ಸಾಗರ ಆಧಿಪತ್ಯ; ಸಮತಕ್ಕಡಿಯಲ್ಲಿ ಭಾರತ, ಚೀನಾ

Advertisement

ಏಷ್ಯಾದಲ್ಲಿ ಹೆಚ್ಚುತ್ತಿರುವ ಚೀನಾದ ನೌಕಾಪಡೆಗೆ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳು ತಮ್ಮ ನೌಕಾ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ. ಇಲೆಕ್ಟ್ರೋಮ್ಯಾಗ್ನೆಟಿಕ್ ಕ್ಯಾಟಪುಲ್ಟಗಳನ್ನು ಬಳಸಿ ವಿಮಾನಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿರುವ ನೂತನ ವಿಮಾನವಾಹಕ ನೌಕೆ ‘ಫುಜಿಯಾನ್’ ಅನ್ನು ಚೀನಾ ಪರಿಚಯಿಸಿದ ಬಳಿಕ, ಇತರ ದೇಶಗಳು ತಮ್ಮ ನೌಕಾ ಸೇನೆಗಳನ್ನು ಅಭಿವೃದ್ಧಿ ಪಡಿಸುತ್ತಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿಮಾನವಾಹಕ ನೌಕೆಗಳಲ್ಲಿರುವ ಇಲೆಕ್ಟ್ರೋಮ್ಯಾಗ್ನೆಟಿಕ್ ಕ್ಯಾಟಾಪುಲ್ಟಗಳು ವಿಮಾನಗಳನ್ನು ಹಾರಿಸಲು ಶಕ್ತಿಶಾಲಿ ಅಯಸ್ಕಾಂತಗಳು ಮತ್ತು ವಿದ್ಯುಚ್ಛಕ್ತಿಯನ್ನು ಬಳಸುತ್ತವೆ. ಇದನ್ನು ಅರ್ಥೈಸಿಕೊಳ್ಳಲು ಒಂದು ಬೃಹತ್ ಕವೆಗೋಲನ್ನು ಕಲ್ಪಿಸಿಕೊಳ್ಳಿ. ಆದರೆ, ಅದರ ರಬ್ಬರ್ ಬ್ಯಾಂಡ್‌ಗಳ ಬದಲಿಗೆ, ಇಲ್ಲಿ ಅಯಸ್ಕಾಂತೀಯ ಬಲವನ್ನು ಬಳಸಿ ವಿಮಾನವನ್ನು ಅಸಾಧಾರಣ ವೇಗ ತಲುಪುವಂತೆ ಮಾಡಲಾಗುತ್ತದೆ. ಈ ತಂತ್ರಜ್ಞಾನ ವಿಮಾನಗಳನ್ನು ಹೆಚ್ಚು ವೇಗವಾಗಿ, ಸುರಕ್ಷಿತವಾಗಿ ಮತ್ತು ದಕ್ಷವಾಗಿ ಉಡಾವಣೆಯಾಗುವಂತೆ ಮಾಡುತ್ತದೆ.
ಫುಜಿಯಾನ್ ಮತ್ತು ಚೀನಾದ ನೌಕಾಬಲ
ಚೀನಾದ ಬಳಿ ಈಗ ಲಿಯಾವೊನಿಂಗ್ ಮತ್ತು ಶಾನ್‌ಡಾಂಗ್ ಎಂಬ ಎರಡು ವಿಮಾನವಾಹಕ ನೌಕೆಗಳಿವೆ. ಇವೆರಡೂ ನೌಕೆಗಳು ವಿಮಾನಗಳ ನೆಗೆತಕ್ಕೆ ಸಾಂಪ್ರದಾಯಿಕವಾದ ಸ್ಕೈ ಜಂಪ್ ರ‍್ಯಾಂಪ್ ಬಳಸುತ್ತಿದ್ದು, ೬೦,೦೦೦ ಟನ್ ತೂಕದ ನೌಕೆಗಳಾಗಿವೆ.
