ನಾಡಸೇವೆಗೆ ಅವಕಾಶವೇ ಅಪರೂಪ

ತಲೆಮಾರು
Advertisement

ದೇಶಕ್ಕಾಗಿ ಬಲಿದಾನಗೈವ ಅಪರೂಪದ ಅವಕಾಶ ಲಭಿಸಿದಾಗ ಅದನ್ನು ಬಹುಪ್ರೀತಿಯಿಂದ ಅಪ್ಪಿದ ಸಾವಿರ ಸಾವಿರ ಕ್ರಾಂತಿಕಾರಿಗಳ ಕ್ಷಾತ್ರಗಾಥೆ ಅತುಲ್ಯ. ಹಿಂದುಸ್ಥಾನದ ಅತ್ಯಪರೂಪದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸಿ ನಾಡಿನ ಕೀರ್ತಿಧ್ವಜವನ್ನು ದಿಗ್ದಿಗಂತದೆತ್ತರ ರಾರಾಜಿಸಿದ ಪುಣ್ಯಶಾಲಿಗಳ ಸ್ಮರಣೆಯೇ ಚೇತೋಹಾರಿ. ವಯಸ್ಸು, ವೈಯಕ್ತಿಕ ಆಸೆ, ಸ್ಥಾನ, ಅಧಿಕಾರದ ಸುತ್ತ ಗಿರಕಿ ಹೊಡೆಯದೆ ತಾಯ್ನೆಲದ ಮುಕ್ತಿಯೊಂದನ್ನೇ ಅಂತಿಮ ಗುರಿಯನ್ನಾಗಿಸಿ ಹೋರಾಡುವುದು ಸುಲಭದ ಸಂಗತಿಯಲ್ಲ. ಅಪಸವ್ಯಗಳ ನಡುವೆಯೇ ಬೆಳ್ಳಿರೇಖೆಯನ್ನು ನೋಡಲೋಸುಗ ಚಂದನದಂತೆ ಜೀವ ತೇಯ್ದ ಅಂಡಮಾನ್ ಕರಿನೀರ ಶಿಕ್ಷೆಗೆ ಗುರಿಯಾದ ಮಹಾವೀರ ಸಿಂಗ್ ರಾಥೋಡರ ಸ್ಮೃತಿದಿನ ಮತ್ತು ಸ್ವಾತಂತ್ರ‍್ಯದ ಜೊತೆಜೊತೆಗೆ ಹಿಂದೂ ಏಕತೆಯ ವಿಶಾಲ ದೃಷ್ಟಿಕೋನದ ಮಹಾಮಹಿಮ ವೈದ್ಯನಾಥ ಅಯ್ಯರರ ಜನ್ಮದಿನ ಸಾಹಸೀ ಪೂರ್ವಿಕರ ನೆನೆಯಲೊಂದು ಕಾರಣ.
ಭಾರತದ ಸ್ವಾತಂತ್ರ‍್ಯ ಪ್ರಾಪ್ತಿಗಾಗಿ ನಡೆಯುತ್ತಿರುವ ಪ್ರಚಂಡ ಹೋರಾಟದಲ್ಲಿ ನಾನು ಭಾಗೀದಾರನೆಂಬುವುದೇ ನನಗೆ ಹೆಮ್ಮೆ. ಬ್ರಿಟಿಷರನ್ನು ಮಟ್ಟಹಾಕಿ ನನ್ನ ನಾಡನ್ನು ವಿದೇಶೀಯರ ಕಪಿಮುಷ್ಟಿಯಿಂದ ಮುಕ್ತಗೊಳಿಸುವ ದೀಕ್ಷೆ ತೊಟ್ಟಿರುವ ಕ್ರಾಂತಿಕಾರಿಗಳಿಗೆ ಸರಕಾರ ಅದೆಷ್ಟೇ ಹಿಂಸಿಸಿದರೂ ನಮ್ಮ ನಿಲುವಲ್ಲಿ ಯಾವುದೇ ಬದಲಾವಣೆಯಾಗದು. ದೇಶದ ಮಾನಸಮ್ಮಾನ, ಘನತೆ ಗೌರವಗಳ ರಕ್ಷಣೆಗಾಗಿ ಸದಾ ಸಿದ್ಧರಾಗಿರುವ ತರುಣ ವೃಂದವನ್ನು ಕೆಣಕುವ ಸಾಹಸಕ್ಕೆ ಆಂಗ್ಲರು