ತಲಾಖ್: ನನ್ನನ್ನು ಬಿಟ್ಟಿದ್ದಿ, ಬಿಟ್ಟು ಬಿಡು

Advertisement

ಅದು ೨೦೦೦ನೇ ಇಸ್ವಿ, ಡಿಸೆಂಬರ್ ತಿಂಗಳ ಸಂಜೆಯ ಸಮಯ, ಅವಳು ಮಾನಸಿಕವಾಗಿ, ದೈಹಿಕವಾಗಿ ಸೋತು ತನ್ನ ಅಕ್ಕನ ಜೊತೆ ಬಂದಿದ್ದಳು. ಗಂಡ ಎಸಗಿದ ಕೌಟುಂಬಿಕ ಹಿಂಸೆಯಿಂದ ಬೆಂದು ನೊಂದು ಹೋಗಿದ್ದಳು. ಕುರ್ಚಿಯ ಮೇಲೆ ಅಕ್ಕ ತಂಗಿಯರು ತಮ್ಮ ಹಿಜಾಬ್ ತಲೆ ವಸ್ತ್ರವನ್ನು ತೆಗೆದು ಬುರ್ಖಾ ಇರಿಸಿ, ವ್ಯವಸ್ಥಿತವಾಗಿ ಜೋಡಿಸಿಟ್ಟ ಕಾನೂನು ಪುಸ್ತಕ, ಕೇಸ್ ಫೈಲ್ ನೋಡುತ್ತ ಕುಳಿತರು.
ಅಕ್ಕ ಹಲವಾರು ಸಲ ಬೇರೆಯವರ ಸಮಸ್ಯೆಗಳ ಸಲಹೆಗಾಗಿ ಬಂದಿದ್ದಳು. ಮುಸ್ಲಿಂ ಧರ್ಮದ ಇವರ ತಂದೆಗೆ ನಾಲ್ಕು ಜನ ಹೆಣ್ಣುಮಕ್ಕಳು ಪದವೀಧರರು. ಇಬ್ಬರು ಗಂಡು ಮಕ್ಕಳು, ಹೈಸ್ಕೂಲ್ ಶಿಕ್ಷಣ ಮುಗಿಸಿ ಊರಲ್ಲಿ ಮೋಟಾರ್ ಸೈಕಲ್ ರಿಪೇರಿ ಉದ್ಯೋಗ ಮಾಡುತ್ತಾರೆ. ಎಲ್ಲರದು ನಿಖಾಹ ಆಗಿದೆ. ತಂದೆ ತಾಯಿ ಪೈಗಂಬರ್ ವಾಸಿಯಾಗಿದ್ದಾರೆ. ನಮ್ಮ ಹೊಣೆಗಾರಿಕೆ ಏನಿಲ್ಲ, ಅವರ ಬದುಕು ಅವರದು, ನಮ್ಮ ಬದುಕು ನಮ್ಮದು ಎನ್ನುವ ನಿರಾಳ ಭಾವ, ಸಹೋದರರದು. ಅಕ್ಕನ ಗಂಡ ಮಿಲ್ಟ್ರಿಯಲ್ಲಿ ನೌಕರಿ ಮಾಡುತ್ತಿದ್ದು, ಅವಳು ಶಿಕ್ಷಣ ಸಂಸ್ಥೆಯಲ್ಲಿ ಕ್ಲರ್ಕ್ ನೌಕರಿ ಮಾಡುತ್ತ ತನ್ನ ಮೂವರು ಮಕ್ಕಳ ಜೊತೆ ಜೀವನ ನಡೆಸಿದ್ದಾಳೆ. ಅಕ್ಕಳಾಗಿ ಉಳಿದ ತಂಗಿಯರಿಗೆ ತಂದೆ ತಾಯಿ ಸ್ಥಾನದಲ್ಲಿ ನಿಂತಿದ್ದಾಳೆ. ತಂಗಿಯರಿಗೆ ತವರು ಮನೆ ಅಂದರೆ ಅಕ್ಕನ ಮನೆ. ಅಕ್ಕ ಎಂದರೆ ಭರವಸೆ, ರಕ್ಷಣೆ ಆಸರೆ.
