ಕಾರವಾರ: ಕಾರ್ಮಿಕರ ವಸತಿ ಪ್ರದೇಶದಲ್ಲಿ ಸಿಲಿಂಡರ್ ಸ್ಪೋಟಗೊಂಡು ಹಲವು ಕಾರ್ಮಿಕರ ಶೆಡ್‌ಗಳು ಸುಟ್ಟು ಜಕಂಗೊಂಡ ಘಟನೆ ಕಾರವಾರದ ಮುದಗಾ ಲೇಬರ್ ಕಾಲೋನಿಯಲ್ಲಿ ಇಂದು ಮುಂಜಾನೆ ನಡೆದಿದೆ.
ನೌಕಾನೆಲೆ ಕಟ್ಟಡ ಕಾಮಗಾರಿ ಸಂಬಂಧ ಮುದಗಾದ ಸೀಬರ್ಡ್ ಕಾಲೋನಿಯಲ್ಲಿ ಕಾರ್ಮಿಕರ ವಾಸಕ್ಕಾಗಿ ಶೆಡ್ ಹಾಕಿಕೊಡಲಾಗಿತ್ತು. ಅಸ್ಸಾಂ, ಓರಿಸ್ಸಾ ಸೇರಿದಂತೆ ಹೊರರಾಜ್ಯದ ನೂರಕ್ಕೂ ಅಧಿಕ ಕಾರ್ಮಿಕರು ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಬುಧವಾರ ಮುಂಜಾನೆ ರೆಗ್ಯೂಲೇಟರ್ ನಲ್ಲಿ ಸೋರಿಕೆಯಾಗಿ ಒಂದು ದೊಡ್ಡ ಸಿಲಿಂಡರ್, ಎರಡು ಸಣ್ಣ ಸಿಲಿಂಡರ್‌ಗಳು ಸ್ಪೋಟಗೊಂಡಿವೆ ಎನ್ನಲಾಗಿದೆ.
ಸ್ಪೋಟದ ತೀವ್ರತೆಗೆ ಶೆಡ್‌ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ. ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಸ್ಪೋಟಗೊಳ್ಳುತ್ತಿದ್ದಂತೆ ಸುತ್ತಮುತ್ತಲಿನ ಕಾರ್ಮಿಕರು ಸ್ಥಳದಿಂದ ಓಡಿ ಹೋಗಿದ್ದಾರೆ.
ಅಲ್ಲದೆ ಘಟನೆಯಲ್ಲಿ ಬಟ್ಟೆ, ಪಾತ್ರೆ, ಅಡಿಗೆ ಸಾಮಗ್ರಿ, 25ಕ್ಕೂ ಅಧಿಕ ಮೊಬೈಲ್‌ಗಳು ಬೆಂಕಿಗಾಹುತಿಯಾಗಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.