ಭಗವತ್ಕೃಪೆ, ಪ್ರಾರಬ್ಧ ಮತ್ತು ಪ್ರಯತ್ನಗಳಿಂದಾಗಿ ತನಗೆ ಪ್ರಾಪ್ತವಾದ ಸುಖದಾಯಕ ಸಂಗತಿಗಳನ್ನು ಮನಸ್ಸಿನಿಂದ ಗಟ್ಟಿಯಾಗಿ ಹಿಡಿದುಕೊಳ್ಳುವ ಭಾವನೆಯನ್ನು ಆಸಕ್ತಿ ಎಂದು ಕರೆಯಲಾಗುತ್ತದೆ.
ಹೆಪ್ಪುಗಟ್ಟಿದ ತುಪ್ಪವು ಬಟ್ಟಲವನ್ನು ಹಿಡಿದುಕೊಂಡಿರುವಂತೆ ಹಲವು ವಾಸನೆಗಳ ಸಮೂಹವಾದ ಈ ಆಸಕ್ತಿ ಭಾವವು ಮನುಷ್ಯನನ್ನು ಸಂಸಾರದಲ್ಲಿ ಬಂಧಿಸಲು ಕಾರಣವಾಗುತ್ತದೆ. ಸಂಸಾರದಲ್ಲಿ ಆಸಕ್ತವಾದ ಮನಸ್ಸು ಭಗವಂತನೆಡೆಗೆ ಹರಿಯಲಾರದು. ಹಡೆಕೆಗೆ ನೆಚ್ಚಿದ ಸೊನಗ ಅಮೃತದ ಸವಿಯಬಲ್ಲುದೆ! ಈ ಕಾರಣಕ್ಕಾಗಿಯೇ ಮಹಾದೇವಿಯಕ್ಕನ ಮನಸ್ಸು
ಒಳಗನ ಗಂಡನಯ್ಯ ಹೊರಗನ ಮಿಂಡನಯ್ಯ
ಎರಡನು ನಡೆಸಲು ಬಾರದಯ್ಯ
ಲೌಕಿಕ ಪರಮಾರ್ಥವೆಂಬೆರಡನು ನಡೆಸಲು ಬಾರದಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯ.
ಹೀಗೆ ಮಿಡಿದಿರಬಹುದು. ಇದರ ಅರ್ಥ, ಆಧ್ಯಾತ್ಮದ ಸಾಧಕನಾದವನು ಮದುವೆಯಾಗಬಾರದು. ಮನೆ ಕಟ್ಟಬಾರದು. ಮಕ್ಕಳ ಹೆರಬಾರದು ಅಥವಾ ಎಲ್ಲವನ್ನು ತೊರೆದು ಕಾಡಿಗೆ ತೆರಳಬೇಕು ಎಂದಲ್ಲ. ಮನೆ, ಮಡದಿ, ಮಕ್ಕಳು, ಇದ್ದರೂ ಸಹ ಅದರಲ್ಲಿಯೇ ಅತಿಯಾದ ಆಸಕ್ತಿಯನ್ನು ಬೆಳೆಸಿಕೊಂಡು ಅವರೇ ಜೀವನದ ಗುರಿಯಾಗಬಾರದು. ಮಡದಿ ಮಕ್ಕಳ ಮೇಲೆ ಇರುವ ಆಸಕ್ತಿಯನ್ನು ತೊರೆಯುವುದೇ ಮಮಕಾರ ತ್ಯಾಗ ಮತ್ತು ವಿರಾಗ ಭಾವ.