ಹೇಳ್ರಿ ಮೇಡಂ ಎಂದು ಅಕ್ಕನನ್ನು ಮಾತನಾಡಿಸಿದೆ. ಸರ್ ನನ್ನ ತಂಗಿಯದು ಸಮಸ್ಯೆ ಇದೆ, ಅವಳೇ ಹೇಳುತ್ತಾಳೆ ಕೇಳಿ ಎಂದು, ತಂಗಿಗೆ ಏನೂ ಭಯಪಡಬೇಡ ಎಲ್ಲವನ್ನು ಹೇಳು. ವಕೀಲರಿಗೆ, ಡಾಕ್ಟರಿಗೆ ನಮ್ಮ ಸಮಸ್ಯೆ ಯಾವುದು ಮುಚ್ಚಿಡದೆ ಹೇಳಿದರೆ ಅವರು ಸೂಕ್ತ ಪರಿಹಾರ ನೀಡುತ್ತಾರೆ ಎಂದು ಹೇಳಿ ನನ್ನೆಡೆಗೆ ನೋಡಿದಳು. ಹೌದು ಎನ್ನುವಂತೆ ತಲೆ ಅಲ್ಲಾಡಿಸಿ, ನನ್ನ ಮಾತು ನೀವೇ ಪ್ರಾರಂಭಿಸಿದ್ದೀರಿ ಎನ್ನುವಂತೆ ಮುಗುಳುನಗೆ ಬೀರಿದೆ. ತಂಗಿಗೆ ಹೇಳಿರಿ ಅನ್ನುವಂತೆ ದೃಷ್ಟಿ ಬೀರಿ ಮಾತು ಕೇಳಲು ಕುಳಿತೆ.
ನಾನು ಕನ್ನಡ ಮಾಧ್ಯಮದಲ್ಲಿ ಬಿಎ ಡಿಗ್ರಿ ಓದಿರುವೆ. ಮುಂದೆ ಬಿಎಡ್ ಡಿಗ್ರಿ ಮುಗಿಸಿ, ಹೈಸ್ಕೂಲ್ ಟೀಚರ್ ಆಗುವ ಆಸೆ ಇತ್ತು. ನಮ್ಮ ಅಪ್ಪಾ ಗಂಡು ಹುಡುಕಲು ಪ್ರಾರಂಭಿಸಿದರು. ನನ್ನ ಆಸೆ ಹೇಳಿದೆ. ಇನ್ನೂ ನಿನ್ನ ಇಬ್ಬರು ತಂಗಿಯರ, ತಮ್ಮಂದಿರ ನಿಖಾಹ ಮಾಡಬೇಕು. ನೀನು ಹೆಚ್ಚಿಗೆ ಕಲಿತರೆ, ನಮ್ಮ ಸಮಾಜದಲ್ಲಿ ಕಲಿತ ವರಗಳು ಕಡಿಮೆ ಎಂಬ ಸಬೂಬು ಹೇಳಿ ಒಪ್ಪಿಸಿದರು. ಜಿಲ್ಲಾ ಸ್ಥಳದ ವರನೊಬ್ಬ ನೋಡಲು ಬಂದನು. ಡಿಪ್ಲೊಮಾ ಮೆಕ್ಯಾನಿಕಲ್ ಇಂಜಿನಿಯರ್ ಅಂತ ಪರಿಚಯ ಮಾಡಿಕೊಂಡನು. ಬಂದವನು ಸುಂದರನಿದ್ದ, ಇರುವಿಕೆಯಿಂದ ಧಾರ್ಮಿಕನು ಅನಿಸಿತು. ಅವನು ಒಪ್ಪಿಗೆ ಸೂಚಿಸಿದಾಗ ಬೇಡ ಅನ್ನುವ ಹಾಗೆ ಇರಲಿಲ್ಲ, ಒಪ್ಪಿಗೆ ಸೂಚಿಸಿದೆ. ಅಪ್ಪಾಗೆ ನಾನು ಶಿಕ್ಷಣ ಮುಂದುವರಿಸುವದನ್ನು ತಿಳಿಸಲು ಹೇಳು ಎಂದು ಹೇಳಿದೆ, ಈಗಾಗಲೇ ಹೇಳಿದ್ದೇನೆ ಎಂದು ಹೇಳಿದರು. ನನಗೆ ಆದ ಸಂತೋಷ ಅಷ್ಟಿಷ್ಟಲ್ಲ, ಜನ್ನತ್ ಸಮೀಪ ಇತ್ತು. ನಿಖಾಹ ಸಮಯದಲ್ಲಿ ಧಾರ್ಮಿಕ ಪದ್ಧತಿಯಂತೆ ಮೌಲ್ವಿ ನಿಖಾಹ ಕಬೂಲ ಹೈ? ಎಂದು ಮೂರು