ಸ್ಕೈ ಜಂಪ್ ರ‍್ಯಾಂಪ್ ಎನ್ನುವುದು ವಿಮಾನಗಳ ಹಾರಾಟಕ್ಕಾಗಿ ನಿರ್ಮಿಸಿರುವ ಬಾಗಿದ ವೇದಿಕೆಯಾಗಿದ್ದು, ವಿಮಾನಗಳಿಗೆ ಮೇಲ್ಮುಖ ಉತ್ತೇಜನ ನೀಡಿ, ಕಡಿಮೆ ಸ್ಥಳಾವಕಾಶದಲ್ಲಿ ಟೇಕಾಫ್ ನಡೆಸುವಂತೆ ಮಾಡುತ್ತದೆ.
ಇತ್ತೀಚೆಗೆ ಚೀನಾ ಹೊಸದಾದ, ಹೆಚ್ಚು ಆಧುನಿಕವಾದ ಫುಜಿಯಾನ್ ಎಂಬ ವಿಮಾನವಾಹಕ ನೌಕೆಯನ್ನು ನೌಕಾ ಸೇನೆಗೆ ಸೇರ್ಪಡೆಗೊಳಿಸಿತು. ೮೦,೦೦೦ ಟನ್ ತೂಕ ಹೊಂದಿರುವ ಈ ನೌಕೆ, ಭಾರತ ಮತ್ತು ಜಪಾನ್‌ಗಳು ಹೊಂದಿರುವ ಯಾವುದೇ ವಿಮಾನವಾಹಕ ನೌಕೆಗಿಂತ ಬೃಹತ್ತಾಗಿದೆ. ಫುಜಿಯಾನ್‌ನಲ್ಲಿ ವಿಮಾನಗಳ ಉಡಾವಣೆಗೆ ಮೂರು ಇಲೆಕ್ಟ್ರೋಮ್ಯಾಗ್ನೆಟಿಕ್ ಕ್ಯಾಟಾಪುಲ್ಟ್ಗಳಿವೆ. ಫುಜಿಯಾನ್ ನೌಕೆ ಜೆ-೧೫ ಯುದ್ಧ ವಿಮಾನಗಳು ಸೇರಿದಂತೆ ಗರಿಷ್ಠ ೭೦ ವಿಮಾನಗಳನ್ನು ಒಯ್ಯಬಲ್ಲದು.
ಯುಕೆ, ಫ್ರಾನ್ಸ್ ಮತ್ತು ಭಾರತ ನಿರ್ಮಿಸಿರುವ ವಿಮಾನವಾಹಕ ನೌಕೆಗಳಿಗಿಂತ ಸಾಕಷ್ಟು ದೊಡ್ಡದಾಗಿದ್ದರೂ, ಫುಜಿಯಾನ್ ಸಾಂಪ್ರದಾಯಿಕ ಇಂದನವನ್ನು ಬಳಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕಾದ ನೌಕಾಪಡೆಯ ಎಲ್ಲ ವಿಮಾನವಾಹಕ ನೌಕೆಗಳು, ಫ್ರಾನ್ಸ್ನ ಚಾರ್ಲ್ಸ್ ಡಿ ಗಾಲ್ ವಿಮಾನವಾಹಕ ನೌಕೆಗಳು ಪರಮಾಣು ಚಾಲಿತ ನೌಕೆಗಳಾಗಿವೆ.
ಚೀನಾ ೨೦೩೫ರ ವೇಳೆಗೆ ಆರು ವಿಮಾನವಾಹಕ ನೌಕೆಗಳನ್ನು ಹೊಂದುವ ಗುರಿ ಹಾಕಿಕೊಂಡಿದ್ದು, ಆ ಮೂಲಕ ಚೀನಾದ ನೌಕಾ ಸೇನೆ ೧೧ ವಿಮಾನವಾಹಕ ನೌಕೆಗಳನ್ನು ಹೊಂದಿರುವ ಅಮೆರಿಕಾದ ನಂತರ, ಜಾಗತಿಕವಾಗಿ ಕಾರ್ಯಾಚರಣೆ ನಡೆಸಬಲ್ಲ ಎರಡನೇ ನೌಕಾಪಡೆಯಾಗಲಿದೆ.
