ಪರಿಸರ ಉಳಿಸಿ-ವಾತಾವರಣ ಕಾಪಾಡಿ, ಪರಿಸರ ಉಳಿಸಲು ಸರಸರ ಬನ್ನಿ, ಭವಿಷ್ಯದ ಪೀಳಿಗೆಗೆ ಅರಣ್ಯ ಕಾಪಾಡಿ, ಹಸಿರೇ ಉಸಿರು ಕಾಡುಗಳನ್ನು ರಕ್ಷಿಸಿ, ಅವು ಭೂಮಿಯ ಛತ್ರಿಗಳಾಗಿವೆ, ಮರಗಳು ಪ್ರಪಂಚದ ಶ್ವಾಸಕೋಶಗಳು..’ ಎಂಬಿತ್ಯಾದಿ ಘೋಷಣೆಗಳು ಕೇವಲ ವೇದಿಕೆ ಮೇಲಿನ ಭಾಷಣಗಳಾಗಿವೆ. ಬರುವ ಜೂನ್ ೫ರಿಂದ ಒಂದು ತಿಂಗಳ ಕಾಲ
ವಿಶ್ವ ಪರಿಸರ ದಿನಾಚರಣೆ’ಗೆ ಇದೇ ಘೋಷಣೆಗಳು ಮೊಳಗಲಿವೆ. ಅಧಿಕಾರಿಗಳು, ರಾಜಕಾರಣಿಗಳು, ಸ್ವಯಂ ಸೇವಾ ಸಂಸ್ಥೆಗಳು, ಪರಿಸರವಾದಿಗಳು ಎಂದೆನಿಸಿಕೊಂಡವರು ಒಂದೆರೆಡು ಗಿಡ ನೆಟ್ಟು ಫೊಟೋ ತೆಗೆಸಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಅರಣ್ಯ ಇಲಾಖೆ ಲಕ್ಷಾಂತರ ಗಿಡ ನೆಡಲಾಗಿದೆ ಎಂದು ನೀಡಿದ ಅಂಕಿ-ಅಂಶಗಳನ್ನೇ ಸರ್ಕಾರ ಉರುಹೊಡೆದು ತಮ್ಮ ಸಾಧನೆಗೆ ಬೆನ್ನು ಚಪ್ಪರಿಸಿಕೊಳ್ಳುತ್ತದೆ. ಪ್ರತಿವರ್ಷ ಇದೇ ರೀತಿ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದರೆ ಪರಿಸರದಲ್ಲಿ ಗಿಡ-ಮರಗಳ ಸಂಖ್ಯೆ ಹೆಚ್ಚಾಗಬೇಕಿತ್ತಲ್ಲ. ಆದರೆ ಏಕೆ ಹೆಚ್ಚಾಗುತ್ತಿಲ್ಲ? ಆದರೆ ಪ್ರತಿವರ್ಷ ಗಿಡ ನೆಡುವ, ಅವುಗಳ ಪೋಷಣೆ ಮಾಡುವುದಕ್ಕಾಗಿ ಸರ್ಕಾರದ ನೂರಾರು ಕೋಟಿ ರೂಪಾಯಿ ಖರ್ಚಾಗುತ್ತಲೇ ಇವೆ.
