ಹೌದಾ…ನಿಜವೇನ್ಲಾ..?

Advertisement

ನಂಬರ್ ೧
ಸಾರ್… ನಾನು ಇಲ್ಲಿಯೇ ಇದ್ದೇನೆ. ನೀವು ಹೇಳಿದ ಹಾಗೆ ಎಲ್ಲ ಕಡೆ ಅಡ್ಡಾಡುತ್ತಿದ್ದೇನೆ.. ಎಲ್ಲಿ ಹೋದಲ್ಲಿ ಬಂದಲ್ಲಿ ನಿಮ್ಮ ಹೆಸರೇ ಸಾರ್…ನಿಮ್ಮ ಹೆಸರು ಹೇಳಿದರೆ ಸಾಕೂ…..ಅಯ್ಯಯ್ಯೋ ಅವರನ್ನು ಬಿಟ್ಟು ಇನ್ಯಾರಿಗೂ ಒತ್ತುವುದಿಲ್ಲ. ಅವರೇ ನಮಗೆಲ್ಲ ಅಂತಿದಾರೆ ಸಾರ್…ಅವರು ನಮಗೆ ಬೇಕೇಬೇಕು ಅಂತಾರೆ ಸಾರ್…ಈ ಟ್ರೆಂಡು ಹೀಗೆಯೇ ಮುಂದುವರೆದರೆ… ನಾವು ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟು ಸಾರ್..ನೀವು ಬರಲೇಬೇಡಿ ಸಾರ್… ನಾವೆಲ್ಲ ಮಾಡುತ್ತೇವೆ ಸಾರ್…ಸಾರ್….ಸಾರ್ ಎಂದು ತಿಗಡೇಸಿ ಆ ಕಡೆಯವರಿಗೆ ಪುರುಸೊತ್ತು ಕೊಡದೇ ಮಾತನಾಡುತ್ತಿದ್ದ ಆ ಕಡೆಯಿಂದ ನಿಜವೇನೋ…ಓ ಭಗವಾನ್…ಹೇ ಭಗವಾನ್….ಅಂದಾಗ ಸಾರ್ ಇವತ್ತು ಡೇಟೆಸ್ಟು ಎಂದು ಪಕ್ಕದವರು ಕೇಳಿದಾಗ ಓಯ್ ತಿಗಡೇಸಿ ಅಂದ ಕೂಡಲೇ ಅವನು ಫೋನ್ ಕಟ್ ಮಾಡಿ ಸ್ವಿಚ್ಡಾಫ್ ಮಾಡಿದ್ದ.
ನಂಬರ್ ೨
ಅಯ್ಯೋ ಸಾರ್…ಗ್ಯಾರಂಟಿ ಅಂದರೆ ನಿಮ್ಮದೇ… ಗ್ಯಾರಂಟಿ ಅಂದರೆ ನಮ್ಮದೇ… ಹಾಗಾಗಿ ಈ ಬಾರಿ ಗ್ಯಾರಂಟೀ ಅಂತಿದಾರೆ…ನೀವೇನೂ ಚಿಂತೆ ಮಾಡಬೇಡಿ ಸಾರ್..ಹೆಚ್ಚೆಂದರೆ ಒಂದು ಕಡಿಮೆ ಆಗಬಹುದು ಸಾಹೇಬ್…ಬೇಕಾರೆ ನೋಡುತಿರಿ…ಸಾರ್ ಹಳ್ಳಿ ಹೆಣಮಕ್ಕಳೆಲ್ಲ ಸಾಹೇಬರಿಂದಲೇ ನಾವು ಪುಗಸೆಟ್ಟೆ ಬಸ್ಸು ಹತ್ತಿ ಆ ಗುಡಿ ಈ ಗುಡಿ ನೋಡಿದೆವು…ನಮಗೆ ಅಕ್ಕಿ ಅನ್ನ ಉಣ್ಣುತ್ತೇವೆ ಅಂತ ಗ್ಯಾರಂಟೀನೇ ಇರಲಿಲ್ಲ…ಈಗ ನೋಡಿ ಅಂತಿದಾರೆ..ಅದಕ್ಕಾಗಿ ನೀವು ನಿಶ್ಚಿಂತೆಯಿಂದ ನಿದ್ದೆ ಮಾಡಿ…ಏನಿದ್ದರೂ ನಾವೇ ನಾವು ಅಮ್ಮೋರಿಗೆ ಒಂದು ಮಾತು ಹೇಳಿಬಿಡಿ ಅಂತ ಉಸಿರು ಬಿಡದ ಹಾಗೆ ಮಾತನಾಡಿದ ತಿಗಡೇಸಿ….ಸಾರ್ ನಿನ್ನೆ ಮಾರ್ಚ್ ೩೧ ಆದರೆ ಇಂದು ಏನು ಅಂತ ನೋಡ್ರಿ ಒಮ್ಮೆ ಅಂತ ಆ ಹೆಣ್ಣುಮಗಳು ಹೇಳಿದ ಕೂಡಲೇ…ಲೇ ತಿಗಡೇಸ್ಯಾ…ಏನ್ಲಾ ಇದೂ ಅಂತಿಂದಂಗೆ ಸಾರ್..ಒಂದ್ನಿಮಿಷಾ…ಒಂದ್ನಿಮಿಷಾ ಅನ್ನುತ್ತ ಫೋನ್ ಸ್ವಿಚ್ಡಾಫ್ ಮಾಡಿದ.
ಮೂರಕ್ಕೆ ಮೂರು…
ನೀವು ಚಿಂತಿಸುವ ಅಗತ್ಯವೇ ಇಲ್ಲ. ಜನರು ಇನ್ನೂ ಕಣ್ಣೀರು ಹಾಕುತ್ತಿದ್ದಾರೆ ಗೊತ್ತ? ನಾವು ಅವರನ್ನು ಸುಮ್ಮನೇ ಕೂಡಿಸಿದ್ದೇವೆ…ಇನ್ನು ಹಾಗೆ ಮಾಡಲ್ಲ ಅಂತಿದಾರೆ…ಬೇಕಾದರೆ ನೋಡಿ ಸಾರ್…ಮೂರಕ್ಕೆ ಮೂರೂ ನಿಮ್ಮವೇ ಆಗುತ್ತವೆ…ಅದರಲ್ಲಿ ನಿಮ್ಮ ಒಬ್ಬರು ಕೇಂದ್ರದಲ್ಲಿ ಮಂತ್ರಿಯಾಗಿ ಕೆಂಪುಗೂಟದ ಕಾರು ಗ್ಯಾರಂಟಿ…ಮತ್ತೆ ನೀವು ಮರಿಮೊಮ್ಮಕ್ಕಳ ಬಗ್ಗೆ ವಿಚಾರ ಮಾಡಬಹುದು ಎಂದು ಅದೇ ತಿಗಡೇಸಿ ಹೇಳಿದಾಗ…ಇದ್ಯಾಕೋ ಮಿಸ್ ಒಡದಂಗೆ ಆಯ್ತದೆ….ಇವತ್ತು ತಾರೀಕು ಎಷ್ಟೋ ಅಂದಾಗ ಮತ್ತೆ ಆ ಕಡೆಯಿಂದ ಸ್ವಿಚ್ಡಾಫ್…..