ಮೈಸೂರು: ಬಿಜೆಪಿ ನಾಯಕರಾದ ಎಚ್.ವಿ. ರಾಜೀವ್, ಮಾಜಿ ಸಚಿವ ಎಂ. ಶಿವಣ್ಣ, ಜೆಡಿಎಸ್ ನಾಯಕ ಮಲ್ಲೇಶ್ ಮತ್ತು ಭೈರಪ್ಪ ಇನ್ನಿತರ ಪ್ರಮುಖರು ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ನಗರದಲ್ಲಿ ಬುಧವಾರ ನಡೆದ ಎರಡು ಪ್ರತ್ಯೇಕ ಕರ‍್ಯಕ್ರಮದಲ್ಲಿ ಸಿಎಂ ಮತ್ತು ಡಿಸಿಎಂ ಅನ್ಯಪಕ್ಷಗಳ ಈ ಧುರೀಣರನ್ನು ಬರಮಾಡಿಕೊಂಡರು.
ರಾಜೀವ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಯಾವುದೇ ಜಾತಿ, ಧರ್ಮದ ಆಧಾರದ ಮೇಲೆ ಯಾರನ್ನೂ ಕಡೆಗಣಿಸಿಲ್ಲ. ಆದರೆ ಬಿಜೆಪಿಯವರು ತಾರತಮ್ಯ ಮಾಡುತ್ತಲೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಸುಳ್ಳುಹೇಳುತ್ತಾರೆ. ನಮ್ಮ ಜನಪರ ಕೆಲಸ ಮತ್ತು ಬಿಜೆಪಿಯವರ ಮೋಸವನ್ನು ಮತದಾರರ ಮುಂದಿಟ್ಟು ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕೆಂದು ಸಿಎಂ ಸಲಹೆ ನೀಡಿದರು.
ಕಾಗೆ ಬೆಳ್ಳಗಿದೆ ಎಂದರೆ:
ನರೇಂದ್ರ ಮೋದಿ ಕಾಗೆ ಬೆಳ್ಳಗಿದೆ ಎಂದರೆ ಬಿಜೆಪಿಯ ಎಲ್ಲರೂ ಬೆಳ್ಳಗಿದೆ ಎನ್ನುತ್ತಾರೆ. ಸ್ವಂತಿಕೆ ಇಲ್ಲದೆ ಮೋದಿಯ ತಮಟೆ ಬಾರಿಸುತ್ತಾರೆಂದು ವ್ಯಂಗ್ಯವಾಡಿದರು. ಇದೇ ವೇಳೆ, ನಮ್ಮ ಗ್ಯಾರಂಟಿಗಳಿಗೆ ನಿಮ್ಮ ಹಣ ಬೇಡ, ನ್ಯಾಯಯುತವಾಗಿ ಬರಬೇಕಾದ ತೆರಿಗೆ ಹಣ ಕೊಡಿ ಎಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಸಿಎಂ ಸಲಹೆ ನೀಡಿದರು.