ಪ್ರಶಾಂತ ಕಿಶೋರೇನೂ ದೊಡ್ಢ ಇದು ಅಲ್ಲ. ಯಾವತ್ತೂ ನನ್ನ ಆಂತರಿಕ ಸಮೀಕ್ಷೆಗಳೇ ನಿಜವಾಗಿವೆ ಎಂದು ತಿಗಡೇಸಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.
ಹಗಲೂ ರಾತ್ರಿ ಕಷ್ಟಪಟ್ಟು ಜನರನ್ನು ಸಂಪರ್ಕ ಮಾಡಿದ್ದೇನೆ. ಒಂದೊಂದು ಕ್ಷೇತ್ರದಲ್ಲಿ ಕನಿಷ್ಟ ಮೂರ್ನಾಲ್ಕು ಆರ್ಎಂಪಿ ಡಾಕ್ಟರ್ಗಳನ್ನು ಸಂಧಿಸಿ ಜನರ ನಾಡಿ ಮಿಡಿತ ತಿಳಿದುಕೊಂಡಿದ್ದೇನೆ. ಸಾವಿರಾರು ರೂ. ಖರ್ಚು ಮಾಡಿ ಕರೆನ್ಸಿ ಹಾಕಿಸಿ ಜನರನ್ನು ಸಂಪರ್ಕ ಮಾಡಿದ್ದೇನೆ. ಅವರೆಲ್ಲರ ಮನಸ್ಸನ್ನು ಅರಿತು ನಾನು ಸಮೀಕ್ಷೆ ಮಾಡಿದ್ದೇನೆ. ಅದೇ ನಿಜವಾಗುತ್ತೆ ನೋಡುತಿರಿ ಎಂದು ಹೇಳಿದ. ಈ ಸುದ್ದಿ ಅವರಿವರಿಗೆ ಗೊತ್ತಾಗಿ ಒಂದು ದಿನ ತಳವಾರ್ಕಂಟಿ ತಿಗಡೇಸಿ ಮನೆಗೆ ಬಂದು ಏನಪ್ಪಾ ನಿನ್ನ ಸಮೀಕ್ಷೆ ಎಂದು ಕೇಳಿದ. ಅದಕ್ಕೆ ತಿಗಡೇಸಿ ಹಾಗೆಲ್ಲ ಹೇಳೋಕೆ ಆಗಲ್ಲ.. ನಿಜ ಗೊತ್ತಾದರೆ ಪಕ್ಷದವರು ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಹೇಳಿದ. ಹಾಗಾದರೆ ಸಮೀಕ್ಷೆ ಯಾಕೆ ಮಾಡಬೇಕು? ಎಂದು ಕೇಳಿದರೆ… ಅದರ ಹಿಂದೆ ದೊಡ್ಡ ಕಹಾನಿ ಇದೆ ಅದನ್ನು ಹೇಳುತ್ತ ಕುಳಿತರೆ ನಾಲ್ಕು ದಿನವಾದರೂ ಬೇಕು. ನೋಡಪ.. ನನ್ನ ಸಮೀಕ್ಷೆ ಹೊರಬಿಟ್ಟರೆ ಮೊದಲು ಬರುವುದೇ ಸೋದಿ ಮಾಮರ ಫೋನು. ಅದಾದ ನಂತರ ಸೋನಮ್ಮ.. ಕೆಂಪುಡುಗ.. ಆ ಸಮತಾ ದೀದೆವ್ಚ… ಒಬ್ಬರಾ ಇಬ್ಬರಾ..? ಎಲ್ಲರೂ ಕಾಲ್ ಮಾಡುತ್ತಾರೆ. ಹಾಗಾಗಿ ಸುಮ್ಮನೇ ಯಾಕೆ ಲಫಡಾ ಅಂತ ಸುಮ್ಮನಿದ್ದೇನೆ ಎಂದು ಹೇಳಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಮೇಕಪ್ ಮರೆಮ್ಮ… ಯಾಕೆ ತಿಗಡೇಸಿ.. ಏನದು ಅಂತರಂಗದ ಸಮೀಕ್ಷೆ.. ನನಗೆ ತಡೆದುಕೊಳ್ಳಲು ಆಗಲ್ಲ ಹೇಳಿಬಿಡಪ್ಪ ಅಂದಳು. ತೀರ ಭಾವುಕನಾದ ತಿಗಡೇಸಿ… ಗಡಿಗೆಯಲ್ಲಿನ ನೀರು ಗಟಗಟ ಕುಡಿದು…. ಸ್ವಲ್ಪ ಹೊತ್ತು ಸುಮ್ಮನಿದ್ದು… ನೋಡು ಮರೆಮ್ಮ… ನನ್ನ ಸಮೀಕ್ಷೆಯ ಪ್ರಕಾರ… ಅವರಿಗೆ ಭಾಳ ಅಂದರೆ ೧೫ ಅಥವಾ ೧೬… ಇನ್ನೊಬ್ಬರಿಗೆ ಮೋಸ್ಟ್ಲಿ ಎರಡು… ಉಳಿದದ್ದೆಲ್ಲ ಇವರಿಗೆ ನೋಡವ ಅಂದ. ಮರೆಮ್ಮಳು.. ಅವರು ಅಂದರೆ ಯಾರು? ಇವರು ಅಂದರೆ ಬಿಡಿಸಿ ಹೇಳು ಅಂದಳು. ನೋವೇ. ಚಾನ್ಸೇ ಇಲ್ಲ.. ಚಾನ್ಸೇ ಇಲ್ಲ.. ಒಂದು ಹಾಳೆಯಲಿ ಉಲ್ಟಾ ಬರೆದು.. ಅದನ್ನು ಪಾಕೇಟ್ನಲ್ಲಿ ಹಾಕಿ ಫೆವಿಕ್ವಿಕ್ ಅಂಟಿಸಿ… ಜೂನ್ ೪ರ ಸಂಜೆ ೫ಕ್ಕೆ ಈ ಪಾಕೇಟ್ ಒಡೆದುನೋಡು.. ನೀವಿನ್ನು ಇಲ್ಲಿಂದ ಹೋಗಬಹುದು ಎಂದು ಹೇಳಿದ.