ಮೂಡಲಗಿ: ಲಿಂಗಾಯತರು ಯಾರ ಮುಲಾಜಿಗೂ ಒಳಗಾಗದೆ ತಮ್ಮ ಹಕ್ಕಿಗಾಗಿ ಹೋರಾಡಲು ಮುಂದೆ ಬರಬೇಕು ಎಂದು ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾಗತ ಸಮಿತಿ ಅಧ್ಯಕ್ಷ, ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದರು.
ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಶುಕ್ರವಾರ ಸಂಜೆ ಕಲ್ಲೋಳಿ ಅರಭಾವಿ ವಿಧಾನಸಭಾ ಕ್ಷೇತ್ರದ ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡುವುದಾಗಿ ಆಶ್ವಾಸನೆ ನೀಡಿದ ಮುಖ್ಯಮಂತ್ರಿಗಳಿಗೆ, ಮೀಸಲಾತಿ ನೀಡಿ ಸಾಕು, ನನಗೆ ಸಚಿವನಾಗುವ ಆಸೆ ಇಲ್ಲ ಎಂದಿರುವೆ ಎಂದರು.
ಕೂಡಲಸಂಗಮ ಧರ್ಮಕ್ಷೇತ್ರದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃಂತ್ಯುಜಯ ಸ್ವಾಮೀಜಿ ಮಾತನಾಡಿ, ಮಾಡು ಇಲ್ಲವೆ ಮೀಸಲಾತಿ ಪಡೆದು ಮಡಿ ಎಂಬ ಉದ್ದೇಶದಿಂದ ನವೆಂಬರ್ ಎರಡನೇ ವಾರದಲ್ಲಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಂಚಮಸಾಲಿ ಮಹಾಸಭಾ ಕೂಡಲಸಂಗಮ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, 2023ರ ಚುನಾವಣೆಯಲ್ಲಿ ಲಿಂಗಾಯತರು ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಬೇಕು. ಸಮಾಜದ ವ್ಯಕ್ತಿಗೆ ಅನ್ಯಾಯವಾದರೆ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ. ಯಾರ ಕಾಲಿಗೂ ಬೀಳುವ ಅಗತ್ಯ ಇಲ್ಲ ಎಂದರು.
ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾಗತ ಸಮಿತಿ ಗೌರವಾಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮಾತನಾಡಿ, ಲಿಂಗಾಯತರು ಸಮಾಜದ ಚಿಂತನೆ ಮಾಡದೆ ಇರುವುದರಿಂದ 1967ರಿಂದ ಈ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಆಯ್ಕೆಯಾಗಿಲ್ಲ ಮತ್ತು ಸ್ಪರ್ಧೆ ಕೂಡ ಮಾಡಿಲ್ಲ ಎಂದರು.