ಬೆಂಗಳೂರು: ಕರ್ನಾಟಕದಲ್ಲಿ ಸಂಚರಿಸುತ್ತಿರುವ ರಾಹುಲ್ಗಾಂಧಿ ನೇತೃತದ ಭಾರತ್ ಜೋಡೋ ಯಾತ್ರೆಗೆ ಗುರುವಾರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ರಂಗಪ್ರವೇಶವಾಗಲಿದೆ.
ಕರ್ನಾಟಕದಲ್ಲಿ ಪ್ರವೇಶಿಸಿ ಈಗಾಗಲೇ ನಾಲ್ಕು ದಿನಗಳನ್ನು ಪೂರೈಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾಗಾಂಧಿ ಗುರುವಾರ ಹೆಜ್ಜೆಹಾಕಲಿರುವುದು ರಾಜಕೀಯವಾಗಿ ಮಹತದ ಪಡೆದುಕೊಂಡಿದೆ.
ಕರ್ನಾಟಕದ ಏಳೆಂಟು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯನ್ನು ಬಹುಗಂಭೀರವಾಗಿ ಪರಿಗಣಿಸಿರುವ ಸೋನಿಯಾಗಾಂಧಿ ಭಾರತ್
ಜೋಡೋ ಯಾತ್ರೆಯಲ್ಲಿ ಭಾಗಿಯಾಗುವ ಮೂಲಕ ರಾಜ್ಯ ಕಾಂಗ್ರೆಸ್ಗೆ ಹುರುಪು ತುಂಬುವ ಯತ್ನ ನಡೆಸಲಿದ್ದಾರೆ.
ಎರಡು ದಿನಗಳ ಹಿಂದೆಯೇ ಮೈಸೂರಿಗೆ ಆಗಮಿಸಿರುವ ಸೋನಿಯಾ ಗುರುವಾರ ಬೆಳಗ್ಗೆ ೭ ಗಂಟೆಗೆ ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕೆನ್ನಾಳು ಗ್ರಾಮದಿಂದ ಹೊರಡುವ ಯಾತ್ರೆಯಲ್ಲಿ ಭಾಗಿಯಾಗುವರು. ಸೋನಿಯಾಗಾಂಧಿ ಅವರೊಟ್ಟಿಗೆ ಎಐಸಿಸಿ ಅಧ್ಯಕ್ಷ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಹೆಜ್ಜೆಹಾಕಲಿದ್ದಾರೆ. ಶುಕ್ರವಾರ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ಅವರೂ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಈ ಮಧ್ಯೆ ಕಬನಿ ರೆಸಾರ್ಟ್ ಸಮೀಪದ ಭೀಮನಕೊಲ್ಲಿಯಲ್ಲಿ ಮಲೆಮಹದೇಶರ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಸೋನಿಯಾಗಾಂಧಿ ಅವರು ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.