ಕುಷ್ಟಗಿ (ಕೊಪ್ಪಳ ಜಿಲ್ಲೆ}: ಇತ್ತೀಚಿಗೆ ನಡೆಯುತ್ತಿರುವ ಪ್ರತಿಯೊಂದು ಚುನಾವಣೆಗಳು ಸಹ ಜಾತಿ ಲೆಕ್ಕಾಚಾರದ ಮೇಲೆ ನಡೆಯುತ್ತಿದ್ದು, ಹೀಗಾಗಿ ಹೂಗಾರ ಸಮುದಾಯದವರು ಎಷ್ಟು ಲಕ್ಷ ಇದ್ದೀರಿ ಎಂಬುದರ ಬಗ್ಗೆ ರಾಜಕಾರಣಿಗಳ ಲೆಕ್ಕಕ್ಕೆ ಬರುವುದಿಲ್ಲ ಎಂದು ಮಾಜಿ ಶಾಸಕ ಹಾಗೂ ಕೆಪಿಪಿಸಿ ರಾಜ್ಯ ಉಪಾಧ್ಯಕ್ಷ ಹಸನಸಾಬ ದೋಟಿಹಾಳ ಯಲಬುರ್ಗಿ ಹೇಳಿದರು.
ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹೂಗಾರ ಸಮಾಜದ ವತಿಯಿಂದ ಶರಣ ಹೂಗಾರ ಮಾದಯ್ಯನವರ ಜಯಂತೋತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೂಗಾರ ಸಮಾಜದವರನ್ನು ಚುನಾವಣೆ ವೇಳೆ ನಾವು ಉಪಯೋಗಿಸಿಕೊಳ್ಳುತ್ತೇವೆಯೇ ಹೊರತು, ನಿಮಗೆ ಯಾವುದೇ ರೀತಿ ನಾವು ರಾಜಕಾರಣಿಗಳ ಆದವರು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದರು.
ರಾಜಕೀಯ ಪಕ್ಷಗಳಿಗೆ ಪಾಠ
ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಗವಿಸಿದ್ದಪ್ಪ ಹೂಗಾರ ಮಾತನಾಡಿ, ಹೂಗಾರ ಸಮಾಜದ ಗುರುಗಳಾದ ಹೂಗಾರ ಮಾದಯ್ಯ ಜಯಂತಿ ಆಚರಿಸುವಲ್ಲಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಸರಕಾರ ನಮ್ಮ ಸಮಾಜದ ಕಡೆಗೆ ಗಮನ ಕೊಡುತ್ತಿಲ್ಲ. ಮುಂದಿನ ದಿನಗಳಲ್ಲಿ ಮಾದಯ್ಯ ನವರ ಜಯಂತಿ ಆಚರಣೆಗೆ ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.