ಚೀನಾದ ಆಕ್ರಮಣಕಾರಿ ಪ್ರವೃತ್ತಿ ಏಷ್ಯಾದ ರಾಷ್ಟ್ರಗಳ ಮೇಲೆ ತಮ್ಮ ನೌಕಾ ಸಾಮರ್ಥ್ಯವನ್ನು ವೃದ್ಧಿಸುವಂತೆ ಒತ್ತಡ ಹೇರುತ್ತಿದೆ ಎಂದು ಭಾರತೀಯ ನೌಕಾ ಸೇನೆಯ ನಿವೃತ್ತ ಅಧಿಕಾರಿ ಸಿ ಉದಯ್ ಭಾಸ್ಕರ್ ಹೇಳಿದ್ದಾರೆ.
ಭಾರತವೂ ಸೇರಿದಂತೆ, ಏಷ್ಯಾದ ವಿವಿಧ ದೇಶಗಳು ಚೀನಾವನ್ನು ಆತಂಕದಿಂದಲೇ ಗಮನಿಸುತ್ತಿವೆ. ಪ್ರಸ್ತುತ ಚಿತ್ರಣವನ್ನು ಬದಲಾಯಿಸಲು ಚೀನಾ ನಡೆಸುವ ಯಾವುದೇ ಪ್ರಯತ್ನವನ್ನು ಜಗತ್ತು ಅಪಾಯಕಾರಿ ಎಂದು ಪರಿಗಣಿಸುವ ಸಾಧ್ಯತೆಗಳಿವೆ ಎಂದು ಭಾಸ್ಕರ್ ಹೇಳಿದ್ದಾರೆ.
ಭಾರತದ ನೌಕಾ ಸಾಮರ್ಥ್ಯದ ಬಲವರ್ಧನೆ
ಕಳೆದ ತಿಂಗಳು ಮಾತನಾಡಿದ್ದ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಭಾರತ ಶೀಘ್ರವಾಗಿ ಮೂರನೇ ವಿಮಾನವಾಹಕ ನೌಕೆಯನ್ನು ನಿರ್ಮಿಸಲಿದೆ ಎಂದಿದ್ದರು. ಚೀನಾದ ನೌಕಾ ಸಾಮರ್ಥ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ನೌಕಾ ಸೇನೆಯೂ ಅಭಿವೃದ್ಧಿ ಸಾಧಿಸುವುದು ಅನಿವಾರ್ಯವಾಗಿದ್ದು, ಮೂರನೇ ವಿಮಾನವಾಹಕ ನೌಕೆಯ ನಿರ್ಮಾಣ ಸೂಕ್ತ ನಿರ್ಧಾರ ಎಂದು ವಿಶ್ಲೇಷಕರು ಭಾವಿಸಿದ್ದಾರೆ.
ಭಾರತೀಯ ನೌಕಾ ಸೇನೆ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಐಎನ್‌ಎಸ್ ವಿಕ್ರಾಂತ್ ಎಂಬ ಎರಡು ೪೫,೦೦೦ ಟನ್ ತೂಕದ ವಿಮಾನವಾಹಕ ನೌಕೆಗಳನ್ನು ಹೊಂದಿದೆ. ಇವೆರಡೂ ನೌಕೆಗಳು ಸಾಂಪ್ರದಾಯಿಕ ಇಂಧನ ಚಾಲಿತವಾಗಿದ್ದು, ವಿಮಾನಗಳ ಹಾರಾಟಕ್ಕೆ ನೆರವಾಗಲು ಸ್ಕೈ ಜಂಪ್ ರ‍್ಯಾಂಪ್ ಹೊಂದಿವೆ. ಭಾರತೀಯ ನಿರ್ಮಾಣದ ಮೊದಲ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಾಂತ್ ಅನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದರೆ, ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯನ್ನು ಭಾರತ ರಷ್ಯಾದಿಂದ ಖರೀದಿಸಿದ್ದು, ಅದು ೨೦೧೪ರಿಂದ ಸೇವೆ ಸಲ್ಲಿಸುತ್ತಿದೆ.
