ಇನ್ನೂ ಕಾಲ ಮಿಂಚಿಲ್ಲ… ಇನ್ನೂ ಟಿಕೆಟ್ ಅನೌನ್ಸ್ ಆಗಿಲ್ಲ. ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಅರ್ಜಂಟ್.. ತ್ವರೆ ಮಾಡಿ, ತ್ವರೆ ಮಾಡಿ ಎಂದು ಕರಿಲಕ್ಷಂಪತಿ, ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸುವುದು ಹೇಗೆ ಎಂಬುದರ ತರಬೇತಿ ನೀಡುವ ಕುರಿತು ಎಲ್ಲೆಡೆ ಬೋರ್ಡು ಹಾಕಿಸಿದ್ದೇ ತಡ. ಹೊಸದಾಗಿ ಬಂದವರಿಗೆ ಕರಿಲಕ್ಷಂಪತಿ ಸ್ವಾಗತ ಭಾಷಣ ಮಾಡಿದ.
ಈಗಿನ ದಿನಗಳಲ್ಲಿ ಹೇಗೆ ಟಿಕೆಟ್ ಕೊಡಿಸುವುದಕ್ಕಿಂತ ಹೇಗೆ ಟಿಕೆಟ್ ತಪ್ಪಿಸುವುದಕ್ಕೆ ಭಾರೀ ಡಿಮ್ಯಾಂಡ್ ಇದೆ. ತಪ್ಪಿಸುವುದಕ್ಕೆ ತರಬೇತಿ ಬೇಕಲ್ಲವೇ? ನಮ್ಮಲ್ಲಿ ನೀವು ಟ್ರೇನಿಂಗ್ ತೆಗೆದುಕೊಂಡಿದ್ದೇ ಆದರೆ ಮುಂದಿನ ದಿನಗಳಲ್ಲಿ ಬಸ್ಸಿನ ಟಿಕೆಟ್‌ನಿಂದ ಹಿಡಿದು ಯಾವ ಟಿಕೆಟ್ ಬೇಕಾದರೂ ತಪ್ಪಿಸಬಹುದು. ಬೇಕಿದ್ದರೆ ಒಂದೇ ಒಂದು ಸಲ ಬಂದು ತರಬೇತಿ ತೆಗೆದುಕೊಳ್ಳಿ. ನುರಿತವರು, ತಜ್ಞರು ದಿನಾಲೂ ಒಂದು ತಾಸು ತರಬೇತಿ ನೀಡಿ ಹೋಗುತ್ತಾರೆ. ಡಾ. ಪಂ. ಲೇವೇಗೌಡರು, ಪ್ರೊ.. ಸಿಟ್ಯೂರಪ್ಪನವರು, ಡೀನ್ ಮದ್ರಾಮಣ್ಣೋರು, ಅಲ್ಲದೇ ವಿಶೇಷ ತರಬೇತಿ ನೀಡಲು ಕನಕಬಂಡೆ ಕುಮಾರ ಅವರು ಬರುತ್ತಾರೆ. ಮೊದಲು ಎಂಟು ದಿನಗಳ ಕಾಲ ತರಬೇತಿ ಪಡೆಯಬೇಕಿತ್ತು. ಈಗ ಸಮಯದ ಅಭಾವ ಇರುವುದರಿಂದ ನಾಲ್ಕರಿಂದ ಐದು ದಿನಗಳ ಕಾಲ ನಡೆಸಲಾಗುತ್ತದೆ. ಸಮಯ ಹೆಚ್ಚು ಇರದೇ ಇರುವುದರಿಂದ ಮುಂಜಾನೆಯಿಂದ ರಾತ್ರಿವರೆಗೆ ತರಗತಿಗಳು ನಡೆಯುತ್ತವೆ. ತರಬೇತಿ ಪಡೆಯುವಷ್ಟು ದಿನ ಎಲ್ಲರಿಗೂ ಉಚಿತ ವಸತಿ-ಊಟ ನೀಡಲಾಗುವುದು. ರಾತ್ರಿ ತರಗತಿಗಳನ್ನು ಸುಮಾರಣ್ಣೋರು ತೆಗೆದುಕೊಂಡರೆ ಬೆಳಗಿನ ಜಾವ ಪಂ. ಲೇವಣ್ಣ ಬಂದು ಹೋಗುತ್ತಾರೆ. ಟಿಕೆಟ್ ತಪ್ಪಿಸುವಾಗ ಕೆಲವೊಂದು ಸೂಕ್ಷ್ಮತೆಗಳನ್ನು ಹೇಗೆ ಹೇಳಬೇಕು ಎಂದು ಪಂ. ಲೇವೇಗೌಡರು ಕೊನೆಯ ದಿನ ಹೇಳುತ್ತಾರೆ. ಅಲ್ಲದೇ ಅವತ್ತೇ ವೈವಾವನ್ನೂ ನಡೆಸುತ್ತಾರೆ. ಕಿವಿಯಲ್ಲಿ ಹೇಳುವ ಕುರಿತು ಗುಮ್ಮಾಯಿ ಗುಸ್ಸಣ್ಣ ಅವರು ಪಾಠ ತೆಗೆದುಕೊಳ್ಳುವರು. ಟಿಕೆಟ್ ತಪ್ಪಿಸುವಾಗ ಮಹಿಳೆಯರೇಕೆ ಅಡ್ಡಬಾಯಿ ಹಾಕಬಾರದು ಎಂದು ಲಕ್ಷ್ಮವ್ವ ಗುಬ್ಬಾಳ್ಕರ್ ಮನಮುಟ್ಟುವಂತೆ ತಿಳಿಸಿಕೊಡುತ್ತಾರೆ. ಟಿಕೆಟ್ ತಪ್ಪಿ.. ಕಣ್ಣಲ್ಲಿ ನೀರು ತರಿಸಿಕೊಂಡು ಗೊಳೋ ಎಂದು ಅಳುವಾಗ ಅವರನ್ನು ಸಮಾಧಾನ ಹೇಗೆ ಮಾಡಬೇಕು ಎಂದು ನುರಿತ ಎಲ್ಲ ದಿಗ್ಗಜರು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡುತ್ತಾರೆ. ಇಂತಹ ತರಬೇತಿ ನಿಮಗೆ ಎಲ್ಲಿಯೂ ಸಿಗುವುದಿಲ್ಲ.. ನುರಿತ ತರಬೇತುದಾರರು ಇಡೀ ದೇಶದಲ್ಲಿ ಸಿಗುವುದಿಲ್ಲ. ಅದಕ್ಕೆ ಹೇಳುವುದು ಈಗಲೇ ತ್ವರೆ ಮಾಡಿ… ಬಿಟ್ಟರೆ ಕೆಟ್ಟೀರಿ ಜೋಕೆ.