ಜನಮತದ ದಾರಿಯಲ್ಲಿ ಭಿನ್ನಮತದ ಅಡ್ಡಗಾಲು

Advertisement

ಅನುಭವದ ಆಧಾರದ ಮೇಲೆ ತಜ್ಞರು ಹೇಳುವ ಪ್ರಕಾರ, ರಾಜಕೀಯ ವ್ಯವಸ್ಥೆಯ ಪೈಕಿ ಪ್ರಜಾತಂತ್ರವೇ ರಾಜ್ಯಭಾರಕ್ಕೆ ಸೂಕ್ತವಾದ ಪದ್ಧತಿ. ಫ್ರಾನ್ಸ್ನಿಂದ ಹಿಡಿದು ಬಹುತೇಕ ದೇಶಗಳಲ್ಲಿ ಯಶಸ್ಸು ಕಂಡಿರುವ ಈ ಪದ್ಧತಿ ಭಾರತದಲ್ಲಿ ಅವಿಭಾಜ್ಯ ಅಂಗ ಎಂಬ ರೀತಿಯಲ್ಲಿ ಜನರಲ್ಲಿ ಬೆರೆತುಹೋಗಿದ್ದರೂ ಅದರಲ್ಲಿ ಆಗಿಂದಾಗ್ಗೆ ನುಸುಳುಕೋರರ ರೀತಿಯಲ್ಲಿ ಕಾಣಿಸಿಕೊಳ್ಳುವ ಅಪಸ್ವರದ ರಾಗ ನಾನಾ ರೀತಿಯ ಸಾಧ್ಯತೆಗಳನ್ನು ತೆರೆದಿಟ್ಟಿರುವುದು ಒಂದು ರೀತಿಯಲ್ಲಿ ಅಡ್ಡಗಾಲು.
ಜನತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ರಾಜಕೀಯ ವ್ಯವಸ್ಥೆ ಆದ್ಯತೆಗಳ ಆಧಾರದ ಮೇಲೆ ಸೃಷ್ಟಿಯಾಗುವ ಸಾಧ್ಯತೆಗಳ ಸಾಗರ ಎಂಬುದು ಪ್ರಶ್ನಾತೀತ ಮಾತು ಎಂಬುದಕ್ಕೆ ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಅನೇಕ ನಿದರ್ಶನಗಳಿವೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಆದ್ಯತೆಗಳು ಹಾಗೂ ಸಾಧ್ಯತೆಗಳನ್ನು ಪಟ್ಟಿಮಾಡುವುದು ಲೋಕಾರೂಢಿ. ಆದರೆ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆಗೆ ಆದ್ಯತೆ ಮತ್ತು ಸಾಧ್ಯತೆಗಳನ್ನು ಗುರುತಿಸಿ ಲೆಕ್ಕ ಹಾಕುವ ಪರಿಸ್ಥಿತಿ ಈಗ ಯಾವುದೇ ರಾಜಕೀಯ ಪಕ್ಷದಲ್ಲಿಯೂ ಚಾಲ್ತಿಯಲ್ಲಿದ್ದಂತೆ ಕಂಡುಬರುತ್ತಿಲ್ಲ. ಏಕೆಂದರೆ, ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಸಾವಿರಾರು. ಈ ಸಾವಿರಾರು ಸಂಖ್ಯೆಯನ್ನು ಜರಡಿ ಹಿಡಿದು ಪಕ್ಷದ ನೀತಿ ನಿಯಮಗಳಿಗೆ ಅನುಸಾರವಾಗಿ ಆಯ್ಕೆ ಮಾಡಿ ಮುಗಿಸುವ ಸಂದರ್ಭದಲ್ಲಿ ಭಿನ್ನಮತದ ಕೂಗು ಭುಗಿಲೇಳುತ್ತಿರುವುದು ನಿಜಕ್ಕೂ ಒಳ್ಳೆಯ ಲಕ್ಷಣವಲ್ಲ. ವೈಚಾರಿಕತೆಯ ಆಧಾರದ ಮೇಲೆ ಭಿನ್ನಮತವಿದ್ದರೆ ಒಪ್ಪುವುದು ಸೂಕ್ತ. ಆದರೆ, ವ್ಯಕ್ತಿಗತ ಆಕಾಂಕ್ಷಿಗಳಿಗೆ ಮಣೆ ಹಾಕಿದರೆ ಚುನಾವಣೆ ಎದುರಿಸುವುದಾದರೂ ಹೇಗೆ ಎಂಬುದು ಈಗಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲ ಪಕ್ಷಗಳನ್ನೂ ಕಾಡುತ್ತಿರುವ ಬೃಹದಾಕಾರದ ಪ್ರಶ್ನೆ.
