ಕಾಂಗ್ರೆಸ್‌ಗೆ ಚುನಾವಣೆ ಆಯೋಗದ ಮೇಲೆ ನಂಬಿಕೆ ಇಲ್ಲ

Advertisement

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಬಹುಮತ ಸಿಕ್ಕಿದೆ. ನಾವು ಎಕ್ಸಿಟ್ ಪೋಲ್‌ಗಿಂತಲೂ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರು ಸಹ ಇದನ್ನೇ ಹೇಳಿದ್ದರು. ಆದರೆ, ಆಗ ಅನೇಕರು ಸಂಶಯ ವ್ಯಕ್ತಪಡಿಸಿದ್ದರು. ಇದೀಗ ಎಕ್ಸಿಟ್ ಪೋಲ್ ಖಚಿತಪಡಿಸಿದೆ. ೪೦೦ ಸ್ಥಾನಗಳನ್ನೂ ದಾಟುತ್ತೇವೆ ಎಂದರು.

ಕಾಂಗ್ರೆಸ್‌ಗೆ ಚುನಾವಣೆ ಆಯೋಗದ ಮೇಲೆ ನಂಬಿಕೆ ಇಲ್ಲ. ಜನತಾ ಜನಾರ್ಧನನ ಮೇಲೆ ವಿಶ್ವಾಸ ಇಲ್ಲ, ಕಾಂಗ್ರೆಸ್‌ನವರು ಸುಳ್ಳರು, ಭ್ರಷ್ಟರಾಗಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಒಬ್ಬ ಸಚಿವನನ್ನು ರಾಜೀನಾಮೆ ಕೊಡಿಸಲು ಆಗಿಲ್ಲ. ಈ ಹಗರಣದಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದಾರೆ. ಮೊದಲು ಸಚಿವ ನಾಗೇಂದ್ರ ಅವರನ್ನು ಬಂಧಿಸಬೇಕು. ನಾಗೇಂದ್ರ ಬಂಧನವಾದರೆ ಮುಖ್ಯಮಂತ್ರಿಗಳ ಪಾತ್ರ ಗೊತ್ತಾಗುತ್ತದೆ ಎಂದರು.

ಭ್ರಷ್ಟಾಚಾರ ಸಿಕ್ಕಾಪಟ್ಟೆ ನಡೆಯುತ್ತಿದೆ. ರಾಜಕಾರಣಿಗಳ ಒತ್ತಡದಿಂದ ಈ ರೀತಿಯಾಗಿದೆ. ಪೊಲೀಸರ ಹೆದರಿಕೆ ಇಲ್ಲದಾಗಿದೆ. ಸರಕಾರ ಎಚ್ಚೆತ್ತುಕೊಳ್ಳಬೇಕು. ಶಿಕ್ಷಕಿಗೆ ಬೆದರಿಕೆ ಪತ್ರ ನೀಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.