ಶ್ರೀರಾಮನಿಗೆ ವಿಶ್ವಾಮಿತ್ರರಿಂದ ಆಹ್ವಾನ

ಗುರುಬೋಧೆ
Advertisement

ಚಂದ್ರವಂಶದಲ್ಲಿ ಗಾಧಿಯೆಂಬ ರಾಜನು ಹುಟ್ಟಿದ್ದನು. ಬ್ರಹ್ಮವರದಿಂದ ಬ್ರಾಹ್ಮಣ್ಯವನ್ನು ಪಡೆದಿದ್ದನು. ವಿಶ್ವಾಮಿತ್ರ ಋಷಿ ಎಂಬ ಹೆಸರಿನಿಂದ ಪ್ರಖ್ಯಾತನಾಗಿದ್ದರು. ವಿಶ್ವಾಮಿತ್ರ ಋಷಿಗಳು ತಮ್ಮ ಯಜ್ಞವನ್ನು ರಕ್ಷಣೆಮಾಡಲು ಶ್ರೀರಾಮಚಂದ್ರನೊಬ್ಬನೆ ಸಮರ್ಥನಾಗಿದ್ದಾನೆಂದು ನಿರ್ಣಯಿಸಿದರು. ದಶರಥನ ಆಸ್ಥಾನಮಂಟಪಕ್ಕೆ ಹೋಗಿ ಶ್ರೀರಾಮಚಂದ್ರನನ್ನು ಯಜ್ಞರಕ್ಷಣೆಗಾಗಿ ಕಳುಹಿಸಿಕೊಡಬೇಕೆಂದು ಅಪ್ಪಣೆ ಮಾಡಿದರು.
ಭಯ ಹಾಗೂ ಕಷ್ಟ, ಒಲ್ಲದ ಮನದಿಂದ ದಶರಥನು ರಾಮ-ಲಕ್ಷ್ಮಣರನ್ನು ವಿಶ್ವಾಮಿತ್ರರ ಜೊತೆ ಕಳುಹಿಸಿಕೊಟ್ಟನು. ವಿಶ್ವಾಮಿತ್ರ ಋಷಿಗಳು ರಾಮಲಕ್ಷ್ಮಣರನ್ನು ಕರೆದುಕೊಂಡು ತಮ್ಮ ಸಿದ್ಧಾಶ್ರಮಕ್ಕೆ ತೆರಳಿದರು. ವಿಶ್ವಾಮಿತ್ರ ಋಷಿಗಳನ್ನು ಅನುಗ್ರಹ ಮಾಡುವ ದೃಷ್ಟಿಯಿಂದ ಲಕ್ಷ್ಮಣಸಹಿತನಾದ ಶ್ರೀರಾಮಚಂದ್ರನು ಅವರಿಂದ ಅಸ್ತ್ರಗಳ ಉಪದೇಶವನ್ನು ಪಡೆದುಕೊಂಡನು. ಅಸ್ತ್ರಾಭಿಮಾನಿಗಳಾದ ಬ್ರಹ್ಮಾದಿ ದೇವತೆಗಳು ಬಂದು ಶ್ರೀರಾಮಚಂದ್ರನನ್ನು ನಮಸ್ಕರಿಸಿದರು. ಬ್ರಹ್ಮವರದಿಂದ ದೃಪ್ತಳಾದ ತಾಟಕಿಯನ್ನು ಶ್ರೀರಾಮಚಂದ್ರನು ಮೊಟ್ಟ ಮೊದಲು ಸಂಹಾರ ಮಾಡಿದನು. ತಾಟಕಿಯನ್ನು ಒಂದೇ ಬಾಣದಿಂದ ಅನಾಯಾಸವಾಗಿ ಕೊಂದು, ರುದ್ರವರದಿಂದ ಅವಧ್ಯನಾದ ಸುಬಾಹುವನ್ನು ಸಂಹಾರ ಮಾಡಿದನು. ವಿಶ್ವಾಮಿತ್ರರ ಯಜ್ಞವು ನಿರಾತಂಕವಾಗಿ ಸಮಾಪ್ತವಾಯಿತು.
ಅದೇ ಸಂದರ್ಭದಲ್ಲಿ ಬ್ರಹ್ಮವರವನ್ನು ಪಡೆದ ಮಾರೀಚನನ್ನು ಮಾತ್ರ ಸಂಹಾರ ಮಾಡದೆ ಸಮುದ್ರಕ್ಕೆ ಎಸೆದನು. ಇನ್ನೂ ನೂರಾರು ಮಂದಿ ರಾಕ್ಷಸರನ್ನು ಅನಾಯಾಸವಾಗಿ ಸಂಹಾರ ಮಾಡಿದನು. ವಿಶ್ವಾಮಿತ್ರರ ಯಜ್ಞ ರಕ್ಷಣೆಯಾಯಿತು. ಯಜ್ಞವನ್ನು ಸಂಪೂರ್ಣಗೊಳಿಸಿ ವಿಶ್ವಾಮಿತ್ರರು ಪ್ರತ್ಯಕ್ಷನಾದ ಶ್ರೀರಾಮದೇವರಿಗೆ ಸಮರ್ಪಣೆ ಮಾಡಿ ಧನ್ಯರೆಂದರು. ಇದೇ ಸಮಯದಲ್ಲಿ ಶುಭವಾರ್ತೆಯು ದಿಕ್ಕು ವಿದಿಕ್ಕುಗಳಲ್ಲಿ ಹರಡುತ್ತಿತ್ತು. ವಿದೇಹರಾಜನಾದ ಜನಕನು ತನ್ನ ಮಗಳಾದ ಸೀತೆಯ ಸ್ವಯಂವರವನ್ನು ಏರ್ಪಾಟು ಮಾಡಿದ್ದಾನೆ ಎಂಬ ಘೋಷಣೆ ಪ್ರತಿಧ್ವನಿಸುತ್ತಿತ್ತು. ಅದನ್ನು ಕೇಳಿದ ಶ್ರೀರಾಮಚಂದ್ರನು ವಿಶ್ವಾಮಿತ್ರರನ್ನು ಹಿಂಬಾಲಿಸುತ್ತ ಆ ಜನಕರಾಜನ ಪಟ್ಟಣದತ್ತ ಹೊರಟನು.