ಐಎನ್‌ಎಸ್ ವಿಕ್ರಾಂತ್ ಮಿಗ್-೨೯ಕೆ ಯುದ್ಧ ವಿಮಾನಗಳು, ಕಾಮೊವ್-೩೧ ಹೆಲಿಕಾಪ್ಟರ್‌ಗಳು, ಹಾಗೂ ಎಂಎಚ್-೬೦ಆರ್ ಬಹುಪಾತ್ರದ ಹೆಲಿಕಾಪ್ಟರ್‌ಗಳು ಸೇರಿದಂತೆ ಬಹುತೇಕ ೩೦ ವಿಮಾನಗಳನ್ನು ಒಯ್ಯಬಲ್ಲದು. ವಿಕ್ರಾಂತ್ ಸ್ವದೇಶೀ ನಿರ್ಮಾಣದ ಅಡ್ವಾನ್ಸ್ಡ ಲೈಟ್ ಹೆಲಿಕಾಪ್ಟರ್‌ಗಳು ಮತ್ತು ನೌಕಾಪಡೆಯ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟಗಳನ್ನೂ ಬೆಂಬಲಿಸುತ್ತದೆ.
ಭಾರತದ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಮಿಗ್-೨೯ಕೆ ಯುದ್ಧ ವಿಮಾನಗಳಿಲ್ಲದಿರುವುದರಿಂದ, ೨೯ ರಫೇಲ್-ಎಂ ಯುದ್ಧ ವಿಮಾನಗಳ ಖರೀದಿಗಾಗಿ ಫ್ರಾನ್ಸ್ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಅದರೊಡನೆ, ಭಾರತ ತನ್ನ ಸ್ವಂತ ಅವಳಿ ಇಂಜಿನ್, ಡೆಕ್ ಆಧಾರಿತ ಯುದ್ಧ ವಿಮಾನವನ್ನು ಅಭಿವೃದ್ಧಿ ಪಡಿಸುತ್ತಿದೆ.
ಐಎನ್‌ಎಸ್ ವಿಕ್ರಮಾದಿತ್ಯ ೨೬ ಮಿಗ್-೨೯ಕೆ ಯುದ್ಧ ವಿಮಾನಗಳು ಮತ್ತು ೧೦ ಕಾಮೊವ್ ಹೆಲಿಕಾಪ್ಟರ್‌ಗಳು ಸೇರಿದಂತೆ, ೩೬ ವಿಮಾನಗಳನ್ನು ಒಯ್ಯಬಲ್ಲದು. ಕಾಮೊವ್ ಹೆಲಿಕಾಪ್ಟರ್‌ಗಳು ಆಧುನಿಕ ಇಲೆಕ್ಟಾçನಿಕ್ ಎಚ್ಚರಿಕೆಗೆ ಮತ್ತು ಸಬ್‌ಮರೀನ್ ವಿರೋಧಿ ಸಮರಕ್ಕೆ ಬಳಕೆಯಾಗುತ್ತವೆ.
