ಕಲಬುರಗಿ: ನಮ್ದು ದೆಹಲಿಯಲ್ಲಿ ಸಿಇಸಿ ಸಭೆಯಾಗಬೇಕು, ಸಭೆ ಬಳಿಕ ಪಟ್ಟಿ ಬಿಡುಗಡೆಯಾಗುತ್ತೆ. ದಿ. ೧೫ ರಂದು ಎರಡನೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲಲಿದೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಅದಕ್ಕಾಗಿಯೇ ಹಾಲಿ 10 ಎಂಪಿಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಬಿಜೆಪಿಯವರು ಜನರಿಗೆ ಸ್ಪಂದಿಸಿಲ್ಲ ಎಂದು ದೂರಿದರು.
ಕಲಬುರಗಿ ಕೈ ಅಭ್ಯರ್ಥಿ ಇನ್ನು ಫೈನಲ್ ಆಗಿಲ್ವಾ ಎಂದಿದ್ದಕ್ಕೆ ಕೇಳಿದ ಪ್ರಶ್ನೆಗೆ ನಾನೇ ಅಭ್ಯರ್ಥಿ ಎಂದರು. ನಾವು ಚುನಾವಣೆಗೋಸ್ಕರ ಗ್ಯಾರೆಂಟಿ ಮಾಡಿಲ್ಲ. ಜನರ ಬದುಕಿಗೆ ಒಳ್ಳೆಯದಾಗಲಿ ಅಂತ ಮಾಡಿದ್ದೆವೆ ಎಂದು ಸ್ಪಷ್ಟನೆ ನೀಡಿದರು. ಬೆಂಗಳೂರು ಸೇರಿದಂತೆ ಹಲವಡೇ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಬೆಂಗಳೂರಲ್ಲಿ 70 ಬೋರ್ ವೆಲ್ ಬತ್ತಿ ಹೋಗಿವೆ. ಆದರೆ ಕಾವೇರಿ ನೀರು ಸಮರ್ಪಕವಾಗಿ ಸರಬರಾಜು ಮಾಡಲಾಗುತ್ತದೆ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೆವೆ. ಈಗಾಗಲೇ ಸಿಎಂ ಕೂಡಾ ಸಭೆ ನಡೆಸಿ ಸೂಚನೆ ನೀಡಿದ್ದಾರೆ ಎಂದು ವಿವರಿಸಿದರು.
ಹೆಗಡೆ ವಿರುದ್ಧ ವಾಗ್ದಾಳಿ: ಹೆಗಡೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಮೋದಿಯವರು ಇಲ್ಲಿಯವರೆಗೆ ಮಾತನಾಡಿಲ್ಲ. ಅದರ ಅರ್ಥ ಮೌನಂ ಸಮ್ಮತಿ ಲಕ್ಷಣಂ. ಹೆಗಡೆಯವರ ಹೇಳಿಕೆ,ಬಿಜೆಪಿ ಹೇಳಿಕೆ ಬಗ್ಗೆ ಹೊಂದಾಣಿಕೆ ಇಲ್ಲ. ನೀತಿ ಸಂಹಿತೆ ಬರುತ್ತಿದೆ ನಾವು ಸಿಎಂ ಬೇರೆ ಬೇರೆಯಾಗಿ ಸಮಾವೇಶ ಮಾಡುತ್ತಿದ್ದೆವೆ. ಇವತ್ತು ಸಿಎಂ ಉಡುಪಿ ಕೋಲಾರಕ್ಕೆ ಹೋಗಿದ್ದಾರೆ, ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡಬೇಕಿದೆ. ಅದಕ್ಕೆ ನಾನು ಖರ್ಗೆ ಸಾಹೇಬ್ರು ಬಂದಿದ್ದೆವೆ ಎಂದು ಪುನರುಚ್ಚಿಸಿದರು.
ಹಲವು ನಾಯಕರ ಸಂಪರ್ಕ: ಬಹಳಷ್ಟು ಜನ ನಮ್ಮನ್ನು ಭೇಟಿಯಾಗಿದ್ದಾರೆ. ನಿನ್ನೆ ಜಯಪ್ರಕಾಶ್ ಹೆಗಡೆ, ಎಂಪಿಕೆ ನಮ್ಮ ಪಾರ್ಟಿ ಸೇರಿದ್ದಾರೆ. ಇನ್ನು ಬಹಳ ಜನ ನಮ್ಮ ಪಾರ್ಟಿಗೆ ಬರುವರಿದ್ದಾರೆ. ಅದರಲ್ಲಿ ಹಾಲಿ ಬಿಜೆಪಿ ಎಂಪಿಗಳು ನನ್ನ ಭೇಟಿ ಮಾಡಿದ್ದಾರೆ. ಅವರ ಹೆಸರು ನಾನು ಬಹಿರಂಗ ಪಡಿಸುವುದಿಲ್ಲ. ಸದಾನಂದಗೌಡ್ರು ಬಂದರೂ ಸ್ವಾಗತ ಮಾಡುತ್ತೇವೆ ಎಂದರು.