ಗದಗ ನಾಲ್ವರ ಹತ್ಯೆ ಪ್ರಕರಣ:‌ ಮುಂಬೈ ಭೂಗತ ಲೋಕದ ನಂಟು?

Advertisement

ಸೂರ್ಯನಾರಾಯಣ ನರಗುಂದಕರ
ಗದಗ: ರಾಜ್ಯದ ಜನತೆ ಬೆಚ್ಚಿ ಬೀಳಿಸಿದ್ದ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ನಾಲ್ಕು ಜನರ ಬರ್ಬರ ಹತ್ಯೆಗೆ ಮುಂಬೈ ಭೂಲೋಕದ ನಂಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಈಗಾಗಲೇ ನಾಲ್ವರ ಹತ್ಯೆಗೈದಿರುವ ಆರೋಪದ ಮೇಲೆ ಬಂಧಿತರಾಗಿ ಜೈಲು ಸೇರಿರುವ ಎಂಟು ಜನರನ್ನು ಪೊಲೀಸರು ವಿಚಾರಣೆಗಾಗಿ ನ್ಯಾಯಾಲಯದಿಂದ ಕಸ್ಟಡಿಗೆ ಪಡೆದಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ನಗರಸಭಾ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಮೊದಲ ಪತ್ನಿಯ ಪುತ್ರ ವಿನಾಯಕ ಬಾಕಳೆಯೆ ಸುಪಾರಿ ನೀಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಪೊಲೀಸ್ ಕಸ್ಟಡಿಗೆ ಪಡೆದಿರುವ ಆರೋಪಿಗಳನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಈ ಕೃತ್ಯದಲ್ಲಿ ಮುಂಬೈ ಭೂಗತ ಲೋಕದ ನಂಟಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಕೃತ್ಯದಲ್ಲಿ ಈಗ ಬಂಧಿಸಿದ ವ್ಯಕ್ತಿಗಳದ್ದಷ್ಟೇ ಕೈವಾಡವಿದೆಯೋ? ಅಥವಾ ಇದರಲ್ಲಿ ಮತ್ತೆ ಯಾರಾದರೂ ಇದ್ದಾರೆಯೇ? ಎಂಬ ಸಂಗತಿಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಆರೋಪಿಗಳು ಕೊಲೆ ನಡೆಯುವ ಮುನ್ನ ಆರೇಳು ದಿನ ಗೋವಾ, ಬೆಂಗಳೂರು ಮತ್ತಿತರ ಪ್ರದೇಶಗಳಿಗೆ ತೆರಳಿ ಮೋಜು ಮಸ್ತಿ ಮಾಡಿದ್ದಾರೆ. ಗೋವಾದಲ್ಲಿ ಕ್ಯಾಸೀನೋಕ್ಕೆ ಭೇಟಿ ನೀಡಿ ಅಲ್ಲಿ ಜೂಜಾಟವಾಡಿದ್ದಾರೆ. ಬೆಂಗಳೂರಿನಲ್ಲಿನ ವಿವಿಧ ಮಾಲ್‌ಗಳಿಗೆ ಭೇಟಿ ನೀಡಿ ದುಬಾರಿ ಬೆಲೆಯ ಬಟ್ಟೆ ಮತ್ತಿತರ ವಸ್ತುಗಳನ್ನು ಖರೀದಿಸಿ ಲಕ್ಷಾಂತರ ರೂಪಾಯಿ ಉಡಾಯಿಸಿದ್ದಾರೆಂದು ತಿಳಿದು ಬಂದಿದೆ.
ಪೊಲೀಸರ ವಿಚಾರಣೆ ವೇಳೆ ವಿನಾಯಕ ಬಾಕಳೆ ತನ್ನ ತಂದೆ ಪ್ರಕಾಶ ಬಾಕಳೆ, ಮಲತಾಯಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಮಲ ಸಹೋದರ ಕಾರ್ತಿಕ ಬಾಕಳೆಯನ್ನು ಮುಗಿಸಲು ಸುಪಾರಿ ನೀಡಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.
ಕಿರಿಯ ಪುತ್ರನ ಮೇಲೆ ಶಂಕೆ?…
ಈ ಭೀಕರ ಹತ್ಯೆ ಪ್ರಕರಣಕ್ಕೆ ರಿಯಲ್ ಎಸ್ಟೇಟ್ ಉದ್ದಿಮೆದಾರ ಪ್ರಕಾಶ ಬಾಕಳೆ ಮೊದಲ ಪತ್ನಿ ಪುತ್ರ ವಿನಾಯಕ ಬಾಕಳೆ ಪ್ರೊಫೇಶನಲ್ ಕಿಲ್ಲರ್ಸ್‌ಗೆ ಸುಪಾರಿ ನೀಡಿದ್ದಾಗಿ ತಿಳಿದು ಬಂದಿದ್ದರೂ ಸಹ ಪೊಲೀಸರು ಕೃತ್ಯದಲ್ಲಿ ಕಿರಿಯ ಪುತ್ರ ದತ್ತಾತ್ರಯ ಉರ್ಫ ಯಶ್ ಬಾಕಳೆ ಕೈವಾಡದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ದತ್ತಾತ್ರಯ ಉರ್ಫ ಯಶ್ ಬಾಕಳೆ ಈಗಾಗಲೇ ನಕಲಿ ಚಿನ್ನದಾಭರಣಗಳನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿಗಳ ಸಾಲ ಪಡೆದು ಬ್ಯಾಂಕುಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದಾನೆ. ಬ್ಯಾಂಕಿಗೆ ವಂಚಿಸಿದ ಆರೋಪದ ಮೇಲೆ ಈಗಾಗಲೇ ದತ್ತಾತ್ರಯ ಬಾಕಳೆ ಅನೇಕ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದಾನೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಅಕ್ರಮ ಸಾರಾಯಿ ಸಾಗಾಟ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲಿದ್ದಾನೆ. ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿದ್ದ ಸಂದರ್ಭದಲ್ಲಿ ದತ್ತಾತ್ರಯ ಬಾಕಳೆಗೆ ಮುಂಬೈ ಭೂಗತ ಲೋಕದ ಪಾತಕಿಗಳೊಂದಿಗೆ ಸಖ್ಯ ಬಂದಿದೆ. ಈ ಸಖ್ಯದಿಂದ ದತ್ತಾತ್ರಯ ಬಾಕಳೆ ಸಹೋದರ ವಿನಾಯಕ ಬಾಕಳೆ ಮೂಲಕ ಈ ಬರ್ಬರ ಹತ್ಯೆ ಮಾಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ದಿಸೆಯಲ್ಲಿಯೂ ನಾಲ್ವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.