ಸರ್ಕಾರದ ಅವೈಜ್ಞಾನಿಕ ಯೋಜನೆಗಳಿಗೆ, ಮರಗಳ್ಳರು, ಭೂಗಳ್ಳರ, ಗುತ್ತಿಗೆದಾರರ ದುರಾಸೆಗೆ ಮರ-ಗಿಡಗಳು, ಅರಣ್ಯಗಳು, ಕೆರೆ-ಕಟ್ಟೆಗಳು ಆಪೋಷನವಾಗುತ್ತಿವೆ. ಇದರಿಂದಾಗಿ ಪರಿಸರ ಸಮತೋಲನ ತಪ್ಪಿ ಅತಿವೃಷ್ಟಿ-ಅನಾವೃಷ್ಟಿ ಮತ್ತಿತರ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದೆ ಎಂದು ಪರಿಸರ ತಜ್ಞರು, ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಆದರೆ ಸರ್ಕಾರವಾಗಲಿ, ಸಾರ್ವಜನಿಕರಾಗಲಿ ಎಚ್ಚೆತ್ತುಕೊಳ್ಳುತ್ತಿಲ್ಲ. ಪ್ರಕೃತಿ ವಿರುದ್ಧವಾಗಿ ಮನುಷ್ಯ ನಡೆದುಕೊಂಡರೆ ಭವಿಷ್ಯದಲ್ಲಿ ಪ್ರಕೃತಿ ವಿಕೋಪಗೊಂಡು ತನ್ನಷ್ಟಕ್ಕೆ ತಾನೇ ಪರಿಸರ ಸಮತೋಲನ ಮಾಡಿಕೊಳ್ಳುತ್ತದೆ. ಇಡೀ ದೇಶದಲ್ಲೇ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ತಜ್ಞರ ಪ್ರಕಾರ ಒಟ್ಟು ಭೂಪ್ರದೇಶದ ಕನಿಷ್ಠ ಶೇ.೩೦ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಅರಣ್ಯ ಇಲಾಖೆ ಮೂಲಗಳ ಪ್ರಕಾರ ಭಾರತದ ಒಟ್ಟು ಭೂ ಪ್ರದೇಶದ ಶೇ.೨೪.೬೨ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಇನ್ನು ಕರ್ನಾಟಕದ ಒಟ್ಟು ಭೂಪ್ರದೇಶದ ಸುಮಾರು ಶೇ.೨೦ರಷ್ಟು ಮಾತ್ರ ಅರಣ್ಯ ಪ್ರದೇಶ ಇರುವುದು ಮುಂದಿನ ದಿನಗಳ ಕರಾಳತೆಯನ್ನು ಬಿಂಬಿಸುತ್ತಿದೆ. ಹೀಗಿದ್ದರೂ ಅಭಿವೃದ್ಧಿ ಹೆಸರಿನಲ್ಲಿ, ನಾಗರಿಕ ಸೌಲಭ್ಯಗಳನ್ನು ಒದಗಿಸುವ ನೆಪದಲ್ಲಿ ಅರಣ್ಯ ನಾಶ ನಿರಂತರವಾಗಿ ನಡೆಯುತ್ತಲೇ ಇದೆ. ಇದರ ಜೊತೆಗೆ ಅರಣ್ಯ ಪ್ರದೇಶ ಒತ್ತುವರಿ, ಬಗರ್ಹುಕುಂ ಹೆಸರಿನಲ್ಲಿ ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳೇ ಅರಣ್ಯ ಕಬಳಿಕೆಗೆ ಅವಕಾಶ ಮಾಡಿಕೊಟ್ಟಿರುವುದು ದುರಂತಕ್ಕೆ ನಾಂದಿ ಹಾಡಿದಂತಿದೆ.
ಜೀವ ವೈವಿಧ್ಯ ರಕ್ಷಣೆಗೆ ಆದ್ಯತೆ ಇಲ್ಲ
ಶಿವಮೊಗ್ಗ ಜಿಲ್ಲೆಯ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ನದಿ ನೆರೆಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ದಟ್ಟಾರಣ್ಯದ ತೀರಾ ಕಿರು ಮಾರ್ಗದ ನದಿ ಇದಾದರೂ ಇಡೀ ದೇಶದಲ್ಲಿ ಪ್ರಖ್ಯಾತಿ ಹೊಂದಿರುವ ನದಿ. ಇಷ್ಟು ಕಿರಿದಾದ ನದಿಗೆ ಲಿಂಗನಮಕ್ಕಿ, ಗೇರುಸೊಪ್ಪ ಎರಡು ಕಡೆ ತಡೆಗೋಡೆ ನಿರ್ಮಿಸಿದ್ದಲ್ಲದೆ ಇದೀಗ ರಾಜಧಾನಿಗೆ ವಿದ್ಯುತ್ ನೀಡಲು ಪುನಃ ಸಮುದ್ರ ಸೇರುವ ಅನತಿ ದೂರದಿಂದ ವಾಪಸ್ ಮೇಲ್ಮುಖವಾಗಿ ಅಂತರ್ಮಾರ್ಗವಾಗಿ ನೀರೆತ್ತುವ ಯೋಜನೆ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮದಿಂದ ಕರಾವಳಿಯ ಜನತೆಗೆ ಹಾಗೂ ಅಪರೂಪದ ಜೀವಿ ಸಿಂಗಳೀಕಕ್ಕೆ ಆತಂಕ ಸೃಷ್ಟಿಸಲಾಗಿದೆ. ಸರ್ಕಾರಕ್ಕೆ ಜೀವವೈವಿಧ್ಯದ ಸಂರಕ್ಷಣೆಯ ಕಾರ್ಯಕ್ಕಿಂತಲೂ ಅಭಿವೃದ್ಧಿ ಹೆಸರಿನ ಇಂತಹ ಜೀವ ಮಾರಕ ಚಟುವಟಿಕೆಗಳತ್ತ ಮುಂದಾಗುತ್ತಿರುವುದು ಆತಂಕಕಾರಿ ಸಂಗತಿ.
