ಸಿಬಿಐಗೆ ವಹಿಸಿದರೆ ಮಾತ್ರ ನೇಹಾ ಸಾವಿಗೆ ನ್ಯಾಯ

Advertisement

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐಗೆ ವಹಿಸಬೇಕು. ಅಂದಾಗ ಮಾತ್ರ ಅವಳ ಸಾವಿಗೆ ನ್ಯಾಯ ಸಿಗುತ್ತದೆ ಎಂದು ನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ ಹೇಳಿದರು.
ನೇಹಾಳ ನಿವಾಸಕ್ಕೆ ಭೇಟಿ ನೀಡಿದ ಅವರು, ನಿರಂಜನಯ್ಯ ಹಿರೇಮಠ ಹಾಗೂ ಗೀತಾ ಹಿರೇಮಠ ಅವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ದೇಶವೇ ಬೆಚ್ಚಿ ಬೀಳುವಂತಹ ಕ್ರೂರವಾದ ಹತ್ಯೆ ನೇಹಾಳದ್ದು ಆಗಿದೆ. ಕಾಲೇಜ್ ಕ್ಯಾಂಪಸ್‌ನಲ್ಲಿಯೇ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ ಎಂದರೆ ಹೇಗೆ?. ಇಂತಹ ಕೃತ್ಯ ನಡೆದರೆ ಪಾಲಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹೇಗೆ ಧೈರ್ಯ ಮಾಡುತ್ತಾರೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಹ ಈ ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಎಲ್ಲವೂ ಸಮಗ್ರವಾಗಿ ತನಿಖೆ ಆಗಬೇಕು. ಸಿಐಡಿ ತನಿಖೆ ಬಗ್ಗೆ ನಂಬಿಕೆ ಇಲ್ಲ ಎಂದರು.
ರಾಜ್ಯ ಸರ್ಕಾರದವರು ಎಲ್ಲವನ್ನೂ ರಾಜಕೀಯಗೊಳಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದಾರೆ. ಹಂತಕನಿಗೆ ಶಿಕ್ಷೆ ಆಗುವವರೆಗೂ ಪಕ್ಷದಿಂದ ಹೋರಾಟ ನಡೆಯುತ್ತದೆ ಎಂದರು.