ಹೊರಡದಿರುವುದು ಒಳ್ಳೆಯದು. ಸಿಂಹದ ಗಾಂಭೀರ್ಯದಿಂದ ಮುನ್ನುಗ್ಗುತ್ತಿರುವ ನಮ್ಮನ್ನು ಮುಟ್ಟಿದರೆ ನಾಶವಾಗುವಿರಿ' ಎಂಬ ಸಿಡಿಲನುಡಿಯ ಲೇಖನದಿಂದ ಕೆಂಪಂಗಿಗಳ ಸರಕಾರವನ್ನು ತರಾಟೆಗೆತ್ತಿ ಭಾರತೀಯ ಯುವಕರಲ್ಲಿ ಸ್ಫೂರ್ತಿ ತುಂಬಿದ ಅಪಾರ ಬಲದ ಸ್ವಾತಂತ್ರ‍್ಯ ಹೋರಾಟಗಾರ ಮಹಾವೀರ ಸಿಂಗ್ ರಾಥೋಡ್, ಅಂಡಮಾನ್ ಕರಿನೀರಿನ ಶಿಕ್ಷೆಯ ನರಕಯಾತನೆಗೆ ಗುರಿಯಾದ ಪ್ರಸಿದ್ಧ ಕ್ರಾಂತಿಕಾರಿ. ಉತ್ತರಪ್ರದೇಶದ ಶಹಾಪುರದಲ್ಲಿ ಜನಿಸಿದ ಮಹಾವೀರ ಸಿಂಗ್, ಬಾಲ್ಯದಲ್ಲೇ ಸಾಹಸ ಬುದ್ಧಿ ಪ್ರದರ್ಶಿಸುತ್ತಿದ್ದ ಮೇಧಾವಿ. ಮಗನ ತುಂಟತನ, ಮುನ್ನುಗ್ಗುವ ಸ್ವಭಾವ ಹಾಗೂ ದೇಶದ ಕುರಿತಾದ ತೀವ್ರ ಕಾಳಜಿ ಆತನ ಭವಿಷ್ಯಕ್ಕೆಲ್ಲಿ ತೊಂದರೆಯಾಗಬಹುದೋ ಎಂಬ ಕಾಳಜಿ ಹೊತ್ತ ತಂದೆ, ಆತನನ್ನು ಕಾನ್ಪುರದಲ್ಲಿ ವಾಸವಿದ್ದ ಸಂಬಂಧಿಕರ ಮನೆಯಲ್ಲಿ ಬಿಟ್ಟರು. ಸ್ವಾತಂತ್ರ‍್ಯ ಹೋರಾಟದ ಶಕ್ತಿಕೇಂದ್ರವೆಂದೇ ಹೆಸರಾಗಿದ್ದ ಕಾನ್ಪುರವಂತೂ ಮಹಾವೀರರ ಯೋಚನೆಗಳಿಗೆ ಪೂರಕ ತಾಣವಾಗಿ ಪರಿಣಮಿಸಿತು. ಗದರ್ ಚಳವಳಿಯ ಪ್ರಭಾವ ಭಾರತದಾದ್ಯಂತ ವ್ಯಾಪಿಸುತ್ತಿದ್ದಂತೆ ಜಾಗೃತರಾದ ದೇಸೀ ಕ್ರಾಂತಿಕಾರಿ ನಾಯಕರು ಆ ಕಾವನ್ನು ದೇಶದ ಮೂಲೆಮೂಲೆಗಳಿಗೆ ಹರಡಲು ನಿಶ್ಚಯಿಸಿದರು. ಅದಾಗಷ್ಟೇ ಹನ್ನೆರಡರ ಹರೆಯಕ್ಕೆ ಕಾಲಿಟ್ಟಿದ್ದ ರಾಥೋಡ್, ಗುಪ್ತ ಕಾರ್ಯಸೂಚಿಯ ಸಾಕಾರತೆಯ ಹೊಣೆ ಹೊತ್ತರು. ಗದರ್ ಚಳವಳಿಗೆ ಸಂಬಂಧಿಸಿದ ಮಾಹಿತಿ ಕರಪತ್ರಗಳನ್ನು ಯಾರಿಗೂ ಅನುಮಾನ ಬರದಂತೆ ಕಾನ್ಪುರ ನಗರದಲ್ಲಿ ಹಂಚಿದ ರಾಥೋಡ್, ಪೊಲೀಸರ ದೃಷ್ಟಿಯಲ್ಲಿ ಸಾಮಾನ್ಯ ಹುಡುಗ. ಆದರೆ ಕ್ರಾಂತಿ ವಿಸ್ತಾರಕ್ಕೆ ಅವರಿತ್ತ ಕೊಡುಗೆ ಅಸಾಮಾನ್ಯ. ತಮ್ಮ ಮೇಲೆ ಪೊಲೀಸರ ಕಣ್ಣು ಬಿದ್ದಿದೆಯೆಂಬ ಅನುಮಾನ ಬಂದಾಗ ಏನೂ ಅರಿಯದವನಂತೆ ನಟಿಸಿ ತಪ್ಪಿಸುತ್ತಿದ್ದ ರಾಥೋಡ್, ಕಾಲೇಜು ಶಿಕ್ಷಣಕ್ಕೆ ಕಾಲಿಡುತ್ತಲೇ ಪರಿಪೂರ್ಣ ಕ್ರಾಂತಿಕಾರಿಯಾಗಿ ಬದಲಾದರು. ಬ್ರಿಟಿಷ್ ಸರಕಾರದ ಕಣ್ತಪ್ಪಿಸಿ ಓಡಾಡುವುದೇ ಕಷ್ಟವಾಗಿದ್ದ ಕಾಲದಲ್ಲಿ ಯಾರಿಗೂ ಯಾವ ಅನುಮಾನವೂ ಬರದಂತೆ ಕ್ರಾಂತಿಸಾಹಿತ್ಯವನ್ನು ಪಸರಿಸುತ್ತಿದ್ದ ರಾಥೋಡ್, ಸ್ನೇಹಿತವಲಯದಲ್ಲಿಏಜೆಂಟ್ ರಾಥೋಡ್’ ಎಂದೇ ಪ್ರಖ್ಯಾತರಾದರು.
ಭಗತ್ ಸಿಂಗ್, ಆಜಾದರ ಪ್ರಭಾವದಿಂದ ನೌಜವಾನ್ ಭಾರತ್ ಸಭಾದ ಸಕ್ರಿಯ ಸದಸ್ಯರಾದ ರಾಥೋಡ್, ಸಶಸ್ತ್ರ ಕ್ರಾಂತಿಗೆ ಬೇಕಾದ ಪ್ರತಿಯೊಂದು ಕಾರ್ಯವನ್ನೂ ತೆರೆಮರೆಯಲ್ಲಿ ನಿಂತೇ ನಿರ್ವಹಿಸಿದರು. ಬ್ರಿಟಿಷರಿಗೆ ಕೊಂಚವೂ ಸಂಶಯ ಬರದಂತೆ ಭಗತ್ ಸಿಂಗ್, ಬಟುಕೇಶ್ವರ ದತ್ತ ಹಾಗೂ ದುರ್ಗಾವತಿ ದೇವಿಯರನ್ನು ರೈಲುಪ್ರಯಾಣದ ಮೂಲಕ ಗಡಿ ದಾಟಿಸಿದ ರಾಥೋಡ್ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸದಾ ಮುಂದು. ಕ್ರಾಂತಿಕಾರಿಗಳಿಗೆ ಸಂಬಂಧಿಸಿದ ಯಾವುದೇ ಕಾರ್ಯವಾದರೂ ಅದನ್ನು ತಪ್ಪಿಲ್ಲದಂತೆ ಪೂರ್ಣಗೊಳಿಸುತ್ತಿದ್ದ ಶೈಲಿ, ಭಾರತ್ ಸಭಾದ ಹಿರಿಕಿರಿಯರ ಮೆಚ್ಚುಗೆಗೆ ಪಾತ್ರವಾಯಿತು. ದುರ್ದೈವವಶಾತ್ ಐತಿಹಾಸಿಕ ಲಾಹೋರ್ ಪಿತೂರಿಯ ತರುವಾಯ ಬಂಧಿತರಾದ ಮಹಾವೀರ ಸಿಂಗ್ ಕರಿನೀರಿನ ಶಿಕ್ಷೆಗೆ ಗುರಿಯಾದರು. ಸರಕಾರದ ಕ್ರೂರ, ಅಮಾನವೀಯ ನಡೆಗೆ ವಿರುದ್ಧವಾಗಿ ಸೆಟೆದು ನಿಂತು ಸೆರೆಮನೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ ಸಹಕೈದಿಗಳ ವಿಶ್ವಾಸ ಸಂಪಾದಿಸಿದರು. ಕ್ರಾಂತಿಕಾರಿಗಳ ಹಕ್ಕನ್ನು ಕಸಿದ ಮೇಲಧಿಕಾರಿಗಳಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ ಸಿಂಗ್, ಸೆರೆಮನೆಯೊಳಗೂ ಗುಪ್ತಕೋಟೆ ಕಟ್ಟಲಾರಂಭಿಸಿದರು. ಹಂತಹಂತವಾಗಿ ಬಿಡುಗಡೆಯಾಗಲಿದ್ದ ರಾಜಕೀಯ ಕೈದಿಗಳನ್ನು ಸಂಪರ್ಕಿಸಿ ಅವರವರ ಊರಲ್ಲಿ ಸಭಾದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಸೂಚಿಸಿದರು. ಉಪವಾಸದ ಕಾವು ಏರುತ್ತಲೇ, ಅದು ದೇಶದ ಇತರ ಸೆರೆಮನೆಗಳಿಗೆ ಹರಡಬಾರದೆಂಬ ಉದ್ದೇಶದಿಂದ ಎಚ್ಚೆತ್ತ ಪೊಲೀಸರು ರಾಥೋಡರ ಗಂಟಲಿಗೆ ಬಲವಂತವಾಗಿ ಆಹಾರ ತುರುಕುವ ಮೂಲಕ ಇಪ್ಪತ್ತರ ಆ ತರುಣನನ್ನು ಕೊಲೆಗೈದು ಅನೀತಿ ಮೆರೆದರು. ಆ ಅಂತಿಮ ಕ್ಷಣದಲ್ಲೂ ನಾಡಿನ ಸುಂದರ ನಾಳೆಗಳನ್ನೇ ಕನವರಿಸಿ ಮರಳಿ ಬಾರದ ಲೋಕಕ್ಕೆ ತೆರಳಿದ ರಾಥೋಡ್, ನಿಜವಾಗಿಯೂ ಮಹಾವೀರರೇ ಹೌದು.
`ವಿದೇಶೀ ಪ್ರಜೆಗಳು ಬಂದಾಗ ಅವರನ್ನು ಸ್ವಾಗತಿಸಿ ಸಂಭ್ರಮಿಸುವ ನಾವು ನಮ್ಮದೇ ದೇಶದಲ್ಲಿ ಹುಟ್ಟಿ ನಮ್ಮೊಂದಿಗೆ ಬೆಳೆದ ಸೋದರರ ಬಗ್ಗೆ ಅಸಡ್ಡೆ, ಅಸಹ್ಯ ವ್ಯಕ್ತಪಡಿಸುವುದೇಕೆ? ದೇವರ ಸೃಷ್ಟಿಯಲ್ಲಿ ಎಲ್ಲವೂ ಸಮಾನ ಹಾಗೂ ಎಲ್ಲರೂ ಸಮಾನರೆಂಬ ಸತ್ಯದ ಅರಿವಿದ್ದರೂ ಕೇವಲ ಹುಟ್ಟಿನ ಆಧಾರದ ಮೇಲೆ ಅವರನ್ನು ದೂರವಿಡುವುದು ಸೂಕ್ತವಲ್ಲ. ಹಿಂದುಗಳಾಗಿ ಜನಿಸಿದ ದಲಿತರು ದೇವಸ್ಥಾನಕ್ಕೆ ಪ್ರವೇಶಿಸುವುದು ಕ್ರಾಂತಿಗಾಗಿ ಅಲ್ಲ, ಅದು ದೇಶದ ಉನ್ನತ ಪರಂಪರೆಯ ಉಳಿವಿಗಾಗಿ. ಭಗವಂತನ ಆಯ್ಕೆಯಾದ ಹುಟ್ಟನ್ನು ಅವಮಾನಿಸದೆ ಸಕಲ ಜೀವಗಳನ್ನೂ ಪ್ರೀತಿಸುವ ಉದಾರಹೃದಯಿಗಳು ನಾವಾಗದಿದ್ದರೆ ಮಾನವರಾಗಿ ಜನಿಸಿದ ಸಾರ್ಥಕತೆಯೇನು’ ಎಂಬ ಪ್ರಶ್ನೆಯಿಂದ ಎಂಟು ದಶಕಗಳ ಹಿಂದೆಯೇ ಹಿಂದೂ ಏಕತೆಗಾಗಿ ಶ್ರಮಿಸಿ ದಲಿತರಿಗೆ ದೇಗುಲ ಪ್ರವೇಶದ ಅವಕಾಶ ಕಲ್ಪಿಸಿ ಇತಿಹಾಸ ನಿರ್ಮಿಸಿದ ಕ್ರಾಂತಿಕಾರಿ ಸಮಾಜ ಸುಧಾರಕ, ಸ್ವಾತಂತ್ರ‍್ಯ ಹೋರಾಟಗಾರ, ಜಾತೀಯ ವ್ಯವಸ್ಥೆಗೆ ಮಂಗಳ ಹಾಡಲು ತನ್ನ ಬದುಕನ್ನೇ ಪಣವಾಗಿಟ್ಟ ಮಧುರೈ ವೈದ್ಯನಾಥ ಅಯ್ಯರ್, ಉಪೇಕ್ಷಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವಿರತ ದುಡಿದ ಪ್ರಾತ:ಸ್ಮರಣೀಯ ಚೇತನ. ತಮಿಳುನಾಡಿನ ತಂಜಾವೂರಿನಲ್ಲಿ ಜನಿಸಿದ ವೈದ್ಯನಾಥರು ಚಿನ್ನದ ಪದಕದೊಂದಿಗೆ ಪದವಿ ಉತ್ತೀರ್ಣರಾಗಿ ಮದ್ರಾಸ್ ವಿಶ್ವವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅಯ್ಯರ್, ಸ್ವಲ್ಪ ಸಮಯದ ಬಳಿಕ ಕಾನೂನು ಪದವಿ ಸಂಪಾದಿಸುವ ಹಿನ್ನೆಲೆಯಲ್ಲಿ ವೃತ್ತಿಗೆ ರಾಜೀನಾಮೆಯಿತ್ತರು. ಪದವಿ ಮುಗಿಯುತ್ತಲೇ ಗಾಂಧೀಜಿಯವರ ವೈಚಾರಿಕ ಚಿಂತನೆ, ಸುಬ್ರಹ್ಮಣ್ಯ ಭಾರತಿಯವರ ರಾಷ್ಟ್ರೀಯತೆಯ ಕವನಗಳಿಂದ ಪ್ರೇರಿತರಾಗಿ ಸ್ವಾತಂತ್ರ‍್ಯ ಚಳವಳಿಗೆ ಧುಮುಕಿದರು. ಅಸಹಕಾರ ಆಂದೋಲನದಲ್ಲಿ ಭಾಗವಹಿಸಿ ಯುವಸಮಾಜದ ಧ್ವನಿಯಾದ ಅಯ್ಯರ್, ತಪುö್ಪಗಳನ್ನು ತಪ್ಪೆಂದು ಘೋಷಿಸಲು ಯಾವ ಹಿಂಜರಿಕೆಯನ್ನೂ ಅನುಭವಿಸಲಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಧರ್ಮಶಿಕ್ಷಣ ದೊರಕಿದಾಗ ಮಾತ್ರವೇ ಲಬ್ಧ ಸ್ವಾತಂತ್ರ‍್ಯದ ಉಳಿವು ಸಾಧ್ಯವೆಂದು ಪ್ರತಿಕ್ರಯಿಸಿದ ಅಯ್ಯರ್, ಆ ದಿಶೆಯಲ್ಲೂ ಕಾರ್ಯಪ್ರವೃತ್ತರಾದರು. ವೇದಾರಣ್ಯಂ ಉಪ್ಪಿನ ಸತ್ಯಾಗ್ರಹದ ನಾಯಕತ್ವ ವಹಿಸಿದ ವೈದ್ಯನಾಥರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹುರಿದುಂಬಿಸಿದರು.