ರಾಜ್ಯದ ಎರಡನೇ ಭೂಗರ್ಭ ವಿದ್ಯುತ್ ಯೋಜನೆ ಹಾಗೂ ರಾಜ್ಯದ ಅತಿ ದೊಡ್ಡ ವಿದ್ಯುತ್ ಉತ್ಪಾದನಾ ಯೋಜನೆ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರದಿಂದ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಗೆ ಪರಿಸರಾಸಕ್ತರ ವಿರೋಧವಿದ್ದರೂ ಲೆಕ್ಕಿಸದೆ ಪರಿಸರ ಮತ್ತು ಸೂಕ್ಷö್ಮಜೀವಿಗಳ ತಾಣವನ್ನು ಬಲಿ ಕೊಟ್ಟಾದರೂ ನಾವು ಈ ಯೋಜನೆಯನ್ನು ಮಾಡಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಂತಿರುವ ಸರ್ಕಾರಕ್ಕೆ ಕಣ್ಣು-ಕಿವಿ ಇಲ್ಲದಂತಾಗಿದೆ. ಕಾರ್ಗಲ್ ಸಮೀಪದ ಹಿರೇಹೆನ್ನಿ ಗ್ರಾಮದ ಬಳಿ ಈ ಯೋಜನೆ ಅನುಷ್ಠಾನವಾಗಲಿದೆ. ನೀರು ಸಂಗ್ರಹ ಟ್ಯಾಂಕ್ (ಸರ್ಜ್ ಟ್ಯಾಂಕ್) ಹಾಗೂ ವಿದ್ಯುತ್ ಉತ್ಪಾದನಾ ಘಟಕ (ಪವರ್ ಸ್ಟೇಷನ್) ನಿರ್ಮಾಣಕ್ಕೆ ಅಂದಾಜು ಮಾಡಿರುವ ಸ್ಥಳದಲ್ಲಿ ಡ್ರಿಲ್ಲಿಂಗ್ ನಡೆಸಿ ಅದರ ವರದಿ ಆಧರಿಸಿ ಅಂತಿಮವಾಗಿ ನಿಗದಿಪಡಿಸಿದ ಸ್ಥಳಗಳಲ್ಲಿ ಟ್ಯಾಂಕ್, ಪವರ್ ಸ್ಟೇಷನ್ ನಿರ್ಮಾಣಕ್ಕೆ ಕರ್ನಾಟಕ ಪವರ್ ಕಾರ್ಪೂರೇಷನ್ (ಕೆಪಿಸಿ) ತೀರ್ಮಾನಿಸಿದ್ದು ಇದಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನೂ ಆರಂಭಿಸಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಮತ್ತೆ ಗುರಿಯಾಗಿದೆ.
ಯೋಜನಾ ವೆಚ್ಚ ದುಪ್ಪಟ್ಟು
ಐದು ವರ್ಷಗಳ ಹಿಂದೆ ಇದೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತದಲ್ಲಿದ್ದಾಗ ೪,೫೦೦ ಕೋಟಿ ರೂ.ಗೆ ಸೀಮಿತವಾಗಿದ್ದ ಈ ಯೋಜನೆಯ ಗಾತ್ರ ಇದೀಗ ಬರೋಬ್ಬರಿ ೮,೫೦೦ ಕೋಟಿ ರೂ.ಗೆ ಏರಿದೆ. ಆದರೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಹೆಸರಿನಲ್ಲಿ ಕೆಪಿಸಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಗೇರುಸೊಪ್ಪ ಹಿನ್ನೀರಿನಿಂದ ತಲಕಳಲೆ ಡ್ಯಾಂಗೆ ಪೈಪ್ ಮೂಲಕ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಅಲ್ಲಿಂದ ಹಿರೇಹೆನ್ನಿ ಬಳಿ ಪವರ್ ಸ್ಟೇಷನ್ನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಬಳಿಕ ಈ ನೀರು ಮತ್ತೆ ಗೇರುಸೊಪ್ಪ ತಲುಪಲಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗಿ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವುದೇ ಅಪರೂಪವಾಗಿದೆ. ಈ ಹಿನ್ನೆಲೆಯಲ್ಲಿ ನೀರನ್ನು ಮರುಬಳಕೆ ಮಾಡುವುದರೊಂದಿಗೆ ಇಂಧನ ಕ್ಷಮತೆ ಹೆಚ್ಚಿಸಿಕೊಳ್ಳುವುದಕ್ಕೆ ಈ ಯೋಜನೆ ಅನುಕೂಲವಾಗಲಿದೆ ಎಂಬುದು ಕೆಪಿಸಿ ಅಧಿಕಾರಿಗಳ ಅಭಿಪ್ರಾಯ.
