ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ದೇಶದಲ್ಲೇ ಹೆಸರುವಾಸಿಯಾಗಿರುವ ಸರಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋಧನಾ ಸಂಸ್ಥೆಗೆ ನಿರಂತರ ೧೬ ವರ್ಷಗಳ ಕಾಲ ನಿರ್ದೇಶಕರಾಗಿದ್ದ ಡಾ.ಸಿ.ಎನ್.ಮಂಜುನಾಥ್ ಅವರ ಸೇವಾವಧಿ ಪೂರ್ಣಗೊಂಡ ನಂತರ ಅದಕ್ಕೆ ಸಮರ್ಥ ಉತ್ತರಾಧಿಕಾರಿಯೊಬ್ಬರನ್ನು ಹುಡುಕಲು ಈಗ ಕಾಲ ಕೂಡಿಬಂದಿದೆ.
ಕಳೆದ ಜನವರಿ ೩೧ಕ್ಕೆ ಡಾ.ಮಂಜುನಾಥ್ ಅವರ ಹೆಚ್ಚುವರಿ ಅವಧಿ ಪೂರ್ಣಗೊಂಡಿದ್ದು, ಜಯದೇವ ಸಂಸ್ಥೆಯ ನಿರ್ದೇಶಕ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಹಿಂದಿನ ಬಾರಿ ಅವಧಿ ಮುಂದುವರಿಸುವ ವೇಳೆ ಅಫಿಡವಿಟ್ ಬರೆದುಕೊಟ್ಟಿದ್ದರು. ಹೀಗಾಗಿ ಅವರ ಅವಧಿ ಈ ಬಾರಿ ಮುಗಿಯಲೇಬೇಕಿತ್ತು. ಅದೇ ಕಾರಣಕ್ಕಾಗಿ ಸರಕಾರ ಅವರನ್ನು ಮುಂದುವರಿಸುವ ಉದ್ದೇಶ ಹೊಂದಿರಲಿಲ್ಲ. ಅದೇ ಕಾರಣಕ್ಕೆ ರಾಜ್ಯ ಸರಕಾರ ಕಳೆದ ಜನವರಿ ೧೨ರಂದು ಜಯದೇವ ಸಂಸ್ಥೆಯ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. ಜ. ೧೯ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.
ರಾಜ್ಯ ಸರಕಾರ ಅರ್ಜಿ ಆಹ್ವಾನಿಸಿದ್ದ ತರಾತುರಿ ನೋಡಿದರೆ ಪೂರ್ಣಾವಧಿ ನಿರ್ದೇಶಕರ ನೇಮಕ ಆಗಿಯೇ ಬಿಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜನವರಿ ಅಂತ್ಯಕ್ಕೆ ಡಾ.ಮಂಜುನಾಥ್ ಅವರು ಸಂಸ್ಥೆಯ ಸಲಹೆಗಾರರೂ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಎಸ್. ರವೀಂದ್ರನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ರಾಜ್ಯ ಸರಕಾರ ಡಾ.ರವೀಂದ್ರನಾಥ್ ಅವರನ್ನು ಪ್ರಭಾರಿ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು.
ಜಯದೇವ ಹೃದ್ರೋಗ ಸಂಸ್ಥೆಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಹೊಣೆ ಗವರ್ನಿಂಗ್ ಕೌನ್ಸಿಲ್‌ಗೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದರ ಅಧ್ಯಕ್ಷರಾಗಿದ್ದಾರೆ. ಆದರೆ ನಿರ್ದೇಶಕ ಹುದ್ದೆಗೆ ಪೂರ್ಣಾವಧಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಹೊತ್ತಿಗೆ ಲೋಕಸಭಾ ಚುನಾವಣೆಯ ಅಧಿಸೂಚನೆ ಪ್ರಕಟಗೊಂಡಿತು ಎಂಬ ನೆಪ ಹೇಳಲಾಗುತ್ತಿದೆ. ಈಗ ಜೂನ್ ೪ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಪೂರ್ಣಗೊಳ್ಳಲಿದ್ದು, ನಿರ್ದೇಶಕರ ನೇಮಕಕ್ಕೆ ಮತ್ತೆ ಚಾಲನೆ ದೊರಕುವ ನಿರೀಕ್ಷೆ ಇದೆ.