ಸತ್ಯಾಗ್ರಹದ ಸಂದರ್ಭದಲ್ಲಿ ನೀಡಿದ ಪ್ರಖರ ಭಾಷಣ, ಬರೆದ ಲೇಖನಗಳಿಗಾಗಿ ಅನೇಕ ಬಾರಿ ಸರಕಾರದಿಂದ ಕಟುಹೇರಿಕೆಯ ಒತ್ತಡ ಬಂದರೂ ಅದನ್ನು ನಿರ್ಲಕ್ಷಿಸಿದ ಅಯ್ಯರ್, ತಮ್ಮ ಸತ್ಯಪಥದಿಂದ ಹಿಮ್ನೆಟ್ಟಲಿಲ್ಲ. ಬಂಧನ, ಜೈಲು, ಜೀವಾವಧಿ, ಗಲ್ಲುಶಿಕ್ಷೆಗಳಿಗೆ ಹೆದರುವ ಪುಕ್ಕಲರು ದೇಶಕ್ಕೆ ಭಾರವೆಂದು ಸಾರಿದ ವೈದ್ಯನಾಥರು, ಯಾವುದೇ ಕಾರಣಕ್ಕೂ ಭಾರತೀಯರು ಬ್ರಿಟಿಷರೆದುರು ಮಂಡಿಯೂರಬಾರದೆಂದು ಆಗ್ರಹಿಸಿದರು. ಯುದ್ಧಾ ರಂಭದ ಮೊದಲೇ ಸೋಲೊಪ್ಪಿಕೊಳ್ಳುವುದು ಅವಮಾನಕರವೆಂಬ ಎಚ್ಚರಿಕೆಯ ಸಂದೇಶವಿತ್ತು ಶತ್ರುಗಳನ್ನು ಬಾಹುಬಲಕ್ಕಿಂತಲೂ ಬುದ್ಧಿ ಬಲದಿಂದಲೇ ಗೆಲ್ಲುವುದು ರಣತಂತ್ರವೆಂದು
ಅರುಹಿದರು. ದೀನದಲಿತರ ಏಳಿಗೆಗಾಗಿ ಸೇವಾಲಯಂ ಸ್ಥಾಪಿಸಿದ ವೈದ್ಯನಾಥರು ತಮಿಳುನಾಡಿನ ಭಗವಜ್ಜನ ಸೇವಕ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ದಲಿತರ ದೇಗುಲ ಪ್ರವೇಶ ಕಾರ್ಯಕ್ರಮಕ್ಕೆ ತಡೆಯೊಡ್ಡಿದರೆ ಹಿಂದುತ್ವದ ನಾಶಕ್ಕೆ ಮುಂದಡಿಯಿಟ್ಟಂತೆಂದು ವ್ಯಾಖ್ಯಾನಿಸಿ ತಾವೇ ಮುಂದೆ ನಿಂತು ಅವರನ್ನು ದೇಗುಲದೊಳಗೆ ಕರೆದರಲ್ಲದೆ ತಮಿಳುನಾಡಿನ ಇತಿಹಾಸದಲ್ಲಿ ಹೊಸ ಅಧ್ಯಾಯ ಅರಂಭಿಸಿದರು. ಸ್ವಾತಂತ್ರ‍್ಯಾನಂತರವೂ ಸಾಮಾಜಿಕವಾಗಿ ತೊಡಗಿಸಿ ಸಮಾನತೆಯ ಹರಿಕಾರರೆನಿಸಿದ ಅಯ್ಯರ್, ಭಾರತೀಯ ಚಿಂತನೆಗೆ ಹೊಸಭಾಷ್ಯ ಬರೆದ ಪುಣ್ಯಾತ್ಮರೇ ಹೌದು.