ನೌಕಾ ಸೇನಾ ಮುನ್ನೆಚ್ಚರಿಕೆ
ಜಪಾನ್ ಮತ್ತು ದಕ್ಷಿಣ ಕೊರಿಯಾಗಳು ಶಾಂತಿಯುತ ಸಹಬಾಳ್ವೆಗಾಗಿ ಚೀನಾ ಜೊತೆ ವ್ಯವಹರಿಸಲು ಮಾರ್ಗೋಪಾಯಗಳನ್ನು ನೋಡುತ್ತಿವೆ ಎಂದು ನವದೆಹಲಿಯ ಸೊಸೈಟಿ ಫಾರ್ ಪಾಲಿಸಿ ಸ್ಟಡೀಸ್ ಸಂಸ್ಥೆಯ ನಿರ್ದೇಶಕರು ಮತ್ತು ನ್ಯಾಷನಲ್ ಮಾರಿಟೈಮ್ ಫೌಂಡೇಶನ್ ಗೌರವ ಸದಸ್ಯರೂ ಆಗಿರುವ ಭಾಸ್ಕರ್ ಅವರು ವಿವರಿಸಿದ್ದಾರೆ.
ಒಂದು ವೇಳೆ ಯುದ್ಧವೊಂದರಲ್ಲಿ ಪಾಲ್ಗೊಳ್ಳಬೇಕಾಗಿ ಬಂದರೆ, ತಮ್ಮ ನೌಕಾ ಸೇನೆಗಳು ವಿಮೆಯ ರೀತಿಯಲ್ಲಿ ನೆರವಾಗಲಿವೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನ್ ಭಾವಿಸಿವೆ. ಅಂದರೆ, ಅವುಗಳು ಮುನ್ನೆಚ್ಚರಿಕೆಯ ರೀತಿಯಲ್ಲಿ ತಮ್ಮ ನೌಕಾ ಸೇನೆಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಭವಿಷ್ಯದಲ್ಲಿ ಎದುರಾಗಬಲ್ಲ ಚಕಮಕಿಗಳಿಗೆ ಸಿದ್ಧವಾಗುತ್ತಿವೆ.
ಜಪಾನ್ ನೌಕಾ ಸೇನೆಯ ಸಾಮರ್ಥ್ಯ ವೃದ್ಧಿ
ಏಪ್ರಿಲ್ ತಿಂಗಳಲ್ಲಿ ಜಪಾನ್ ತನ್ನ ಪ್ರಥಮ ವಿಮಾನವಾಹಕ ನೌಕೆಯಾದ ಕಾಗಾವನ್ನು ಅಭಿವೃದ್ಧಿ ಪಡಿಸಿರುವುದಾಗಿ ಸಾರಿತ್ತು. ೨೦೧೭ರಲ್ಲಿ, ಮೂಲತಃ ಹೆಲಿಕಾಪ್ಟರ್ ವಾಹಕವಾಗಿ ನಿರ್ಮಿತವಾದ ಕಾಗಾ, ಈಗ ಲಾಕ್‌ಹೀಡ್ ಮಾರ್ಟಿನ್ ಎಫ್-೩೫ಬಿ ಲೈಟ್ನಿಂಗ್ ೨ ಸ್ಟೆಲ್ತ್ ಯುದ್ಧ ವಿಮಾನಗಳನ್ನು ಒಯ್ಯುವಂತೆ ಮಾರ್ಪಾಡಾಗಿದೆ.
೨೦೨೬-೨೭ರಲ್ಲಿ ಕಾಗಾದಲ್ಲಿ ಇನ್ನಷ್ಟು ಬದಲಾವಣೆಗಳನ್ನು ತಂದು, ಅದು ವಿಮಾನಗಳನ್ನು ಒಯ್ಯಲು ಇನ್ನಷ್ಟು ಸೂಕ್ತವಾಗುವಂತೆ ಮಾಡಲಾಗುತ್ತದೆ.