ಆಸಕ್ತಿ ಎನ್ನುವುದು ಮನದಲ್ಲಿ ತುಂಬಿಕೊಂಡ ಒಂದು ಭಾವದೆಶೆ. ಇದನ್ನು ಮನದಲ್ಲಿ ತುಂಬಿಕೊಂಡು ಮಡದಿ ಮಕ್ಕಳ ತೊರೆದು ಅರಣ್ಯಕ್ಕೆ ಹೋದರೂ ಯಾವ ಪ್ರಯೋಜನವಾಗಲಾರದು. ಮನೆ ಮಕ್ಕಳ ತೊರೆದು ಅರಣ್ಯಕ್ಕೆ ಹೋದ ಮಾತ್ರಕ್ಕೆ ಅವರ ಮೇಲಿನ ಆಸಕ್ತಿ ಇಲ್ಲವಾಗುತ್ತದೆಂದು ಹೇಳಲು ಸಾಧ್ಯವಿಲ್ಲ. ಕಾರಣ ಆಸಕ್ತಿಭಾವವನ್ನು ಕಳೆದುಕೊಂಡು ಪ್ರಪಂಚದಲ್ಲಿ ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು. ಅದುವೇ ಮಮಕಾರರಹಿತ ಭಕ್ತನ ಬದುಕು.
ವನೇಪಿ ದೋಷಾಃ ಪ್ರಭವಂತಿ ರಾಗಿಣಾಂ
ಗೃಹೇಪಿ ಪಂಚೇಂದ್ರಿಯ ನಿಗ್ರಹಸ್ತಪಃ|
ಅಕುತ್ಸಿತೇ ಕರ್ಮಣಿ ಯಃ ಪ್ರವರ್ತತೇ
ನಿವೃತ್ತರಾಗಸ್ಯ ಗೃಹಂ ತಪೋವನಂ
ಈ ಪ್ರಸಂಗದಲ್ಲಿ ಈ ಮಾತು ಸ್ಮರಣೀಯವಾದುದು. ಆಸಕ್ತಿಭಾವ ಹೊಂದಿದ ಮನುಷ್ಯನು ನಾಡು ತೊರೆದು ಕಾಡಿಗೆ ಹೋದರೂ ಅಲ್ಲಿಯೂ ಅವನಿಂದ ದೋಷಗಳುಂಟಾಗುತ್ತವೆ. ಆಸಕ್ತಿಯಿಲ್ಲದ ಮತ್ತು ಪಂಚೇಂದ್ರಿಗಳ ಮೇಲೆ ಹಿಡಿತ ಸಾಧಿಸಿದ ಮನುಷ್ಯನು ಮನೆಯಲ್ಲಿಯೇ ಸತಿ ಸುತರೊಡನೆ ಬದುಕುತ್ತಿದ್ದರೂ ಅವನ ಪಾಲಿನ ಜೀವನ ಪವಿತ್ರವಾಗಿರುತ್ತದೆ. ಕಾರಣ ನಿರಾಸಕ್ತ ಭಾವನೆಯಿಂದ ತನ್ನ ಪಾಲಿನ ಕರ್ತವ್ಯಗಳನ್ನು ನಿರ್ವಹಿಸುತ್ತಾ ಸತಿಸುತರೊಡನೆ ಮನೆಯಲ್ಲಿಯೇ ಬದುಕುತ್ತಿದ್ದರೂ ಆ ಮನೆ ಕೇವಲ ಮನೆಯಲ್ಲ, ಅದೊಂದು ತಪೋವನ, ‘ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೆ ಲೇಸು ಕಂಡಯ್ಯ, ಕಾಯದ ಸಂಗವ ವಿವರಿಸಬಲ್ಲಡೆ ಕಾಯದ ಸಂಗವೇ ಲೇಸು ಕಂಡಯ್ಯ’ ಎಂಬ ಸೋದಾಹರಣಪೂರ್ಣವಾದ ಅಕ್ಕನ ಮಾತು ಇದನ್ನೇ ಸೂಚಿಸುತ್ತದೆ. ಸಂಸಾರದ ಆಸಕ್ತಿ ಮನುಷ್ಯನ ಮನಸ್ಸನ್ನು ದೇವರ ಬಳಿಗೆ ಸುಳಿಯಗೊಡುವುದಿಲ್ಲ. ಕಾರಣ ಭಕ್ತನಾಗುವವನು ಈ ಆಸಕ್ತಿ ಭಾವಕ್ಕೆ ವಿದಾಯ ಹೇಳಬೇಕು. ಸಂಸಾರವು ಸಸಾರವಾಗಬೇಕಾದರೆ ಆಸಕ್ತಿ ಭಾವದಶೆಯನ್ನು ಬದಿಗೆ ಸರಿಸಬೇಕು.