿಬಂದಿರುವ ಆರೋಪವನ್ನಷ್ಟೇ ಬಯಲು ಮಾಡಲಾಗುತ್ತಿದೆ.
ಹಗರಣದ ಹೂರಣ ಏನು?: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವನ್ನು ೨೦೧೬ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾಪನೆ ಮಾಡಿದರು. ದಲಿತ ಸಮುದಾಯವಾಗಿರುವ ಭೋವಿ ಜನರ ಬದುಕಿನ ಗುಣಮಟ್ಟ ಸುಧಾರಣೆಗೆ ಉದ್ಯೋಗ, ಕೃಷಿ ಮತ್ತಿತರ ಜೀವನ ನಡೆಯುವ ಮಾರ್ಗ ಕಂಡುಕೊಳ್ಳಲು ಆರ್ಥಿಕ ನೆರವು ಒದಗಿಸುವುದು ಈ ನಿಗಮದ ಉದ್ದೇಶವಾಗಿತ್ತು. ವಾರ್ಷಿಕ ಸರಿಸುಮಾರು ೫೦೦ ಕೋಟಿ ರೂ.ಗಳ ವಹಿವಾಟು ನಡೆಸುವ ಈ ನಿಗಮವು ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ದುರಾಡಳಿತಕ್ಕೆ ತುತ್ತಾಗಿ ಈಗ ದಲಿತರ ಶೋಷಣೆ ನಡೆಯುತ್ತಿದೆ.
ನಿಗಮದಲ್ಲಿ ೨೦೧೯-೨೦ ಹಾಗೂ ೨೦೨೦-೨೧ನೇ ಸಾಲಿನಲ್ಲಿ ಸರಕಾರದ ಮಾರ್ಗಸೂಚಿ ಪಾಲನೆ ಮಾಡದೇ ಸರಿಸುಮಾರು ೧೦೦ ಕೋಟಿ ರೂ.ಗಳನ್ನು ಫಲಾನುಭವಿಗಳ ಹೆಸರಲ್ಲಿ ಅನಾಮಧೇಯ ಖಾತೆಗಳಿಗೆ ಕಡತ, ದಾಖಲೆ ಕಾಪಾಡದೇ ಹಸ್ತಾಂತರ ಮಾಡಲಾಗಿದೆ. ಭೋವಿ ಸಮುದಾಯದ ಜನರಿಗೆ ಸ್ವಯಂ ಉದ್ಯೋಗಕ್ಕೆ ನೇರ ಸಾಲ, ಉದ್ಯಮಶೀಲತಾ ಯೋಜನೆ, ಗಂಗಾಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆಗಳ ಅನುದಾನವನ್ನು ಕನಿಷ್ಠ ನಿಯಮ ಪಾಲಿಸದೇ ಬಳಕೆ ಮಾಡಲಾಗಿದೆ ಎಂಬುದು ಒಟ್ಟು ಆರೋಪ.
ಈ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ತನಿಖೆ ನಡೆಸಲು ಸರಕಾರ ಸೂಚಿಸಿತ್ತು. ಆಯುಕ್ತರು ಎಸ್‌ಸಿಎಸ್‌ಪಿ, ಟಿಎಸ್‌ಪಿ ಕೋಶದ ನಿರ್ದೇಶಕರ ನೇತೃತ್ವದ ತನಿಖಾ ತಂಡ ರಚಿಸಿದ್ದರು. ಈ ತನಿಖಾ ತಂಡವು ನೀಡಿದ ವರದಿ ಆಧರಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ, ಪ್ರಧಾನ ವ್ಯವಸ್ಥಾಪಕ ಡಾ.ಕೆ.ಬಿ.ನಾಗರಾಜಪ್ಪ, ಕಚೇರಿ ಮೇಲ್ವಿಚಾರಕ ಪಿ.ಡಿ.ಸುಬ್ಬಪ್ಪ ಎಂಬುವವರನ್ನು ಅಮಾನತುಗೊಳಿಸಲಾಗಿತ್ತು. ಇವರು ಹೈಕೋರ್ಟ್ ಮೆಟ್ಟಲೇರಿದ್ದು, ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ತಡೆಯಾಜ್ಞೆ ಸಿಕ್ಕಿದೆ.