ಕೋಲಾರ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಭಿನ್ನಮತಕ್ಕೆ ಕೊನೆಯೂ ಇಲ್ಲ ಮೊದಲೂ ಇಲ್ಲ. ಇದು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿರುವಂತೆ ಕಂಡುಬಂದರೂ ಜೆಡಿಎಸ್-ಬಿಜೆಪಿ ಮೈತ್ರಿಕೂಟದಲ್ಲಿಯೂ ಕೂಡಾ ಇದೇ ಸ್ಥಿತಿ. ಚಿತ್ರದುರ್ಗ, ಉತ್ತರ ಕನ್ನಡ, ಬೆಳಗಾವಿ, ರಾಯಚೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಬಾಗಲಕೋಟೆ ಕ್ಷೇತ್ರಗಳಲ್ಲಿ ಬಿಜೆಪಿಯ ಮುಂದೆ ಎದುರಾಗಿರುವುದು ಸೋಲು ಗೆಲುವಿನ ಪ್ರಶ್ನೆಯಲ್ಲ. ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಆಕಾಂಕ್ಷಿಗಳನ್ನು ಸಮಾಧಾನಗೊಳಿಸುವ ಮಾರ್ಗ ತಿಳಿಯದೆ ಕಂಗಾಲಾಗಿ ಸಾಕಪ್ಪಾ ಸಾಕು ಎನ್ನುವ ಸ್ಥಿತಿಗೆ ಬಂದಿರುವುದು ಸಾಮಾನ್ಯವಂತೂ ಅಲ್ಲ. ಬಿಜೆಪಿ ವಿಭಿನ್ನ ಪಕ್ಷ ಎಂಬುದು ಅದರ ಮುಖಂಡರ ನಂಬಿಕೆ. ಆದರೆ, ಈ ಬೆಳವಣಿಗೆ ನೋಡಿದರೆ ಇದು ಭಿನ್ನಮತೀಯರ ಪಕ್ಷವಷ್ಟೆ ಎಂದು ಧಾರಾಳವಾಗಿ ಹೇಳಿಬಿಡಬಹುದು. ಕಾಂಗ್ರೆಸ್ ಪಕ್ಷ ಬಿಕ್ಕಟ್ಟನ್ನು ಹಾಗೂ ಹೀಗೂ ಸರಿದೂಗಿಸುವ ದಾರಿಗೆ ಬಂದಿದ್ದರೂ ಒಳಗೊಳಗೆ ಹೊಗೆಯಾಡುತ್ತಿರುವ ದಾವಾನಿಲ ಮತಗಟ್ಟೆಯಲ್ಲಿ ಯಾವ ರೂಪ ಪಡೆಯುತ್ತದೆ ಎಂಬುದನ್ನು ಹೇಳುವಂತಿಲ್ಲ. ಹಾಗೆ ನೋಡಿದರೆ, ಜೆಡಿಎಸ್ ಪಕ್ಷದ ಸ್ಥಿತಿ ಸುಖ ಶಾಂತಿಯಿಂದ ಕೂಡಿರುವಂತೆ ಮೇಲ್ನೋಟಕ್ಕಂತೂ ಕಾಣುತ್ತದೆ.
