ಎಪಿಎಂಸಿಗಳ ಆರ್ಥಿಕ ಸ್ಥಿತಿ ಶೋಚನೀಯ

Advertisement

­­ಪಿ.ಮಂಜುನಾಥ ಕಾಡಜ್ಜಿ
ರಾಜ್ಯದಲ್ಲಿ ರೈತರ, ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಜಾರಿಗೆ ಬಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದಾಗಿ ಮಾರುಕಟ್ಟೆಗೆ ಬರುತ್ತಿದ್ದ ಸೆಸ್ (ಶುಲ್ಕ) ಗಣನೀಯವಾಗಿ ಕಡಿಮೆಯಾಗಿದ್ದು, ಎಪಿಎಂಸಿಗಳ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ.
೨೦೨೦ರ ಮೇದಲ್ಲಿ ರಾಜ್ಯದಲ್ಲಿ ನೂತನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಲಾಭದಾಯಕ ಬೆಲೆ ಸಿಗಲಿದೆ ಎಂಬ ಉದ್ದೇಶದಿಂದ, ಈ ಕಾಯ್ದೆ ಅಂಗೀಕರಿಸಿದೆ. ಇಲ್ಲಿ ಕಾರ್ಪೋರೇಟ್ ಕಂಪನಿಗಳೇ ದೈತ್ಯ ಖರೀದಿದಾರರಾಗಿದ್ದು, ಈಗಾಗಲೇ ರಾಜ್ಯದಲ್ಲಿನ ಎಪಿಎಂಸಿಗಳು ನಷ್ಟ ಅನುಭವಿಸತೊಡಗಿವೆ. ಅರ್ಧದಷ್ಟು ಸಿಬ್ಬಂದಿ ಕಡಿತ ಮಾಡಲಾಗಿದ್ದು, ನಿರುದ್ಯೋಗ ತೀವ್ರಗೊಂಡಿದೆ.

ಕಾಯ್ದೆ ಜಾರಿಗೂ ಮುನ್ನ ಮಾರುಕಟ್ಟೆಗೆ ಶೇ.೧.೫ರಷ್ಟು ಸೆಸ್ ಬರುತ್ತಿತ್ತು. ಆರ್ಥಿಕ ಸ್ಥಿತಿ ಉತ್ತಮವಾಗಿತ್ತು, ಎಪಿಎಂಸಿಗೆ ಇಡೀ ತಾಲ್ಲೂಕಿನ ಮೇಲೆ ನಿಯಂತ್ರಣವಿರುತ್ತಿತ್ತು. ರೈತರು ಯಾವುದೇ ಸ್ಥಳದಲ್ಲಿ ತಮ್ಮ ಉತ್ಪನ್ನ ಮಾರಾಟ ಮಾಡಿದರೂ ಮಾರುಕಟ್ಟೆಗೆ ಶುಲ್ಕ ಬರುತ್ತಿತ್ತು. ಆದರೆ ಈಗ ಮಾರುಕಟ್ಟೆಗೆ ಬರುತ್ತಿದ್ದ ಶುಲ್ಕ ಶೇ. ೧.೫ರ ಬದಲಾಗಿ ಶೇ. ೦.೬೦ ಪೈಸೆಗೆ ಇಳಿಕೆಯಾಗಿದೆ. ಇದರಲ್ಲಿ ಆವರ್ತ ನಿಧಿಗೆ ೧೦ ಪೈಸೆ, ಕರ್ನಾಟಕ ಕೃಷಿ ಮಾರಾಟ ಮಂಡಳಿಗೆ ೦೫ ಪೈಸೆ, ರೆಮ್ಸ್ ವೆಚ್ಚ ೦೧ ಪೈಸೆ ಕೊಡಬೇಕಾಗುತ್ತದೆ. ಉಳಿದ ೪೪ ಪೈಸೆ ಮಾತ್ರ ಮಾರುಕಟ್ಟೆಗೆ ಸಿಗಲಿದೆ. ಇದರಿಂದಾಗಿ ಮಾರುಕಟ್ಟೆ ನಿಭಾಯಿಸುವುದೇ ಕಷ್ಟವಾಗಿದೆ.
ಗುತ್ತಿಗೆ ಆಧಾರಿತ ಸಿಬ್ಬಂದಿ ಅಂದರೆ ಕಂಪ್ಯೂಟರ್ ಆಪರೇಟರ್, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಸಂಬಳ, ಕಚೇರಿಯ ವಿದ್ಯುತ್ ಶುಲ್ಕ, ಇಂಟರ್‌ನೆಟ್ ಶುಲ್ಕ ಮತ್ತಿತರೆ ಖರ್ಚುಗಳನ್ನು ಭರಿಸುವುದು ಕಷ್ಟವಾಗಿದೆ.ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ನೂತನ ಕಾಯ್ದೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಇದರಿಂದ ಶೇ. ೯೫ರಷ್ಟು ರೈತರು ತಮ್ಮ ಮಾಲನ್ನು ಮಾರುಕಟ್ಟೆಗೆ ತರದೆ ಹೊರಗಡೆ ಅಥವಾ ಮನೆ ಬಾಗಿಲಲ್ಲೆ ಮಾರಾಟ ಮಾಡುತ್ತಾರೆ. ರೈತರು ಇ-ಟೆಂಡರ್‌ನಲ್ಲಿ ಪಾಲ್ಗೊಳ್ಳದ್ದರಿಂದ ಅವರಿಗೆ ಸ್ಪರ್ಧಾತ್ಮಕ ಧಾರಣೆ ಸಿಗುವುದಿಲ್ಲ. ಮಾರುಕಟ್ಟೆಗೆ ಸೆಸ್ ಕೂಡ ಬರುವುದಿಲ್ಲ.

