ಮತ್ತೆ ರೂಪಾಯಿಯ ಗಂಭೀರ ಕುಸಿತ ಆರಂಭವಾಗಿದೆ. ಜುಲೈ ಒಂದರಂದು ರೂಪಾಯಿ ಮೌಲ್ಯ ಒಂದು ಡಾಲರ್ಗೆ ೭೯ಕ್ಕೆ ಕುಸಿದಿದ್ದು, ಶೀಘ್ರ ೮೦ಕ್ಕೆ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ವಿದೇಶಿ ವಿನಿಮಯ ಪೇಟೆಯ ವಿಶ್ಲೇಷಕರು ತಿಳಿಸಿದ್ದಾರೆ.
ಈ ಹಿಂದೆಯೂ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ೮೦ಕ್ಕೆ ಕುಸಿದಿತ್ತು. ಈಗ ಇದೇ ಹಳೆಯ ಕಥೆ ಪುನರಾವರ್ತನೆಯಾಗಲಿರುವದು ಅಚ್ಚರಿಯಾದರೂ ಸತ್ಯ. ರಷ್ಯ-ಉಕ್ರೇನ್ ಸಮರ ಆರಂಭವಾದಾಗಿನಿಂದಲೇ ಕುಸಿತ ಆರಂಭವಾಯಿತು. ಅಮೆರಿಕದ ಫೆಡರಲ್ ರಿಜರ್ವ್ ಬಡ್ಡಿ ದರ ಏರಿಕೆ ಮಾಡಿದಾಗಲಂತೂ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ದೇಶೀಯ ತೈಲ ಕಂಪನಿಗಳು ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಡಾಲರ್ಗೆ ಸತತವಾಗಿ ಬೇಡಿಕೆ ಸಲ್ಲಿಸುತ್ತಿರುವದು ಕೂಡ ರೂಪಾಯಿಯ ಜಂಘಾಬಲ ಉಡುಗಿಸಿದೆ. ಜೊತೆಗೆ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವದು ಹಾಗೂ ಪೂರೈಕೆಯಲ್ಲಿನ ಸಮಸ್ಯೆ ಕೂಡ ರೂಪಾಯಿ ಕುಸಿತಕ್ಕೆ ತನ್ನದೇ ಆದ ಕಾಣಿಕೆ ನೀಡಿದೆ. ಜುಲೈ ೧ರಂದು ಡಾಲರ್ ವಿರುದ್ಧ ರೂಪಾಯಿ ೭೯.೦೪೫ರಲ್ಲಿ ಮುಕ್ತಾಯಗೊಂಡಿದೆ.
ದೇಶೀಯ ಹಣಕಾಸು ಪೇಟೆಯಲ್ಲಿ ಕಳೆದ ಆರು ತಿಂಗಳಿನಿಂದ ವಿದೇಶಿ ಖಾತಾ ಹೂಡಿಕೆದಾರರು(ಎಫ್ಪಿಐ) ತೀವ್ರ ಮಾರಾಟ ಚಟುವಟಿಕೆಯಲ್ಲಿ ತೊಡಗಿದ್ದು, ಈಕ್ವಿಟಿ ಹಾಗೂ ಡೆಟ್ಗಳ ಮೇಲಿನ ಸುಮಾರು ೩೦ ಶತಕೋಟಿ ಡಾಲರ್ ಮೌಲ್ಯದ ಹೂಡಿಕೆಯನ್ನು ವಾಪಾಸ್ ತೆಗೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯ ಹೊಯ್ದಾಟದ ಪರಿಣಾಮವಾಗಿ ದೇಶದ ವಾಣಿಜ್ಯ ಕೊರತೆ ಪ್ರತಿ ತಿಂಗಳು ೨೩-೨೪ ಶತಕೋಟಿ ಡಾಲರ್ದಷ್ಟಾಗುತ್ತಿದೆ. ಪ್ರಸಕ್ತ ಸಾಲಿನ ಆರಂಭದಿಂದಲೂ ದೇಶದ ವಿದೇಶಿ ವಿನಿಮಯ ಸಂಗ್ರಹ ಕಡಿಮೆಯಾಗುತ್ತಲೇ ಬಂದಿದೆ. ಜೂನ್ ೧೭ರ ಹೊತ್ತಿಗೆ ೫೯೦.೫೮೮ ಶತಕೋಟಿ ಡಾಲರ್ದಷ್ಟು ವಿದೇಶಿ ವಿನಿಮಯ ಸಂಗ್ರಹ ಇದ್ದು, ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಪ್ರಮಾಣಕ್ಕಿಂತ ೧೩.೩೪೫ ಶತಕೋಟಿ ಡಾಲರ್ದಷ್ಟು ಕಡಿಮೆಯಾಗಿದೆ. ತಜ್ಞರ ಪ್ರಕಾರ ರೂಪಾಯಿ ಕುಸಿತ ತಡೆಗಟ್ಟಲು ರಿಜರ್ವ್ ಬ್ಯಾಂಕ್ ಡಾಲರ್ಗಳನ್ನು ಮಾರುತ್ತಿರುವದರಿಂದ ವಿದೇಶಿ ವಿನಿಮಯ ಮೀಸಲು ನಿಧಿಯು ಇಳಿಮುಖವಾಗಿದೆ.
ಫೆಡರಲ್ ರಿಜರ್ವ್ ಗುನ್ನಾ
ಅಮೆರಿಕದ ಫೆಡರಲ್ ರಿಜರ್ವ್ ಬಡ್ಡಿ ದರ ಏರಿಕೆ ಮಾಡಿರುವ ಕಾರಣ ಅಲ್ಲಿನ ಸರಕಾರಿ ಬಾಂಡ್ಗಳು ಹಾಗೂ ಹಣಕಾಸು ಪೇಟೆಯ ಮೇಲಿನ ಹೂಡಿಕೆ ಲಾಭದಾಯಕವಾಗಿದೆ. ಹೀಗಾಗಿ ಭಾರತದ ಹಣಕಾಸು ಪೇಟೆಯ ಮೇಲೆ ಹೂಡಿಕೆ ಮಾಡಿರುವ ಎಫ್ಐಐಗಳು ಹಾಗೂ ಎಫ್ಪಿಐಗಳು ತಮ್ಮ ಬಂಡವಾಳ ಹಿಂಪಡೆಯಲಾರಂಭಿಸಿದ್ದಾರೆ. ಜೂನ್ ತಿಂಗಳಿನಲ್ಲಿ ಎಫ್ಪಿಐಗಳು ಮುಂಬಯಿ ಷೇರುಪೇಟೆಯಲ್ಲಿ ೫೦,೨೦೩ ಕೋಟಿ ರೂಗಿಂತಲೂ ಅಧಿಕ ಪ್ರಮಾಣದ ಬಂಡವಾಳ ವಾಪಸ್ ಪಡೆದಿದ್ದಾರೆ. ೨೦೨೦, ಮಾರ್ಚ್ ತಿಂಗಳ ನಂತರ ಇದು ಷೇರುಪೇಟೆಯ ಇತಿಹಾಸದಲ್ಲೇ ಅತ್ಯಂತ ಕರಾಳ ವ್ಯವಹಾರವೆಂದು ದಾಖಲಾಗುವಂತಾಗಿದೆ. ೨೦೨೦ರ ಮಾರ್ಚ್ ತಿಂಗಳಿನಲ್ಲಿ ಕೋವಿಡ್ ಪರಿಣಾಮವಾಗಿ ೬೧,೯೭೩ ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಎಫ್ಪಿಐಗಳು ೨೦೨೧ ಅಕ್ಟೋಬರ್ ತಿಂಗಳಿನಿಂದಲೇ ಮಾರಾಟ ಚಟುವಟಿಕೆ ಆರಂಭಿಸಿದ್ದು, ಪ್ರಸಕ್ತ ಸಾಲಿನ ಜೂನ್ ಅಂತ್ಯಕ್ಕೆ ಕೊನೆಗೊಂಡ ಒಂಭತ್ತು ತಿಂಗಳ ಅವಧಿಯಲ್ಲಿ ಒಟ್ಟು ೨.೫೬ ಲಕ್ಷ ಕೋಟಿ ರೂ ಬಂಡವಾಳವನ್ನು ಹಿಂತೆಗೆದುಕೊಂಡಿದ್ದಾರೆ. ಒಂದು ವೇಳೆ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕಡಿಮೆಯಾಗಿ, ಫೆಡರಲ್ ರಿಜರ್ವ್ ಬಡ್ಡಿ ದರ ಏರಿಕೆ ನಿಲ್ಲಿಸಿದರೆ ಎಫ್ಪಿಐಗಳು ಮತ್ತೆ ಹಳೆ ಗಂಡನ ಪಾದವೇ ಗತಿ ಎಂದು ಭಾರತದ ಹಣಕಾಸು ಪೇಟೆಯತ್ತ ಮುಖ ಮಾಡಲಿದ್ದಾರೆ.
