ಬೆಂಗಳೂರು: ಕುಮಾರಸ್ವಾಮಿಯವರೇ ತಿಮಿಂಗಿಲ ಯಾರೆಂದು ಹೇಳಿದರೆ ಪ್ರಕರಣ ಮುಗಿಯುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರೇವಣ್ಣ ಪ್ರಕರಣ ರಾಜಕೀಯ ಪ್ರೇರಿತ. ಇದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿ ಪ್ರತಿಕ್ರಿಯಿಸಿದ ಅವರು ಪ್ರತಿದಿನ ಒಂದೊಂದು ಹೇಳಿಕೆ ಕೊಡುತ್ತಾರೆ. ದಾಖಲೆ ಕೊಟ್ಟ ನಂತರ ತನಿಖೆ ಮಾಡಲಿಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಪ್ರಜ್ವಲ್ ರೇವಣ್ಣ ಇಂದು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆಯೇ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ನಿಮಗೆ ಮಾಹಿತಿ ಇದೆಯೇ, ಹೇಳಿ. ಟಿಕೆಟ್ ಬುಕ್ ಆಗಿರುವ ಬಗ್ಗೆ ಮಾಹಿತಿ ತಮಗೆ ಇದೆಯಾ. ಗೃಹ ಇಲಾಖೆಗೆ ಮಾಹಿತಿ ಇರುತ್ತದೆ. ನಿಮಗೆ ಹೇಳಲು ಆಗಲ್ಲ. ನಿಮಗೆ ಗೊತ್ತಿದ್ದರೆ ಹೇಳಿ ತನಿಖೆಗೆ ಸಹಾಯ ಆಗುತ್ತದೆ ಎಂದು ತಿಳಿಸಿದರು.
ಪ್ರಜ್ವಲ್‌ರನ್ನು ಕರೆಸಲು ಏನು ಮಾಡಬೇಕೋ ಅದನ್ನು ಎಸ್‌ಐಟಿ ಮಾಡುತ್ತಿದೆ ಎಂದರು ೧೦೭ ಸಾಹಿತಿಗಳು ಸಿಎಂಗೆ ಬರೆದ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿ, ಸಾಹಿತಿಗಳು ಬರೆದ ಪತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಹಿತಿಗಳು ಸಮಾಜದ ಬಗ್ಗೆ ಕಳಕಳಿ ಇರುವವರು. ಅನೇಕ ವಿಷಯಗಳನ್ನು ನಿತ್ಯ ಗಮನಿಸಿರುತ್ತಾರೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎಸ್.ಐ.ಟಿ ಎಲ್ಲವನ್ನೂ ಪರಿಗಣಿಸುತ್ತದೆ ಎಂದು ತಿಳಿಸಿದರು.