ಹುಬ್ಬಳ್ಳಿ: ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆದರೂ ಸಮಾಜದಲ್ಲಿ ತನ್ನ ಗಟ್ಟಿತನ, ಹೆಚ್ಚಿನ ಸಾಧನೆಗಾಗಿ ಜಾಗೃತರಾಗಬೇಕಾಗಿದೆ. ಇದಕ್ಕೆ ಮಹಿಳೆಗೆ ಹೆಚ್ಚಿನ ವೇದಿಕೆ ಒದಗಿಸಬೇಕಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ವೀಣಾ ಕಾರಟಗಿ ಹೇಳಿದರು.
ಮಂಗಳವಾರ ಸಂಯುಕ್ತ ಕರ್ನಾಟಕ ಕಚೇರಿಯ ಕಬ್ಬೂರ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಂಯುಕ್ತ ಕರ್ನಾಟಕ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಪುರುಷರು-ಮಹಿಳೆಯರು ಸಮಾನರು ಎಂದು ತಿಳಿದು ಬದುಕು ಕಟ್ಟಿಕೊಳ್ಳಬೇಕು ಎಂದರು.
ಸಂಯುಕ್ತ ಕರ್ನಾಟಕ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸಂಪಾದಕ ಮೋಹನ್ ಹೆಗಡೆ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವ, ಪ್ರಾಧಾನ್ಯತೆ ಇದೆ. ಶೇ.೩೩ರಷ್ಟು ರಾಜಕಿಯ ಪ್ರಾತಿನಿಧ್ಯ ಕೂಡ ಕೊಡಲಾಗುತ್ತಿದೆ. ಆದರೂ ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ಮುಂದುವರೆದಿದೆ. ಇದರಿಂದ ದೇಶ ಇನ್ನೂ ಪುರುಷ ಪ್ರಧಾನವಾಗಿದೆ ಎಂಬುದು ತಿಳಿದು ಬರುತ್ತದೆ. ಬಹುತೇಕ ದೇಶಗಳಲ್ಲಿ ಮಹಿಳೆಯರೇ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಭಾರತ ಕೂಡ ಈ ನಿಟ್ಟಿನಲ್ಲಿ ಸಾಗಬೇಕಾಗಿದೆ. ಮಹಿಳೆಯರ ಕಾರ್ಯಕ್ಷಮತೆಗೆ ಹೆಚ್ಚಾಗಿದ್ದು, ಕಂಪನಿ, ಐಟಿ-ಬಿಟಿ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಿಗುತ್ತಿರುವುದು ವಿಶೇಷವಾಗಿದೆ ಎಂದರು.
ಸಂಯುಕ್ತ ಕರ್ನಾಟಕ ಕೂಡ ಮಹಿಳಾ ಉದ್ಯೋಗಿಗಳಿಗೆ ವೃತ್ತಿಪರತೆಗೆ ಅನುಕೂಲವಾಗುವ ವಾತಾವರಣ ಕಲ್ಪಿಸಿದೆ. ಬಹುತೇಕ ದಿಟ್ಟ, ಧೀಮಂತ ಪತ್ರಕರ್ತರಲ್ಲಿ ಮಹಿಳೆಯರು ಇದ್ದಾರೆ ಎಂದರು.
ಸಂಯುಕ್ತ ಕರ್ನಾಟಕ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ಚಂದ್ರಗಿರಿ, ಮಹಿಳೆಯರು ಇಂದು ಸಾಧಕರಾಗಿದ್ದಾರೆ. ಮನೆ ಜೊತೆ ಜೊತೆಯಲ್ಲಿ ಉದ್ಯೋಗಿ, ಉದ್ಯಮಿಯಾಗಿ ದೇಶ ರಕ್ಷಣೆಯಲ್ಲೂ ವಿಶೇಷ ಛಾಪು ಮೂಡಿಸಿದ್ದಾರೆ ಎಂದರು.
ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕ್ರೀಡೆಗಳಲ್ಲಿ ವಿಜೇತರಾದ ಸುಧಾ ಕೊಂಡಗೋಳಿ, ಸುಮಂಗಳಾ ರಾವ್, ಸುರೇಖಾ ನವಲೆ, ಭುವನೇಶ್ವರಿ, ಸುಧಾ ಹೆರೂರು ಅವರಿಗೆ ಬಹುಮಾನ ವಿತರಿಸಲಾಯಿತು. ಸಂಯುಕ್ತ ಕರ್ನಾಟಕ ನೌಕರರ ಸಂಘ ಹಾಗೂ ಗಂಗಾವತಿ ಸಿಲ್ಕ್ ಪ್ಯಾಲೇಸ್ ಸಹಯೋಗದೊಂದಿಗೆ ಮಹಿಳಾ ನೌಕರರಿಗೆ ಸೀರೆಯನ್ನು ಉಡುಗರೆಯಾಗಿ ನೀಡಲಾಯಿತು.
ಸ್ಟೋರ್ ವಿಭಾಗದ ಮುಖ್ಯಸ್ಥ ಸುರೇಶ ಕಾತೋಟೆ, ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ, ಸಿಬ್ಬಂದಿ ವ್ಯವಸ್ಥಾಪಕ ಮಹಾದೇವ ಕೋಣಿ, ಸಂಘದ ಉಪಾಧ್ಯಕ್ಷ ಸುಧೀಂದ್ರ ಹುಲಗೂರ, ಪ್ರಧಾನ ಕಾರ್ಯದರ್ಶಿ ಬಸವರಾಜ ಯರಿಬೈಲ್, ಮಹಿಳಾ ಕಾರ್ಯದರ್ಶಿ ರತ್ನಾ ಹಿರೇಗೌಡರ, ಸಹ ಕಾರ್ಯದರ್ಶಿ ಈರಣ್ಣ ಕಣಕಿಕೊಪ್ಪ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಚಳಗೇರಿ ಸೇರಿದಂತೆ ಇತರರು ಇದ್ದರು. ಆಶಾ ಹುದ್ದೇದಾರ ಪ್ರಾರ್ಥಿಸಿದರು. ವಾಣಿ ದೇಸಾಯಿ ಅತಿಥಿಗಳ ಪರಿಚಯಿಸಿದರು. ಸಂಧ್ಯಾ ಬಾಳಣ್ಣವರ ನಿರೂಪಿಸಿದರು.