ನೂತನ ಕಾಯ್ದೆ ಅನ್ವಯ ಎಪಿಎಂಸಿಗಳ ಹಿಡಿತ ಕೇವಲ ಮಾರುಕಟ್ಟೆ ಪ್ರಾಂಗಣ, ಉಪಪ್ರಾಂಗಣಗಳಿಗೆ ಮಾತ್ರ ಸೀಮಿತವಾಗಿದೆ. ಮಾರುಕಟ್ಟೆ ಹೊರಗಡೆ ರೈತರು-ವರ್ತಕರು ವ್ಯವಹರಿಸಿದರೆ ಇದರ ಮೇಲೆ ಎಪಿಎಂಸಿಗಳಿಗೆ ಯಾವುದೇ ನಿಯಂತ್ರಣ ವಿರುವುದಿಲ್ಲ. ಕೆಲವು ರೈತರು ಸೆಸ್ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಪ್ರಾಂಗಣದೊಳಗೆ ಮಾಲು ತರುತ್ತಿಲ್ಲ. ಇದು ಮಾರುಕಟ್ಟೆಗಳ ಆದಾಯ ಕುಸಿತಕ್ಕೆ ಕಾರಣವಾಗಿದೆ. ರಾಜ್ಯದ ಬಹುತೇಕ ಎಪಿಎಂಸಿಗಳ ಸ್ಥಿತಿಯೂ ಇದೇ ಆಗಿದೆ.
ಈ ವಿಷಯದಲ್ಲಿ ದಾವಣಗೆರೆ ಎಪಿಎಂಸಿ ಸ್ಥಿತಿ ಒಂದಿಷ್ಟು ಪರವಾಗಿಲ್ಲ, ಕಾರಣ ಇಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ರೂಪದಲ್ಲಿ ಬರುವ ಆದಾಯದಿಂದಾಗಿ ಕೆಲಸ ಕಾರ್ಯಗಳು ಕುಂಟುತ್ತಾ, ತೆವಳುತ್ತಾ ಸಾಗಿವೆ. ಇಲ್ಲಿನ ಮಾರುಕಟ್ಟೆಗೆ ತಿಂಗಳಿಗೆ ಖರ್ಚು-ವೆಚ್ಚಗಳಿಗಾಗಿ ಕನಿಷ್ಠ ೨೦ ಲಕ್ಷ ರೂ. ಬೇಕು. ಈಗ ಸುಗ್ಗಿಯ ಸಂದರ್ಭದಲ್ಲಿ ಮಾರುಕಟ್ಟೆಗೆ ಬರುವ ಸೆಸ್ ೧೦ ರಿಂದ ೧೫ ಲಕ್ಷ ರೂ. ಮಾತ್ರ. ಇದೇ ಪರಿಸ್ಥಿತಿ ಮುಂದುವರೆದಿದ್ದೇ ಆದಲ್ಲಿ ಇನ್ನು ೨-೩ ವರ್ಷಗಳಲ್ಲಿ ದಾವಣಗೆರೆ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಇಲ್ಲಿಯೇ ಆದಾಯ ಕ್ರೋಢೀಕರಣ ಕಷ್ಟವಾಗುವುದರಿಂದ ಸರ್ಕಾರವು ಬೇರೆಲ್ಲಾ ಇಲಾಖೆಗಳಿಗೆ ನೀಡುವಂತೆ ವರ್ಷಕ್ಕೆ ಇಂತಿಷ್ಟು ಅನುದಾನವೆಂದು ಎಪಿಎಂಸಿಗಳಿಗೂ ನೀಡಬೇಕಾಗುತ್ತದೆ.

ಮಾರುಕಟ್ಟೆಗೆ ಬರುವ ಆದಾಯ ಕಡಿಮೆಯಾಗಿದ್ದರೂ ಸಹ ಮಳಿಗೆಗಳ ಬಾಡಿಗೆ ರೂಪದಲ್ಲಿ ಬರುವ ಆದಾಯ ಮತ್ತು ಇತರೆ ಆದಾಯದ ಮೂಲಗಳಿಂದಾಗಿ ೭ ಕೋಟಿ ರೂ. ವೆಚ್ಚದಲ್ಲಿ ನೂತನ ಮಾರುಕಟ್ಟೆ ‘ಜಿ’ ಬ್ಲಾಕ್‌ನಲ್ಲಿ ಸಿಸಿ ರಸ್ತೆ, ಡ್ರೈನೇಜ್, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಮಾರುಕಟ್ಟೆ ಸಮಿತಿ ದೃಢ ನಿರ್ಧಾರ ಕೈಗೊಂಡಿದೆ.

ಕೆ.ಸಿ.ದೊರೆಸ್ವಾಮಿ, ಜಂಟಿ ನಿರ್ದೇಶಕರು, ಎಪಿಎಂಸಿ ದಾವಣಗೆರೆ.