ಪರಿಸರ ಪ್ರೇಮಿಗಳ ವಿರೋಧ
ರಾಜ್ಯ ಸರ್ಕಾರ ೨೦೧೯ರಲ್ಲಿ ಶರಾವತಿ ಅಭಯಾರಣ್ಯವನ್ನು ವಿಸ್ತರಿಸಿ ಆದೇಶ ಹೊರಡಿಸಿತ್ತು. ಸಿಂಗಳೀಕ ಹಾಗೂ ಹಾರ್ನ್ಬಿಲ್ಗಳ ಸಂರಕ್ಷಣೆಗೆ ಈ ಕ್ರಮ ಅನಿವಾರ್ಯ ಎಂದು ಸರ್ಕಾರವೇ ಹೇಳಿತ್ತು. ೪೩ ಸಾವಿರ ಹೆಕ್ಟೇರ್ ಶರಾವತಿ ಅಭಯಾರಣ್ಯವನ್ನು ೯೩ ಸಾವಿರ ಹೆಕ್ಟೇರ್ಗೆ ಹಿಗ್ಗಿಸಲಾಗಿತ್ತು. ಹೀಗಿರುವಾಗ ಅಭಯಾರಣ್ಯದ ವ್ಯಾಪ್ತಿಯಲ್ಲಿ ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಏಕೆ ಎಂದು ಪರಿಸರಾಸಕ್ತರು ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೂ ಮುನ್ನ ೨೦೧೭ರಲ್ಲಿ ಯೋಜನೆ ಘೋಷಣೆಯಾದಾಗಲೂ ವ್ಯಾಪಕ ವಿರೋಧ ವ್ಯಕ್ತವಾಗಿ ಪರಿಸರ ಪ್ರೇಮಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಈ ಯೋಜನೆಯಿಂದ ಸುಮಾರು ೨ ಲಕ್ಷ ಮರ ಹಾಗೂ ೧೦ ಲಕ್ಷ ಗಿಡಗಳು ನಾಶವಾಗಲಿವೆ. ೨೦೨೦ರಲ್ಲಿ ನ್ಯಾಯಾಲಯ ಸರ್ವೇಗೆ ತಡೆಯಾಜ್ಞೆ ನೀಡಿತ್ತು. ನಂತರ ನಡೆದ ಕಾನೂನು ಹೋರಾಟದಲ್ಲಿ ಸರ್ಕಾರಕ್ಕೆ ಜಯ ಸಿಕ್ಕಿದ್ದು, ಇದೀಗ ಯೋಜನೆ ಟೆಂಡರ್ಗೆ ತೆರೆದುಕೊಂಡಿದೆ. ಕಸ್ತೂರಿ ರಂಗನ್ ವರದಿ ಪ್ರಕಾರ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಶರಾವತಿ ಕಣಿವೆ ಪರಿಸರ ಸೂಕ್ಷ್ಮ ವಲಯದಲ್ಲಿದೆ. ಹೀಗಾಗಿ ಇಲ್ಲಿ ಯೋಜನೆ ಜಾರಿ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಮಲೆನಾಡಿನ ಕಾಡು ಸದ್ದಿಲ್ಲದೆ ಬರಿದಾಗುತ್ತಿದೆ. ಮತ್ತೆ ಲಕ್ಷಾಂತರ ಗಿಡ-ಮರಗಳನ್ನು ಕಡಿದು ವಿದ್ಯುತ್ ಉತ್ಪಾದನಾ ಯೋಜನೆ ಜಾರಿಗೊಳಿಸಿದಲ್ಲಿ ಮುಂದಿನ ದಿನಗಳಲ್ಲಿ ಹವಾಮಾನದಲ್ಲಿ ಇನ್ನಷ್ಟು ಬದಲಾವಣೆ ಆಗುವ ಜೊತೆಗೆ ಸೂಕ್ಷ್ಮ ಜೀವಿಗಳ ಪ್ರಾಣಕ್ಕೂ ಕುತ್ತು ಬರಲಿದೆ. ಅಮೂಲ್ಯ ಗಿಡಮೂಲಿಕೆ ನಾಶವಾಗಲಿದೆ.
