ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ

Advertisement

ಬೆಂಗಳೂರು: ಹಾಸನದ ಪೆನ್‌ಡ್ರೈವ್ ಪ್ರಕರಣದ ಪಾಶ ದಿನೇ ದಿನೇ ಬಿಗಿಯಾಗುತ್ತಿದ್ದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವುದರೊಂದಿಗೆ ಹೊಸ ಕಂಟಕ ಎದುರಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆ ಎಸ್‌ಐಟಿ ಅಧಿಕಾರಿಗಳ ಮುಂದೆ ರೇವಣ್ಣ-ಪ್ರಜ್ವಲ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ ಬೆನ್ನಲ್ಲೇ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸೆಕ್ಷನ್ ಅನ್ನು ಎಫ್‌ಐಆರ್‌ನಲ್ಲಿ ಸೇರ್ಪಡೆ ಮಾಡುವುದ ರೊಂದಿಗೆ ಇಡೀ ಪ್ರಕರಣ ಹೊಸ ಮಜಲು ಪಡೆದುಕೊಂಡಿದೆ.
ಲುಕ್‌ಔಟ್ ನೋಟಿಸ್ ಜಾರಿ: ಈ ಮಧ್ಯೆ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ಗುರುವಾರ ಲುಕ್‌ಔಟ್ ನೋಟಿಸ್ ನೀಡಿದ್ದು ಎಲ್ಲಾ ದೇಶೀಯ-ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಿಗೆ ಮಾಹಿತಿ ರವಾನಿಸಿರುವುದು ಪ್ರಜ್ವಲ್ ಬಂಧನಕ್ಕೆ ವೇದಿಕೆ ಸಜ್ಜುಗೊಳಿಸಿದೆ. ಮತ್ತೊಂದೆಡೆ ಗುರುವಾರ ವಿಚಾರಣೆಗೆ ಎಸ್‌ಐಟಿ ಮುಂದೆ ಹಾಜರಾಗದ ಎಚ್.ಡಿ.ರೇವಣ್ಣ ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣವೂ ದಾಖಲಾಗುತ್ತಿದ್ದಂತೆಯೇ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ಆರಂಭವಾಗಿದ್ದು ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿ ನಾಳೆಗೆ ವಿಚಾರಣೆ ಮುಂದೂಡಲಾಗಿದೆ. ಒಂದು ವೇಳೆ ನ್ಯಾಯಾಲಯ ಜಾಮೀನು ನಿರಾಕರಿಸಿದರೆ ಎಸ್‌ಐಟಿ ಮುಂದೆ ಹಾಜರಾಗುವುದು ರೇವಣ್ಣಗೆ ಅನಿವಾರ್ಯವಾಗಲಿದೆ. ತಪ್ಪಿದ್ದಲ್ಲಿ ಬಂಧನದ ಸಾಧ್ಯತೆ ನಿಚ್ಚಳವಾಗಿದೆ.
ದುಬೈಗೆ ಪರಾರಿ: ಏತನ್ಮಧ್ಯೆ ಜರ್ಮನಿಯ ಫ್ರಾಂಕ್‌ಫರ್ಟ್ಗೆ ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣ ಬುಧವಾರ ರಾತ್ರಿ ಏಕಾಏಕಿ ದುಬೈಗೆ ತೆರಳಿದ್ದಾರೆಂದು ಹೇಳಲಾಗಿದೆ. ನಾಳೆ ಪ್ರಜ್ವಲ್ ಸಹ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವರೆನ್ನಲಾಗಿದ್ದು ಜೂನ್ ೧೫ರ ರಾತ್ರಿ ಬೆಂಗಳೂರಿಗೆ ಆಗಮಿಸುವರೆಂದು ಬಲ್ಲಮೂಲಗಳು ತಿಳಿಸಿವೆ.