ಕಾಗಾ ಜೊತೆಗೆ, ೨೦೧೫ರಿಂದ ಸೇವೆ ಸಲ್ಲಿಸುತ್ತಿರುವ ಹೆಲಿಕಾಪ್ಟರ್ ಇಜುಮೋ ನೌಕೆಯೂ ಸಂಪೂರ್ಣ ಅಭಿವೃದ್ಧಿ ಹೊಂದಲಿದ್ದು, ೨೦೨೭ರಲ್ಲಿ ಅಭಿವೃದ್ಧಿ ಪೂರ್ಣಗೊಳ್ಳಲಿದೆ. ಮೂಲತಃ ಹೆಲಿಕಾಪ್ಟರ್ ವಾಹಕಗಳಾಗಿದ್ದ ಇವೆರಡು ನೌಕೆಗಳು ಅವಶ್ಯಕತೆ ಬಿದ್ದರೆ ವಿಮಾನಗಳನ್ನು ಒಯ್ಯಬಲ್ಲವು.
ಅವಶ್ಯಕ ಅಭಿವೃದ್ಧಿಗಳ ಬಳಿಕ, ಎರಡೂ ನೌಕೆಗಳು ತಲಾ ೧೨ ಯುದ್ಧ ವಿಮಾನಗಳು ಮತ್ತು ೧೬ ಹೆಲಿಕಾಪ್ಟರ್‌ಗಳನ್ನು ಒಯ್ಯಬಲ್ಲವು.
ನೌಕಾ ಯೋಜನೆಯಲ್ಲಿ ವಿಳಂಬ
ನೆರೆಹೊರೆಯ ದೇಶಗಳು ವಿಮಾನವಾಹಕ ನೌಕೆಗಳನ್ನು ಹೊಂದಿರುವುದರಿಂದ, ನಾವೂ ವಿಮಾನವಾಹಕ ನೌಕಾ ನಿರ್ಮಾಣದ ಯೋಜನೆಗೆ ವೇಗ ನೀಡಬೇಕೆಂದು ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ಅಕ್ಟೋಬರ್ ೨೦೨೦ರಲ್ಲಿ ಅಭಿಪ್ರಾಯ ಪಟ್ಟಿದ್ದರು.
ಅದಾದ ಬಳಿಕ, ದಕ್ಷಿಣ ಕೊರಿಯಾದ ಅಧಿಕಾರಿಗಳು ಮುಂದಿನ ತಲೆಮಾರಿನ ವಿಮಾನವಾಹಕ ನೌಕೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊದಲ ಸಭೆ ನಡೆಸಿದರು. ಈ ಸಭೆಯನ್ನು, ವಿಮಾನವಾಹಕ ನೌಕೆಯ ನಿರ್ಮಾಣಕ್ಕೆ ಅವಶ್ಯಕವಾದ ವಿನ್ಯಾಸ ಮತ್ತು ತಂತ್ರಜ್ಞಾನಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ಬಣ್ಣಿಸಲಾಗಿತ್ತು. ವರದಿಗಳ ಪ್ರಕಾರ, ಅಭಿವೃದ್ಧಿ ಪ್ರಕ್ರಿಯೆ ೨೦೨೪ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು.
ಆರಂಭದಲ್ಲಿ ಈ ಯೋಜನೆ, ಎಫ್-೩೫ಬಿ ವಿಮಾನಗಳಿಗೆ ಶಾರ್ಟ್ ಟೇಕಾಫ್ ಮತ್ತು ಲಂಬ ಲ್ಯಾಂಡಿಂಗ್ ನಡೆಸಲು ಅನುಕೂಲಕರವಾದ, ೪೦,೦೦೦ ಟನ್ ತೂಕದ ವಿಮಾನವಾಹಕ ನೌಕೆಯನ್ನು ನಿರ್ಮಿಸಲು ಉದ್ದೇಶಿಸಿತ್ತು.