ರಾಜಕಾರಣದಲ್ಲಿ ಸೇವಾ ಮನೋಭಾವ ಇದ್ದವರು ಮಾತ್ರ ಜನರ ಅಪೇಕ್ಷೆಗೆ ಮನಸೋತು ಚುನಾವಣೆಗೆ ಸ್ಪರ್ಧಿಸುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ರಾಜಕಾರಣ ಪ್ರವೇಶಿಸಲು ನೂಕು ನುಗ್ಗಲು. ಎಲ್ಲರಿಗೂ ಸ್ಪರ್ಧಿಗಳಾಗಿ ಶಾಸಕರು ಇಲ್ಲವೇ ಸಂಸದರಾಗಿ ಮಂತ್ರಿಗಳಾಗಿ ಕಡೆಗೆ ಮುಖ್ಯಮಂತ್ರಿಗಳಾಗಿ ವಿರಾಜಮಾನವಾಗಬೇಕು ಎಂಬುದು ಮಹತ್ವಾಕಾಂಕ್ಷೆ. ಜನರಿಗೆ ಮಹತ್ವಾಕಾಂಕ್ಷೆ ಇರಬೇಕು. ಆದರೆ, ಇದಕ್ಕೆ ಬೇಕಾದ ಪರಿಶ್ರಮ, ಬದ್ಧತೆ, ಜನಸೇವೆಯ ಕೈಂಕರ್ಯ ಅತ್ಯಗತ್ಯ. ಈ ಮೂರರ ಜಾಗದಲ್ಲಿ ಜನಪ್ರಿಯತೆ ಹಾಗೂ ಪಕ್ಷ ನಿಷ್ಠೆಯನ್ನು ಅಸ್ತçವನ್ನಾಗಿ ಮಾಡಿಕೊಂಡು ಸ್ಪರ್ಧೆಗೆ ಇಳಿಯಲು ಪಕ್ಷಗಳ ನಾಯಕತ್ವದ ಜೊತೆ ಭಿನ್ನಮತದ ಅವಾಂತರ ಆರಂಭಿಸಿದರೆ ಅದನ್ನು ಸಹಿಸಿಕೊಳ್ಳುವುದು ಸೂಕ್ತವೇ ಎಂಬ ಪ್ರಶ್ನೆಗೆ ಚುನಾವಣೆಯ ಸಂದರ್ಭದಲ್ಲಿ ಯಾವ ಪಕ್ಷವೂ ನಿರ್ದಾಕ್ಷಿಣ್ಯ ಉತ್ತರ ಕೊಡುವ ಸ್ಥಿತಿಯಲ್ಲಿ ಇರುವುದಿಲ್ಲ. ಮಾರ್ಗ ಯಾವುದಾದರೂ ಇರಲಿ ಗೆದ್ದು ಬಂದರೆ ಸಾಕು ಎಂಬ ಮನೋಧರ್ಮಕ್ಕೆ ಶರಣಾಗಿರುವ ಈಗಿನ ರಾಜಕೀಯ ವ್ಯವಸ್ಥೆಗೆ ಸರಿಯಾದ ದಾರಿಗೆ ಒಯ್ಯಲು ಅಗತ್ಯವಾಗಿರುವುದು ಶ್ರೇಣೀಕೃತ ಪಕ್ಷಗಳ ಅಗತ್ಯ. ಜನರ ಪಕ್ಷವಾದರೆ ಆಗ ವೈಚಾರಿಕತೆ ಹಾಗೂ ಶಿಸ್ತಿಗೆ ಮಣೆ ಹಾಕುವುದು ಕಷ್ಟ. ಶ್ರೇಣೀಕೃತ ಪಕ್ಷಗಳು ಹಾಗಲ್ಲ. ವಾಮಪಂಥೀಯ ಪಕ್ಷಗಳಲ್ಲಿ ಭಿನ್ನಮತ ಇದುವರೆಗಂತೂ ಕಂಡುಬಂದಿಲ್ಲ. ಏಕೆಂದರೆ, ಅವೆಲ್ಲ ಶ್ರೇಣೀಕೃತ ಪಕ್ಷಗಳು.
ಭಿನ್ನಮತ ಯಾವತ್ತಿಗೂ ಜನತಂತ್ರ ಪದ್ಧತಿಗೆ ಉಸಿರು. ಜನಮತ ಸರಿದಾರಿಯಲ್ಲಿರಲು ಭಿನ್ನಮತ ಅಪೇಕ್ಷಣೀಯ. ಆದರೆ, ಹರಿಯುವ ನೀರಿಗೆಲ್ಲಾ ಕಾಲು ಚಾಚುವ ಬುದ್ಧಿ ಭಿನ್ನಮತಕ್ಕೆ ಬರಬಾರದು. ಈಗ ಅಭ್ಯರ್ಥಿಗಳ ಆಯ್ಕೆಗೆ ಎದುರಾಗಿರುವ ಭಿನ್ನಮತದ ಸ್ವರೂಪ ಅದೇ. ಈಗಿನ ಮಟ್ಟಿಗೆ ಅದಕ್ಕೆ ಸಾಂತ್ವನದ ಆಹಾರವೇ ಸದ್ಯದ ಪರಿಹಾರ. ಮತದಾರರೆಲ್ಲರೂ ಪಕ್ಷಪಾತಿಗಳಲ್ಲ. ತಟಸ್ಥ ಮತದಾರರು ಯಾವಾಗಲೂ ನಿರ್ಣಾಯಕ. ಈಗಿನ ಬೆಳವಣಿಗೆಗಳನ್ನು ನೋಡಿದ ತಟಸ್ಥ ಸ್ವಭಾವದವರು ಯಾವ ದಾರಿ ಹಿಡಿಯುತ್ತಾರೆ ಎಂಬುದರ ಮೇಲೆ ಸೋಲು ಗೆಲುವಿನ ನಿರ್ಧಾರವಾಗುವ ಸಾಧ್ಯತೆಯೇ ಹೆಚ್ಚು.