ಸಲ ಕೇಳಿದಾಗ ಜೋರಾಗಿ ಕಬೂಲ ಹೈ ಎಂದು ಸಂತೋಷದಿಂದ ಹೇಳಿದಾಗ ಅಕ್ಕ ಪ್ರೀತಿಯಿಂದ ತಲೆಗೆ ಮೊಟಕಿದಳು. ಗಂಡನ ಮನೆಗೆ ಬಂದೆ. ಮನೆಯಲ್ಲಿ ಅತ್ತೆ ಮಾವ ನಾನು ನನ್ನ ಗಂಡ ಅಷ್ಟೆ. ಸಾಂಪ್ರದಾಯಿಕ ಮುಸ್ಲಿಂ ಕುಟುಂಬ. ಐದು ಹೊತ್ತು ನಮಾಜು. ಹೊಸದಾಗಿ ನಿಖಾಹ್ ಆಗಿ ಬಂದ ಜೋಡಿಗೆ ಮಾಡಬೇಕಾದ ಪದ್ಧತಿಗಳು ಮುಗಿದವು. ಅತ್ತೆ ಮಾವ ಹೊರಟು ನಿಂತರು ಎಲ್ಲಿಗೆ ಅಂತ ಕೇಳಿದೆ. ನಮ್ಮ ಮನೆಗೆ ಅಂದರು. ಯಾಕೆ ಅಂದೆ. ನಿನ್ನ ಗಂಡನನ್ನು ಕೇಳು ಎಂದು ಉತ್ತರಿಸಿದರು. ತಿಳಿಯಲಿಲ್ಲ ಗಲಿಬಿಲಿಗೊಂಡೆ. ದಿನ ಕಳೆದ ಹಾಗೆ ಗೊತ್ತಾಯಿತು. ಗಂಡ ಡಿಪ್ಲೊಮಾ ಇಂಜಿನಿಯರ್ ಅಲ್ಲ. ಏನೂ ಕೆಲಸ ಮಾಡುವುದಿಲ್ಲ. ಕುರಾನ್ ಪಠಣ, ನಮಾಜ್ ಮಾಡುವುದಿಲ್ಲ. ಗಾಂಜಾ ಸೇವನೆ, ಶೆರೆ ಕುಡಿಯುವ ಹವ್ಯಾಸಕ್ಕೆ ಬಿದ್ದು ಹರಾಮಾದವನು. ಅತ್ತೆ, ಮಾವನಿಗೆ ಕೇಳಿದೆ. ಅವನು ಎಲ್ಲ ಮೀರಿದ್ದಾನೆ, ಅವನ ಜೊತೆ ಇದ್ದರೆ ತಮ್ಮನ್ನು ಕೊಂದು ಬಿಡುತ್ತಾನೆಂದು ದೂರ ಇದ್ದೇವೆ. ನಿಖಾಹ್ ವೇಳೆಯಲ್ಲಿ ಅವನು ಹೇಳಿದಂತೆ ನಟಿಸಿದ್ದೇವೆ. ಇಲ್ಲದಿದ್ದರೆ ನಮ್ಮನ್ನು ಬಿಡುತ್ತಿರಲಿಲ್ಲ ಎಂದು ಕಣ್ಣೀರು ಹಾಕಿದರು. ನೀನು ಭಯಪಡಬೇಡ, ನಿನ್ನ ದಿನ ನಿತ್ಯದ ಜೀವನಕ್ಕೆ ನಾವೇ ಹಣ ಕೊಡುತ್ತೇವೆ ಎಂದು ಭರವಸೆ ನೀಡಿದರು. ದಿನಕಳೆದಂತೆ ಅವನ ವರ್ತನೆ ಅನಾವರಣಗೊಂಡಿತು. ಅಕ್ಕನಿಂದ ಹಣ ತರಲು ಒತ್ತಾಯಿಸಿದ. ಸುಮ್ಮನೆ ನನ್ನ ಮೇಲೆ ಅಪವಾದ ಹೊರಿಸಿ ಹೊಡೆಯುತ್ತಿದ್ದ. ಮನೆಯಲ್ಲೂ ಬುರ್ಖಾ ಧರಿಸುವಂತೆ ಪೀಡಿಸುತ್ತಿದ್ದ. ಆಕಸ್ಮಿಕ ಮಿಲನದಿಂದ ಗಂಡು ಮಗುವಾಯಿತು. ಅಕ್ಕ ಬಂದು ಬಾಣಂತನ ಮಾಡಿದಳು. ಎಲ್ಲವನ್ನು ಅಕ್ಕನಿಗೆ ಹೇಳಿದೆ. ಸಮಾಧಾನದಿಂದ ಇರಲು ಹೇಳಿದಳು. ವಯಸ್ಸಾದ ಅತ್ತೆ ಮಾವ ದುಡಿದು ಹಣ ಕೊಡುವುದು ನನಗೆ ಸಹಿಸಲು ಆಗಲಿಲ್ಲ. ಕೈಯಲ್ಲಿ ಡಿಗ್ರಿ ಸರ್ಟಿಫಿಕೇಟ್ ಇತ್ತು. ಪ್ರೈವೇಟ್ ಸಂಸ್ಥೆಯಲ್ಲಿ ಚಿಕ್ಕ ನೌಕರಿ ದೊರೆಯಿತು. ಕೆಲಸಕ್ಕೆ ಹೋಗುವಾಗ ಗೊತ್ತಾಗದ ಹಾಗೆ ಬೆನ್ನು ಹತ್ತಿ ಅನುಮಾನಿಸುತ್ತಿದ್ದ. ಕಸಿವಿಸಿ ಆಗುತ್ತಿತ್ತು, ಸಹಿಸಿದೆ. ಒಂದು ದಿನ ಕೆಲಸ ಮುಗಿಸಿ ಸಹೋದ್ಯೋಗಿ ಸಹೋದರನ ಜೊತೆ ಹೊರಗೆ ಬಂದೆ. ಅಶ್ಲೀಲವಾಗಿ ಬೈದು ಕಲ್ಲಿನಿಂದ ತಲೆಗೆ ಜಜ್ಜಿ ಗಾಯಗೊಳಿಸಿದ. ದವಾಖಾನೆ ಸೇರಿ ಚಿಕಿತ್ಸೆ ಪಡೆದೆ. ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟೆ, ಅರೆಸ್ಟ್ ಆದ. ಅತ್ತೆ ಮಾವರಿಗೆ ಅನಿವಾರ್ಯ ಜಾಮೀನಿನ ಮೇಲೆ ಬಿಡಿಸಿ ಹೊರತಂದರು. ಈ ಸೈತಾನ್ ಜೊತೆ ಬದುಕಬೇಡ. ತಲಾಖ್ ಕೊಡಿಸುತ್ತೇವೆಂದು ದುಃಖಿತರಾಗಿ ಹೇಳಿದರು. ಇಸ್ಲಾಂ ಪದ್ಧತಿಯಂತೆ ಮೂರು ಸಲ ತಲಾಖ್ ಹೇಳಿದ. ಇದನ್ನು ಸಾಕ್ಷೀಕರಿಸಲು ತಲಾಖ್ ಪತ್ರ ಬರೆದುಕೊಟ್ಟ. ನೂರಾರು ವೈವಾಹಿಕ ಆಸೆ ಇಟ್ಟುಕೊಂಡು ಬಂದವಳ ಕನಸು ನುಚ್ಚು ನೂರಾಯಿತು. ಮಗನನ್ನು ಕರೆದುಕೊಂಡು ಅಕ್ಕನ ಮನೆಗೆ ಬಂದೆನು. ಕೆಟ್ಟ ಕನಸು ಮರೆಯಲು ಸಮಯ ತೆಗೆದುಕೊಂಡಿತು. ಬಿಎಡ್ ಶಿಕ್ಷಣ ಪಡೆದೆ. ಹೈಸ್ಕೂಲ್ ಶಿಕ್ಷಕಿಯಾಗಿ ನೇಮಕಗೊಂಡೆನು. ಒಂದು ದಿನ ನಾನು ಶಾಲೆಯಲ್ಲಿ ಇರುವಾಗ ಪ್ರತ್ಯಕ್ಷನಾದ. ಕೆಟ್ಟ ಚಟಗಳಿಂದ ವಿರೂಪನಾಗಿದ್ದ. ನಾನು ನಿನ್ನನ್ನು ಬಿಡುವುದಿಲ್ಲ, ನಿನ್ನ, ಮಗನ ಜೊತೆ ಇರುತ್ತೇನೆ ಎಂದು ಕಿರಿಕಿರಿ ಮಾಡಿದ. ಬೈದು ಕಳಿಸಿದೆ. ಎಲ್ಲರ ಮುಂದೆ ನನ್ನ ಹೆಂಡತಿ ಎಂದು ಹೇಳುತ್ತಾನೆ. ಅವನಿಂದ ಜೀವನ ಅಸಹನೀಯವಾಗಿದೆ. ಅವನಿಂದ ಮುಕ್ತಿ ಕೊಡಿಸಿ” ಎಂದು ಕಣ್ಣೀರು ಸುರಿಸಿದಳು.