ಡಿಸೆಂಬರ್ ೨೦೨೩ರ ವರದಿಯ ಪ್ರಕಾರ, ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯದ ೨೦೨೪-೨೮ರ ಮಧ್ಯಂತರ ರಕ್ಷಣಾ ಯೋಜನೆ, ಉದ್ದೇಶಿತ ವಿಮಾನವಾಹಕ ನೌಕೆಯ ಅಭಿವೃದ್ಧಿಗೆ ಯಾವುದೇ ನಿರ್ದಿಷ್ಟ ರೂಪುರೇಷೆಯಾಗಲಿ, ವೇಳಾಪಟ್ಟಿಯನ್ನಾಗಲಿ ನೀಡಲಿಲ್ಲ. ಆದರೆ, ವಿಮಾನವಾಹಕ ನೌಕಾ ಯೋಜನೆಯನ್ನು ಭವಿಷ್ಯದಲ್ಲಿ ಪೂರೈಸಲಾಗುವುದು ಎಂದು ಸಚಿವಾಲಯ ಹೇಳಿಕೆ ನೀಡಿತ್ತು. ಅದರೊಡನೆ, ೨೦೨೪ರ ದಕ್ಷಿಣ ಕೊರಿಯಾದ ಬಜೆಟ್‌ನಲ್ಲಿ ವಿಮಾನವಾಹಕ ನೌಕೆಗೆ ಯಾವುದೇ ಮೊತ್ತವನ್ನು ಮೀಸಲಿಡಲಾಗಿಲ್ಲ.
ಕಾಲ ಕಳೆದಂತೆ, ಈ ಯೋಜನೆ ಹೆಚ್ಚು ಹೆಚ್ಚು ಮಹತ್ವಾಕಾಂಕ್ಷಿಯಾಗುತ್ತಿದೆ. ಉದ್ದೇಶಿತ ವಿಮಾನವಾಹಕ ನೌಕೆಯ ಇತ್ತೀಚಿನ ವಿನ್ಯಾಸ ಕ್ಯಾಟಾಪುಲ್ಟ್ ಉಡಾವಣಾ ವ್ಯವಸ್ಥೆಯನ್ನು ಒಳಗೊಂಡಿದ್ದು, ನೌಕೆಯ ತೂಕ ೭೦,೦೦೦ ಟನ್ ಇರಲಿದೆ.
ಜಾಗತಿಕ ವಿಮಾನವಾಹಕ ನೌಕಾ ಚಿತ್ರಣ
ಜಗತ್ತಿನಾದ್ಯಂತ ಒಟ್ಟು ೨೧ ವಿಮಾನವಾಹಕ ನೌಕೆಗಳು ಕಾರ್ಯಾಚರಿಸುತ್ತಿದ್ದು, ಅವುಗಳ ಪೈಕಿ ೧೧ ನೌಕೆಗಳು ಅಮೆರಿಕಾಗೆ ಸೇರಿವೆ. ಚೀನಾ, ಭಾರತ, ಯುಕೆ, ಮತ್ತು ಇಟಲಿಯ ಬಳಿ ತಲಾ ಎರಡು ವಿಮಾನವಾಹಕ ನೌಕೆಗಳಿದ್ದರೆ, ಫ್ರಾನ್ಸ್ ಮತ್ತು ರಷ್ಯಾ ಬಳಿ ಒಂದೊಂದು ವಿಮಾನವಾಹಕ ನೌಕೆಗಳಿವೆ. ಚೀನಾದ ನೂತನ ಫುಜಿಯಾನ್ ವಿಮಾನವಾಹಕ ನೌಕೆಯ ಹೊರತಾಗಿಯೂ, ಅಮೆರಿಕಾಗೆ ಸಾಕಷ್ಟು ಮೇಲುಗೈ ಇದ್ದು, ಅಮೆರಿಕಾದ ಗೆರಾಲ್ಡ್ ಆರ್ ಫೋರ್ಡ್ ಕ್ಲಾಸ್ ವಿಮಾನವಾಹಕ ನೌಕೆ ೧,೦೦,೦೦೦ ಟನ್‌ಗಳಷ್ಟು ತೂಕ ಹೊಂದಿದೆ.