ದಾವಣಗೆರೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ದಾವಣಗೆರೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಸುಪ್ರೀಂ ಕೋಟ್೯ ನಿವೃತ್ತ ನ್ಯಾಯಾಧೀಶರಾದ ಶಿವರಾಜ್ ಪಾಟೀಲ್, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಸಿದ್ದಪ್ಪ, ಹಿರಿಯ ಪತ್ರಕರ್ತ ಎಚ್.ಬಿ.ಮಂಜನಾಥ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ 32 ಮಹಿಳಾ, 32 ಪುರುಷ ಅಭ್ಯರ್ಥಿಗಳು ಸೇರಿ ಒಟ್ಟು 64 ಜನರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. 12,265 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 2092 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದು, ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿ ಒಟ್ಟು 14,357 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದು ರಾಜ್ಯಪಾಲರು ಘಟಿಕೋತ್ಸವದಲ್ಲಿ ಘೋಷಿಸಿದರು.
2022-23ನೇ ಸಾಲಿನಲ್ಲಿ 45 ವಿದ್ಯಾರ್ಥಿಗಳಿಗೆ ಒಟ್ಟು 79 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಅದರಲ್ಲಿ ಸ್ನಾತಕ ಪದವಿಯಲ್ಲಿ 10 ಮಹಿಳಾ, 2 ಪುರುಷ ಸೇರಿ ಒಟ್ಟು 12 ವಿದ್ಯಾರ್ಥಿಗಳು 20 ಸ್ವರ್ಣ ಪದಕ ಪಡೆದರೆ, ಸ್ನಾತಕೋತ್ತರ ಪದವಿಯಲ್ಲಿ 29 ಮಹಿಳಾ,
4 ಪುರುಷ ಸೇರಿ ಒಟ್ಟು 33 ವಿದ್ಯಾರ್ಥಿಗಳು 59 ಸ್ವರ್ಣ ಪದಕಗಳನ್ನು ಪಡೆದರು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ದೀಪ್ತಿ ಜೆ.ಗೌಡರ್ ಐದು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ವಿಶ್ವವಿದ್ಯಾಲಯದ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದರು.
ಸ್ನಾತಕೋತ್ತರ ಪದವಿಯಲ್ಲಿ ಅರ್ಥ ಶಾಸ್ತ್ರ ವಿಭಾಗದಲ್ಲಿ ಎಂ.ವೈ.ಚಂದನ ಮೂರು ಸ್ವರ್ಣ ಪದಕ, ಆಂಗ್ಲ ವಿಭಾಗದಲ್ಲಿ ಜಿ.ಕೆ.ಮೋನಿಕಾ ಮೂರು ಸ್ವರ್ಣ ಪದಕ ಪಡೆದರೆ, ಎಂಎಸ್ಸಿಯಲ್ಲಿ ಎಂ.ರಂಗಸ್ವಾಮಿ, ಸಾನಿಯಾ ಅಂಜುಮ್ ಮತ್ತು ಫರ್ಹಾನ್ನಾಹ ಸುಜಾನ್ ಗೆ ತಲಾ ಮೂರು ಸ್ವರ್ಣ ಪದಕ, ಕೆ.ಯಶೋಧ, ಎಂ.ಅಂಬಿಕಾ ತಲಾ ಎರಡು ಸ್ವರ್ಣ ಪದಕ ಪಡೆದರು.
ಎಂಬಿಎಯಲ್ಲಿ ವೈ.ಶಾಜೀಯ, ಟಿ.ಕೃತಿಕಾಗೆ ತಲಾ ಎರಡು ಸ್ವರ್ಣ ಪದಕ, ಎಂಎಸ್ಸಿಯಲ್ಲಿ ಐ.ಕೆ.ಸಂಗೀತಾಗೆ ಎರಡು ಸ್ವರ್ಣ ಪದಕ ಪಡೆದರೆ, ಬಿಎಸ್ಸಿಯಲ್ಲಿ ಸಿ.ಎಸ್.ಪೂಜಾ, ಜಿ.ಎಂ.ಸುಮತಿಗೆ ತಲಾ ಎರಡು ಸ್ವರ್ಣ ಪದಕ ಹಾಗೂ ಕನ್ನಡ ಎಂಎಯಲ್ಲಿ ಡಿ.ರೇವಣಸಿದ್ದಪ್ಪ ಎರಡು ಸ್ವರ್ಣ ಪದಕ ಪಡೆದರು.
ಸ್ನಾತಕ ಪದವಿಯ ಬಿಎಯಲ್ಲಿ ಎಸ್.ಸಿಂಧುಬಾಯಿ ಮೂರು ಸ್ವರ್ಣ ಪದಕ, ಬಿಇಡಿಯಲ್ಲಿ ಟಿ.ಎನ್.ಕಾವ್ಯ ಮೂರು ಸ್ವರ್ಣ ಪದಕ , ಎಂಪಿಇಡಿಯಲ್ಲಿ ಎನ್. ಕಿರಣ್ ಕುಮಾರ್ ಎರಡು ಸ್ವರ್ಣ ಪದಕ ಪಡೆದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಅವರು ಘಟಿಕೋತ್ಸವ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವರು ಹಾಗೂ ದಾವಣಗೆರೆ ವಿವಿ ಸಮಕುಲಾಧಿಪತಿ ಡಾ.ಎಂ.ಸಿ.ಸುಧಾಕರ್ ಉಪಸ್ಥಿತಿ ಇದ್ದರು. ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ವಿಶ್ವವಿದ್ಯಾಲಯದ ವಾರ್ಷಿಕ ವರದಿಯನ್ನು ವಾಚಿಸಿದರು.
ಕುಲಸಚಿವರಾದ (ಮೌಲ್ಯಮಾಪನ) ಪ್ರೊ.ಸಿ.ಕೆ.ರಮೇಶ್, ಪರೀಕ್ಷಾಂಗ ಪ್ರಭಾರಿ ಕುಲಸಚಿವರಾದ ಪ್ರೊ.ವೆಂಕಟರಾವ್ ಎಂ.ಪಲಾಟೆ , ಸಿಂಡಿಕೇಟ್ ಹಾಗೂ ವಿದ್ಯಾ ವಿಷಯಕ ಪರಿಷತ್ ಸದಸ್ಯರು ಹಾಗೂ ಡೀನ್ಗಳು ಹಾಜರಿದ್ದರು.