ವಾದಿ/ಕಕ್ಷಿದಾರಳು, ಪ್ರತಿವಾದಿ(ಗಂಡ)ಯಿಂದ ತಲಾಖ್‌ಗೆ ಪತ್ನಿ/ವಿಚ್ಛೇದಿತ ಪತ್ನಿ ಎಂದು ಘೋಷಿಸಲು ಮತ್ತು ಪ್ರತಿವಾದಿಯ ಖಾಸಗಿ ಜೀವನದಲ್ಲಿ ಯಾವುದೇ ಹಸ್ತಕ್ಷೇಪ ಮಾಡದಂತೆ ಶಾಶ್ವತ ತಡೆಯಾಜ್ಞೆ ಆದೇಶ ಮಾಡಲು ಸಿವಿಲ್ ನ್ಯಾಯಾಲಯದಲ್ಲಿ ಘೋಷಣೆ ಮತ್ತು ಶಾಶ್ವತ ತಡೆಯಾಜ್ಞೆ ಪ್ರಾರ್ಥಿಸಿ ದಾವೆ ದಾಖಲಿಸಿದೆ. ಪ್ರತಿವಾದಿ ತನ್ನ ವಕೀಲರ ಮುಖಾಂತರ ಹಾಜರಾದನು. ತನ್ನ ಕೈಫಿಯತ್/ರಿಟನ್ ಸ್ಟೇಟಮೆಂಟ್ ದಾಖಲಿಸಿ, ತನ್ನ ಹಾಗೂ ವಾದಿಯ ನಿಖಾಹ್ ಕುರಾನ್ ತತ್ವದಂತೆ ಆಗಿರುವುದಿಲ್ಲ ಈ ದಾವೆ ವಿಚಾರಣೆ ಅಧಿಕಾರ ಈ ನ್ಯಾಯಾಲಯಕ್ಕೆ ಇಲ್ಲ, ವಾದಿ ತನ್ನ ಹೆಂಡತಿ ಎಂದು ಪ್ರತಿವಾದಿಸಿದನು.
೨೦೦೪ರಲ್ಲಿ ನ್ಯಾಯಾಲಯವು, ವಾದಿ ಪ್ರತಿವಾದಿಯ ಮೌಖಿಕ, ಲಿಖಿತ ದಾಖಲೆ, ವಕೀಲರ ವಾದವನ್ನು ಆಲಿಸಿ, ವಾದಿಯಳ ದಾವೆಯನ್ನು ಡಿಕ್ರಿಗೊಳಿಸಿ, ವಾದಿ ಪ್ರತಿವಾದಿಯಿಂದ ತಲಾಖ್‌ಕೊಂಡ ಪತ್ನಿ ಎಂದು ಘೋಷಿಸಿ, ಪ್ರತಿವಾದಿ, ವಾದಿಯಳ ಖಾಸಗಿ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶಿಸಿ ಶಾಶ್ವತ ತಡೆಯಾಜ್ಞೆ ಆದೇಶ ಮಾಡಿತು. ವಾದಿ, ಸೈತಾನ್ ತನ್ನ ಜೀವನದಿಂದ ತೊಲಗಿತೆಂದು ನಿಟ್ಟಿಸಿರುಬಿಟ್ಟಳು.
೨೦೧೭ ಭಾರತದ ಸರ್ವೋಚ್ಚ ನ್ಯಾಯಾಲಯ ಮುಸ್ಲಿಂರಲ್ಲಿಯ ಆತುರದ ಟ್ರಿಪಲ್ ತಲಾಖ್/ ತ್ವರಿತ ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ತೀರ್ಪು ನೀಡಿತು. ಇದರ ಫಲವಾಗಿ, ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕು ಸಂರಕ್ಷಣೆ) ಅಧಿನಿಯಮ ೨೦೧೯.೧/ ೧/ ೮ /೨೦೧೯ ರಂದು ಜಾರಿಗೆ ಬಂದಿತು. ಈ ಕಾನೂನಿನಲ್ಲಿ, ಮೌಖಿಕ, ಲಿಖಿತ, ಇಲೆಕ್ಟ್ರಾನಿಕ್ ವಿಧಾನ, ಎಸ್.ಎಂ.ಎಸ್., ವಾಟ್ಸಾಪ್ ಮೂಲಕ ಕೊಡುವ ತಲಾಖ್ ಕಾನೂನುಬಾಹಿರ ಅನೂರ್ಜಿತವಾಗುತ್ತದೆ. ಅಲ್ಲದೆ ಪತಿಗೆ ೩ ವರ್ಷ ಜೈಲು ಶಿಕ್ಷೆ ಇದೆ. ಮಹಿಳೆಗೆ ತನ್ನ, ಮತ್ತು ಮಕ್ಕಳಿಗೆ ಜೀವನಾಂಶ ಕೇಳಲು ಹಕ್ಕು ಇದೆ.