ಈ ಮಧ್ಯೆ ಕಳೆದ ಜನವರಿಯಲ್ಲಿ ಸರಕಾರ ಹೊರಡಿಸಿದ್ದ ನೇಮಕಾತಿ ಅಧಿಸೂಚನೆ ಈಗಲೂ ಸಿಂಧು ಆಗಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ಜನವರಿ ೧೨ರಂದು ಅಧಿಸೂಚನೆ ಪ್ರಕಟಗೊಂಡಿದ್ದರಿಂದ ಜೂನ್ ೧೨ಕ್ಕೆ ೬ ತಿಂಗಳು ಪೂರ್ಣಗೊಳ್ಳಲಿದೆ. ಈ ಅಧಿಸೂಚನೆ ಬದಲಾಗಿ ಮತ್ತೊಮ್ಮೆ ಅಧಿಸೂಚನೆ ಕರೆಯುವುದು ಸೂಕ್ತ ಎಂದು ವೈದ್ಯಕೀಯ ನಿರ್ದೇಶನಾಲಯದ ಅಧಿಕಾರಿಗಳು ಸರಕಾರಕ್ಕೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಹಾಗೊಂದು ವೇಳೆ ಮತ್ತೊಮ್ಮೆ ಅಧಿಸೂಚನೆ ಪ್ರಕಟಿಸಿದರೆ ಹೊಸ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ. ಸದ್ಯ ಮಾದರಿ ನೀತಿ ಸಂಹಿತೆ ಇರುವುದರಿಂದ ಸರಕಾರದ ಮಟ್ಟದಲ್ಲಿ ಬಹಿರಂಗವಾಗಿ ಯಾರೂ ಚರ್ಚಿಸುತ್ತಿಲ್ಲ. ಆದರೆ ಒಳಗೊಳಗೆ ಭಾರಿ ಲಾಬಿ ನಡೆದಿದೆ.
ರೇಸ್‌ನಲ್ಲಿ ಇಬ್ಬರು..!
ಹೃದ್ರೋಗ ಚಿಕಿತ್ಸೆ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಹಾಲಿ ಪ್ರಭಾರಿ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಅವರಿಗೆ ಈಗ ೭೦ ವರ್ಷ ತುಂಬುತ್ತಲಿವೆ. ಹೀಗಾಗಿ ಅವರನ್ನೇ ಸರಕಾರ ಮುಂದುವರಿಸುತ್ತದೆಯೇ ಅಥವಾ ಹೊಸ ನಿರ್ದೇಶಕರ ಆಯ್ಕೆ ನಡೆಯಲಿದೆಯೇ ಎಂಬ ಚರ್ಚೆ ಜಯದೇವ ಸಂಸ್ಥೆಯ ಅಂಗಳದಲ್ಲಿ ನಡೆಯುತ್ತಿದೆ. ಡಾ.ಮಂಜುನಾಥ್ ಅವರು ಜಯದೇವ ಸಂಸ್ಥೆಯನ್ನು ಮುನ್ನಡೆಸಿದ ರೀತಿಯಲ್ಲೇ ಕಳೆದ ೫ ತಿಂಗಳಿನಿಂದ ಡಾ.ರವೀಂದ್ರನಾಥ್ ಕೂಡ ನಿರ್ವಹಣೆ ಮಾಡುತ್ತಿದ್ದಾರೆ. ಈ ಮಧ್ಯೆ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಆಪ್ತರಾದ ತಜ್ಞ ವೈದ್ಯರೊಬ್ಬರು ಜಯದೇವ ಸಂಸ್ಥೆಯ ನಿರ್ದೇಶಕ ಹುದ್ದೆಗೆ ಭಾರಿ ಪ್ರಯತ್ನ ನಡೆಸಿದ್ದಾರೆ. ಅವರಿಗೆ ಕನಿಷ್ಠ ವಯೋಮಿತಿ ೫೦ ವರ್ಷ ಈಗಷ್ಟೇ ಪೂರ್ಣಗೊಂಡಿದ್ದರಿಂದ ಈ ಹುದ್ದೆಗೆ ಮರು ಅಧಿಸೂಚನೆ ಪ್ರಕಟಿಸಲು ಸರಕಾರ ಮುಂದಾಗಿದೆ ಎಂದೂ ಹೇಳಲಾಗುತ್ತಿದೆ. ಕಳೆದ ಜನವರಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ ೨೩ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ ಸಂಸ್ಥೆಯ ಹಾಲಿ ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಶ್ರೀನಿವಾಸ್ ಮತ್ತು ಮೈಸೂರು ಜಯದೇವ ಸಂಸ್ಥೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಕೆ.ಎಸ್.ಸದಾನಂದ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.