ಪರಿಣಾಮವೇನು…?
ರೂಪಾಯಿ ಮೌಲ್ಯ ಕುಸಿತ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಆಮದು-ರಫ್ತು ವಹಿವಾಟು ಡಾಲರ್ ಮುಖಾಂತರ ನಡೆಯುತ್ತದೆ. ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿದರೆ ಆಮದು ದುಬಾರಿಯಾಗಿ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ವಾಣಿಜ್ಯ ಕೊರತೆ ಹೆಚ್ಚಾಗುತ್ತದೆ. ಸದ್ಯಕ್ಕೆ ಹೆಚ್ಚುತ್ತಿರುವ ಕಚ್ಚಾ ತೈಲ ಆಮದು ಬಿಲ್ ೨೦೨೨-೨೩ನೇ ಸಾಲಿನಲ್ಲಿ ದೇಶದ ವಾಣಿಜ್ಯ ಕೊರತೆ ಒಟ್ಟು ಜಿಡಿಪಿಯಲ್ಲಿ ಶೇ.೩ಕ್ಕಿಂತ ಅಧಿಕ ಪಾಲು ಪಡೆಯುವಂತೆ ಮಾಡಲಿದೆ ಎಂದು ಹೇಳಲಾಗಿದೆ. ಪ್ರಸಕ್ತ ಸಾಲಿನ ಮೇ ತಿಂಗಳಿನಲ್ಲಿ ವಾಣಿಜ್ಯ ಕೊರತೆ ೨೪.೨೯ ಶತಕೋಟಿ ಡಾಲರ್ದಷ್ಟಾಗಿದ್ದು, ಕಳೆದ ವರ್ಷ ಮೇ ತಿಂಗಳಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಇದರಲ್ಲಿ ಕಚ್ಚಾ ತೈಲ ಆಮದು ಬಿಲ್ ೧೯.೧೯ ಶತಕೋಟಿ ಡಾಲರ್ದಷ್ಟಾಗಿದೆ. ಈಗ ರೂಪಾಯಿ ಕುಸಿದಿದ್ದರಿಂದ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಚ್ಚಾ ತೈಲ ಬೆಲೆ ಕೂಡ ಇನ್ನೂ ಏರುಗತಿಯಲ್ಲೇ ಇರುವ ಕಾರಣ ಪೆಟ್ರೋಲ್, ಡೀಸೇಲ್ ಬೆಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ರೂಪಾಯಿ ಕುಸಿತ ಪರೋಕ್ಷವಾಗಿ ಹಣದುಬ್ಬರ ಹೆಚ್ಚಳಕ್ಕೂ ಕಾರಣವಾಗಿದೆ.
ಒಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಂತೂ ಡಾಲರ್ ವಿರುದ್ಧ ರೂಪಾಯಿ ಚೇತರಿಕೆ ಕಷ್ಟ. ಹೀಗಾಗಿ ದೇಶದ ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿರುವ ಕಲ್ಲು ಮುಳ್ಳುಗಳ ಪೈಕಿ ರೂಪಾಯಿ ಕುಸಿತ ವಿದ್ಯಮಾನವು ಕೂಡ ಒಂದಾಗಿದೆ.