ಈ ಯೋಜನೆಯನ್ನು ವಿರೋಧಿಸಿ ಹಾಗೂ ಟೆಂಡರ್ ಪ್ರಕ್ರಿಯೆ ನಿಲ್ಲಿಸುವಂತೆ ಆಗ್ರಹಿಸಿ ರಾಜ್ಯ ಜೀವವೈವಿಧ್ಯ ಮಂಡಳಿ, ವೃಕ್ಷಲಕ್ಷ ಆಂದೋಲನ, ಪರಿಸರ ಸಂಘಟನೆಗಳು ಆಂದೋಲನ ನಡೆಸಿವೆ.
ಸರ್ಕಾರಕ್ಕೆ ಹಠ ಏಕೆ..?
ಇಷ್ಟಾದರೂ ಸರ್ಕಾರ ಹಠಕ್ಕೆ ಬಿದ್ದು ಜನವಿರೋಧಿ, ಪರಿಸರ ವಿರೋಧಿ ಯೋಜನೆ ಜಾರಿಗೊಳಿಸುವ ಅಗತ್ಯವೇನಾದರೂ ಏನಿದೆ. ವಿದ್ಯುತ್ ಉತ್ಪಾದನೆ ಹೆಚ್ಚು ಮಾಡಲು ಪರ್ಯಾಯ ಮಾರ್ಗಗಳಿಲ್ಲವೆ? ಮಲೆನಾಡಿನ ಸೂಕ್ಷö್ಮಜೀವಿಗಳ ಪರಿಸರ ಹೊರತುಪಡಿಸಿ ರಾಜ್ಯದ ಬಯಲು ಸೀಮೆಯಲ್ಲಿ ಪವನ ವಿದ್ಯುತ್ ಯೋಜನೆ, ಸೋಲಾರ್ ವಿದ್ಯುತ್ ಪಾರ್ಕ್ ನಿರ್ಮಿಸುವ ಮೂಲಕ ಅದೇ ಹಣವನ್ನು ವೆಚ್ಚ ಮಾಡಲು ಸಾಧ್ಯವಿಲ್ಲವೆ? ವಿಶ್ವ ಪರಿಸರ ದಿನಾಚರಣೆ ಹತ್ತಿರ ಇರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇಂತಹ ಅವೈಜ್ಞಾನಿಕ, ಪರಿಸರಕ್ಕೆ ಮಾರಕವಾಗಿರುವ ಯೋಜನೆಯನ್ನು ಕೈಬಿಟ್ಟು ಪರಿಸರಕ್ಕೆ ಪೂರಕವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿ. ಪದೇ ಪದೇ ಪರಿಸರದ ಮೇಲೆ ಅದರಲ್ಲೂ
ಮಲೆನಾಡಿನ ಸೂಕ್ಷ್ಮ ಪರಿಸರದ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಲಿ. ಯಾವುದೇ ಯೋಜನೆ ಜಾರಿಗೊಳಿಸುವ ಮುನ್ನ ಆಯಾ ಪ್ರದೇಶದ ಜನತೆಯ, ಪರಿಸರ ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕಲ್ಲವೆ? ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಅಧ್ಯಯನ ಮಾಡಬೇಕಲ್ಲವೆ? ಯೋಜನೆಯಿಂದ ಯಾರಿಗೋ ಲಾಭ ಮಾಡಿಕೊಡುವ, ಇನ್ನಾರಿಗೋ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಇಂತಹ ಅನಾಹುತಕಾರಿ ಯೋಜನೆಗಳನ್ನು ಜಾರಿಗೊಳಿಸುವುದನ್ನು ಕೈಬಿಟ್ಟು `ಬಹುಜನ ಹಿತಾಯ-ಬಹುಜನ ಸುಖಾಯ’ ಎಂಬ ನೀತಿಯ ಆಧಾರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಂತಾಗಲಿ.