ದೈತ್ಯ ಶಕ್ತಿ ಹೊಂದುವುದು ಸರಿ ಆದರೆ ದೈತ್ಯನಂತೆ ಬಳಸಿದರೆ ದಬ್ಬಾಳಿಕೆಯಾಗುವುದು ಇದು ಶೇಕ್ಸ್ಪಿಯರನ ‘ಮೆಜರ್ ಫಾರ್ ಮೆಜರ್’ ನಾಟಕದಲ್ಲಿ ಇಸಾಬೆಲಾ ಆಡುವ ಮಾತು. ಅಧಿಕಾರ ಹೇಗೆ ಜನರನ್ನು ಭ್ರಷ್ಟರನ್ನಾಗಿಸುತ್ತದೆ ಎಂಬುದನ್ನು ಶೇಕ್ಸ್ಪಿಯರ್ ಈ ನಾಟಕದಲ್ಲಿ ತೋರಿಸಿದ್ದಾನೆ. ಆದರೆ ರಾಜಕೀಯ ಅಧಿಕಾರವೇ ನಿಜವಾದ ಅಧಿಕಾರ ಎಂಬ ಕಲ್ಪನೆ ಅನೇಕರಲ್ಲಿದೆ. ಯಾವುದಕ್ಕೆ ಶಕ್ತಿ ರಾಜಕಾರಣ ಎನ್ನುತ್ತೇವೆಯೋ ಅದು ಕೇವಲ ರಾಜಕಾರಣಿಗಳಲ್ಲಿ ಮಾತ್ರ ಕೇಂದ್ರೀಕೃತಗೊಂಡಿರುವುದಿಲ್ಲ; ಅದು ಎಲ್ಲರನ್ನೂ ಒಳಗೊಂಡಿರುತ್ತದೆ. ಪರಮಾಧಿಕಾರವಷ್ಟೇ ಅಧಿಕಾರವಲ್ಲ; ಅದು ಸಣ್ಣ ಅಧಿಕಾರ ಕೇಂದ್ರವೂ ಆಗಿರಬಹುದು. ಯಾವುದೇ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಜನರ ಮೇಲೆ ದಬ್ಬಾಳಿಕೆ ನಡೆಸಲು ಸಾಧ್ಯವಿದೆ. ಉದಾಹರಣೆಗೆ ಒಬ್ಬ ಭ್ರಷ್ಟ ಪೋಲಿಸ್ ವರಿಷ್ಠಾಧಿಕಾರಿ ನಡೆಸುವ ದಬ್ಬಾಳಿಕೆಗೂ ಒಬ್ಬ ಭ್ರಷ್ಟ ಸಾಮಾನ್ಯ ಪೇದೆ ಎಸಗುವ ದೌರ್ಜನ್ಯಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದಿಲ್ಲ.
ವಿಯನ್ನ ನಗರದಲ್ಲಿ ವೇಶ್ಯಾವಾಟಿಕೆ ಹೆಚ್ಚಾಗಿ ಇಡೀ ಸಮಾಜ ನೈತಿಕವಾಗಿ ಅಧಃಪತನ ಹೊಂದಿರುತ್ತದೆ. ಪರಿಸ್ಥಿತಿ ಕೈ ಮೀರಿದರೂ ದಳಪತಿ ತನ್ನ ಅಧಿಕಾರ ಬಳಸಿ ನಗರವನ್ನು ಶುದ್ಧೀಕರಣಗೊಳಿಸಲು ಮನಸ್ಸು ಮಾಡುವುದಿಲ್ಲ. ಬದಲಿಗೆ, ತನ್ನ ಉಪನಾಯಕ ಏಂಜೆಲೊನನ್ನು ತನ್ನ ಪ್ರತಿನಿಧಿಯನ್ನಾಗಿ ನೇಮಿಸಿ ಸನ್ಯಾಸಿಯ ವೇಷದಲ್ಲಿ ನಗರ ತೊರೆದು ಹೋಗುತ್ತಾನೆ.
ಕ್ಲಾಡಿಯೊ ಎಂಬ ತರುಣ ತಾನು ವಿವಾಹವಾಗಲಿರುವ ಜೂಲಿಯಟ್‌ಳನ್ನು ಗರ್ಭವತಿಯನ್ನಾಗಿ ಮಾಡಿ ಅವಳನ್ನು ಕೈ ಬಿಟ್ಟಿರುತ್ತಾನೆ. ಮರೆತುಹೋದ ಒಂದು ಕಾನೂನುನನ್ನು ಏಂಜೆಲೊ ಮರುಸ್ಥಾಪಿಸಿ, ಅದರ ಅಡಿಯಲ್ಲಿ ಕ್ಲಾಡಿಯೊನನ್ನು ಹಳೆಯ ಆರೋಪದ ಆಧಾರದ ಮೇಲೆ ಬಂಧಿಸಿ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತಾನೆ. ಅದೇ ಹೊತ್ತಿಗೆ ದಳಪತಿ ವೇಷ ಮರೆಸಿಕೊಂಡು ನಾಡಿಗೆ ಮರಳುತ್ತಾನೆ.
ಸನ್ಯಾಸಿನಿಯರ ಆಶ್ರಮದಲ್ಲಿದ್ದ ಇಸಾಬೆಲಾ ತನ್ನ ಸಹೋದರನಿಗೆ ವಿಧಿಸಲಾದ ಶಿಕ್ಷೆಯ ಬಗ್ಗೆ ತಿಳಿದು ಅವನಿಗೆ ಪ್ರಾಣಭಿಕ್ಷೆ ನೀಡುವಂತೆ ಏಂಜೆಲೊನ ಮೊರೆ ಹೋಗುತ್ತಾಳೆ. ತನ್ನ ಜೊತೆ ಒಂದು ರಾತ್ರಿ ಕಳೆದರೆ ಮಾತ್ರ ತಾನು ಜೀವದಾನ ನೀಡುವುದಾಗಿ ಏಂಜೆಲೊ ಇಸಾಬೆಲಾಗೆ ಹೇಳುತ್ತಾನೆ. ಇಷ್ಟರಲ್ಲೆ ಸನ್ಯಾಸಿನಿಯಾಗಲಿದ್ದ ಇಸಾಬೆಲಾ ತನ್ನ ಶೀಲ ಕಾಪಾಡಿಕೊಳ್ಳಲು ಏಂಜೆಲೊನ ಪ್ರಸ್ತಾವ ತಳ್ಳಿ ಹಾಕುತ್ತಾಳೆ. ಜೈಲಿನಲ್ಲಿದ್ದ ತನ್ನ ಸಹೋದರನನ್ನು ಕಂಡು ಏಂಜೆಲೊ ತನ್ನ ಮುಂದಿಟ್ಟ ಪ್ರಸ್ತಾವ ಮತ್ತು ತಾನು ಅದನ್ನು ತಳ್ಳಿ ಹಾಕಿದ ಬಗ್ಗೆ ಹೇಳುತ್ತಾಳೆ. ಏಂಜೆಲೊನ ಷರತ್ತು ಒಪ್ಪುವಂತೆ ಅವಳ ಸಹೋದರ ಹೇಳಿದರೂ ಎಸಾಬೆಲಾ ತನ್ನನ್ನು ಒಪ್ಪಿಸಲು ಸಿದ್ಧಳಾಗುವುದಿಲ್ಲ. ತಲೆ ಮರೆಸಿಕೊಂಡು ಬಂದ ದಳಪತಿ ಸಹೋದರ-ಸಹೋದರಿಯರ ನಡುವಿನ ಸಂಭಾಷಣೆ ಆಲಿಸಿ, ಅವರಿಗೆ ನೆರವು ನೀಡುವ ಭರವಸೆ ನೀಡುತ್ತಾನೆ. ತನ್ನ ಹಳೆಯ ಪ್ರೇಯಸಿ ಮಿರಿಯನ್ನಳನ್ನು ಏಂಜೆಲೊ ಗೋಳು ಹೊಯ್ದುಕೊಂಡ ವಿಷಯ ಇಸಾಬೆಲಾಗೆ ಹೇಳಿ ಇಬ್ಬರ ನಡುವೆ ಸಂಬಂಧ ಕುದುರಿಸುತ್ತಾನೆ. ಕತ್ತಲೆಯಲ್ಲಿ ಮಾತ್ರ ತಾನು ಕೂಡುವುದಾಗಿ ಇಸಾಬೆಲಾ ಏಂಜೆಲೊಗೆ ತಿಳಿಸಿ ತನ್ನ ಬದಲಿಗೆ ಅವನ ಹಳೆಯ ಪ್ರೇಯಸಿ ಮಿರಿಯನ್ನಳನ್ನು ಕಳಿಸುತ್ತಾಳೆ. ಆಗ ಏಂಜೆಲೊ ಕ್ಲಾಡಿಯೊ ಮಾಡಿದ ಅಪರಾಧವನ್ನೇ ಮಾಡುತ್ತಾನೆ.
ನಾಟಕದ ಕೊನೆಗೆ ದಳಪತಿ ಇಸಾಬೆಲಾಳ ಮುಂದೆ ಮದುವೆಯ ಪ್ರಸ್ತಾವ ಇಡುತ್ತಾನೆ. ಆದರೆ ಅವಳು ಪ್ರತಿಕ್ರಿಯೆ ನೀಡುವುದಿಲ್ಲ. ಈ ನಾಟಕದಿಂದ ಎರಡು ಪಾಠಗಳನ್ನು ಕಲಿಯಬಹುದು. ಒಂದು, ಅಧಿಕಾರ ಶಾಶ್ವತ ಅಲ್ಲ; ಅಧಿಕಾರ ಕೈ ಬದಲಿಸುತ್ತದೆ. ಇಂದು ಇವನು ಕುಳಿತ ಕುರ್ಚಿಯ ಮೇಲೆ ನಾಳೆ ಅವನು ಬಂದು ಕುಳಿತುಕೊಳ್ಳುತ್ತಾನೆ. ಹೀಗಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅಮಾಯಕರನ್ನು, ಮುಗ್ಧರನ್ನು ದಂಡಿಸಬಾರದು. ಎರಡು, ತಪ್ಪಿತಸ್ಥರ ವಿರುದ್ಧ, ಸಮಾಜಘಾತುಕ ಶಕ್ತಗಳ ವಿರುದ್ಧ, ದೇಶ ವಿರೋಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಿಂಜರಿಯಬಾರದು. ನಿರಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವುದು ಹೇಗೆ ಅಪರಾಧವಾಗುತ್ತದೆಯೋ ಹಾಗೆಯೇ ಕ್ರೂರ ಅಪರಾಧಿಗಳನ್ನು ಕ್ಷಮಿಸುವುದೂ ಅಪರಾಧವಾಗುತ್ತದೆ. ಹೇಗೆ ಕ್ಷಮೆಗೆ ಎಲ್ಲರೂ ಯೋಗ್ಯರಾಗಿರುವುದಿಲ್ಲವೋ ಹಾಗೆಯೇ ಎಲ್ಲರೂ ದಂಡನೆಗೆ ಅರ್ಹರಾಗಿರುವುದಿಲ್ಲ ಈ ಸತ್ಯ ಅಧಿಕಾರಿಗಳಿಗೆ ತಿಳಿದಿರಬೇಕು. ಪಾಪ-ಪುಣ್ಯ, ಒಳಿತು-ಕೆಡಕು, ನ್ಯಾಯ-ಅನ್ಯಾಯದ ನಡುವಿನ ಸೂಕ್ಷ್ಮ ಅಂತರ ತಿಳಿಯದೆ ಹೋದರೆ ಅಧಿಕಾರದ ದುರ್ಬಳಿಕೆ, ದುರುಪಯೋಗ ಆಗೇ ಆಗುತ್ತದೆ. ಇದನ್ನು ತಡೆಯುವುದರಲ್ಲಿಯೇ ಜಾಣತನವಿದೆ. ಈ ಸಂದರ್ಭದಲ್ಲಿ ಎರಡು ಸಂಗತಿಗಳನ್ನು ಅಗತ್ಯವಾಗಿ ಚರ್ಚಿಸಬೇಕು. ನಿರುಪದ್ರವಿಗಳನ್ನು, ಮುಗ್ಧರನ್ನು ಗೋಳು ಹೊಯ್ದುಕೊಳ್ಳಲು ಅಧಿಕಾರದ ದುರುಪಯೋಗ ಮಾಡಿಕೊಳ್ಳಬಾರದು. ಆದರೆ ಅಪರಾಧ ಕೃತ್ಯಗಳನ್ನು ಎಸಗಿದವರು, ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದವರು ಅಧಿಕಾರ ಕೇಂದ್ರದ ಮೇಲೆ ತಮ್ಮ ವರ್ಚಸ್ಸು ಬೀರಿ ಶಿಕ್ಷೆಯಿಂದ ತಪ್ಪಿಸಿಕೊಂಡವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವುದು ತಪ್ಪಲ್ಲ. ಆದರೆ ಸೇಡು, ಪ್ರತಿಕಾರ, ಸ್ವಾರ್ಥ ಇದರ ಹಿಂದೆ ಕೆಲಸ ಮಾಡಬಾರದು. ದೇಶದ ಹಿತದಲ್ಲಿ, ಕಾನೂನಿನ ಚೌಕಟ್ಟಿನಲ್ಲಿ, ತಾರತಮ್ಯ ಎಸಗದೆ, ಎಲ್ಲಾ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದು ಕಾನೂನಾತ್ಮಕವಾಗಿ, ತಾತ್ವಿಕವಾಗಿ, ನೈತಿಕವಾಗಿ ಸರಿಯಾದ ಕ್ರಮವಾಗುತ್ತದೆ. ನ್ಯಾಯ ನಿರ್ಣಯದ ಸ್ಥಾನದಲ್ಲಿರುವವರು, ಅಧಿಕಾರ ಕೇಂದ್ರದಲ್ಲಿರುವವರು ದೇಶದ ಹಿತದಲ್ಲಿ ನಿಸ್ಪಕ್ಷಪಾತವಾಗಿ ತೆಗೆದುಕೊಳ್ಳುವ ಎಲ್ಲಾ ಕ್ರಮಗಳು ನೈತಿಕವೇ ಆಗಿರುತ್ತವೆ. ವ್ಯಕ್ತಿಗತ ನೆಲೆಯಲ್ಲಿ ಆಲೋಚನೆ ಮಾಡದೆ ಸಾಮುದಾಯಿಕ ನೆಲೆಯಲ್ಲಿ, ಸಮಾಜದ ಹಿತದಲ್ಲಿ, ಲೋಕಕಲ್ಯಾಣದ ಹಿತದಲ್ಲಿ ಆಲೋಚನೆ ಮಾಡಬೇಕು.
ಭಾರತದಂಥ ಪ್ರಜಾಸತ್ತಾತ್ಮಕ ದೇಶದಲ್ಲಿ ನಿಜವಾದ ಪರಮಾಧಿಕಾರ ಪ್ರಜೆಗಳ ಕೈಯಲ್ಲಿದೆ. ಆದರೆ ಪ್ರಜೆಗಳೂ ಭ್ರಷ್ಟಗೊಳ್ಳುವ, ಅವರೂ ಆಮಿಶಕ್ಕೆ ಒಳಗಾಗಿ, ಜಾತಿಯ ಗಾಳಕ್ಕೆ ಸಿಲುಕಿ ನಿರ್ಣಾಯಕ ಸಂದರ್ಭದಲ್ಲಿ ತಪ್ಪು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂಬುದಕ್ಕೆ ಸ್ವಾತಂತ್ರ‍್ಯೋತ್ತರ ಭಾರತೀಯ ರಾಜಕೀಯ ಇತಿಹಾಸದಲ್ಲಿ ನಿದರ್ಶನಗಳಿರುವಂತೆ ಭಾರತೀಯ ಪ್ರಜೆಗಳು ಒಂದು ದೇಶವಾಗಿ, ಒಂದು ಪ್ರಜ್ಞೆಯಾಗಿ, ಒಂದು ಎಚ್ಚರದ ವಿವೇಕವಾಗಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ದೇಶದ ಹಿತದಲ್ಲಿ ಕೆಲಸ ಮಾಡುವ ಸರ್ಕಾರಗಳನ್ನು ಆಯ್ಕೆ ಮಾಡಿದ್ದಕ್ಕೂ ನಿದರ್ಶನಗಳಿವೆ.
ದೈತ್ಯ ಶಕ್ತಿ ಹೊಂದಿರುವ ವ್ಯಕ್ತಿ ಅದನ್ನು ಲೋಕಕಲ್ಯಾಣಕ್ಕಾಗಿ ಬಳಸುತ್ತಾನೆಂದು ಹೇಳುವುದು ಕಷ್ಟ. ತನಗೆ ಸಿಕ್ಕ ಅಧಿಕಾರವನ್ನು ತನ್ನವರ ವಿರುದ್ಧವೇ ಬಳಸುತ್ತಾನೆಂದು ಗೊತ್ತಿದ್ದರೂ ಅವನಿಗೇ ಅಧಿಕಾರ ನೀಡುವುದು ಮನುಷ್ಯ ಬದುಕಿನ ವ್ಯಂಗ್ಯವಾಗಿದೆ. ಈ ತಪ್ಪನ್ನು ದೇವತೆಗಳೂ ಮಾಡುತ್ತಾರೆ ಎನ್ನುವುದಕ್ಕೆ ನಮ್ಮ ಪುರಾಣಗಳಲ್ಲಿ ಅನೇಕ ನಿದರ್ಶನಗಳು ಸಿಗುತ್ತವೆ. ಶಿವನಂಥ ಭಕ್ತಪ್ರೇಮಿ ದೇವತೆಯೇ ನಮ್ಮ ಪುರಾಣಗಳಲ್ಲಿ ಇಲ್ಲ. ಭಸ್ಮಾಸುರ ಕಠಿಣ ತಪಸ್ಸು ಮಾಡಿ ಶಿವನ ಮನಸ್ಸು ಗೆಲ್ಲುತ್ತಾನೆ. ತೃಪ್ತಗೊಂಡ ಶಿವ ಭಸ್ಮಾಸುರ ಕೇಳಿದ ವರ ನೀಡುತ್ತಾನೆ. ಅವನು ಯಾರ ತಲೆಯ ಮೆಲೆ ತನ್ನ ಬಲಗೈ ಇಡುತ್ತಾನೆಯೋ ಆ ವ್ಯಕ್ತಿ ಸುಟ್ಟು ಬೂದಿಯಾಗುತ್ತಾನೆ ಎಂಬ ವರವನ್ನು ಶಿವನಿಂದ ಪಡೆದುಕೊಂಡು ಜಂಬದಿಂದ ಬಿಗುತ್ತಾನೆ. ದೈತ್ತ ಶಕ್ತಿ ತನ್ನ ಕೈವಶವಾದಾಗ ಅದರ ಬಳಕೆಯ ವಿಧಾನ ಕೂಡ ಭಸ್ಮಾಸುರನಿಗೆ ತಿಳಿದಿರುವುದಿಲ್ಲ. ಅದನ್ನು ಶಿವನಿಂದಲೇ ಕೇಳಿ ತಿಳಿದುಕೊಳ್ಳುತ್ತಾನೆ. “ಯಾರು ನಿನ್ನ ವೈರಿ?” ಎಂದು ಶಿವ ಕೇಳಿದಾಗ, “ನೀನೇ ನನ್ನ ವೈರಿ. ನಿನ್ನ ಸಂಹಾರ ಮಾಡಿ ನಿನ್ನ ಹೆಂಡತಿಯನ್ನು ಮದುವೆಯಾಗುತ್ತೇನೆ” ಎಂದು ಹೇಳಿ ಭಸ್ಮಾಸುರ ಅರಚುತ್ತ ಶಿವನ ಬೆನ್ನು ಹತ್ತುತ್ತಾನೆ. ಆಗ ಸಾಕ್ಷಾತ್ ನಾರಾಯಣ ಶಿವನ ನೆರವಿಗೆ ಬಂದು ಮೋಹಿನಿಯ ರೂಪ ತಾಳಿ ಮುಕ್ತಾನೃತ್ಯ ಮಾಡಿ ಭಸ್ಮಾಸುರನ ಸಂಹಾರ ಮಾಡುತ್ತಾನೆ.
ಭಸ್ಮಾಸುರನಿಗೆ ಆಗಾಧ ಶಕ್ತಿಯನ್ನು ಶಿವ ದಯಪಾಲಿಸಿದಾಗ ಅಸುರನಾದ ಭಸ್ಮಾಸುರ ತನ್ನ ಸ್ವಭಾವಕ್ಕೆ ತಕ್ಕಂತೆ ನಡೆದುಕೊಂಡು ತನಗೆ ದೈತ್ಯ ಶಕ್ತಿ ನೀಡಿದ ಶಿವನ ವಿರುದ್ಧವೇ ಅದನ್ನು ದೈತ್ಯನಂತೆ ಬಳಸಲು ಮುಂದಾಗುತ್ತಾನೆ.
ದುಷ್ಟ ಶಕ್ತಿಗಳ ಕೈಗೆ ಪರಮಾಧಿಕಾರ ಸಿಗಬಾರದು. ಸಂಘಟಿತ ಹಿಂಸೆಯನ್ನು ಪ್ರತಿಪಾದಿಸುವ ಸ್ಥಿತಿವಂತರು, ಅರಾಜಕ ಸಂಘಟನೆಗಳು ಮತ್ತು ಹಿಂಸೆಯನ್ನು ಬೆಂಬಲಿಸುವ ಸರ್ಕಾರಗಳು ಆತಂಕವಾದಿಗಳನ್ನು, ನಕ್ಸಲ್‌ರನ್ನು, ಭಂಡುಕೋರರನ್ನು ಮತ್ತು ವಿದ್ರೋಹಿಗಳನ್ನು ಸೃಷ್ಟಿಸುತ್ತಿವೆ. ಆದರೆ ಆತಂಕವಾದ ತನ್ನ ಸೃಷ್ಟಿಕರ್ತನನ್ನು ಬಲಿ ತೆಗೆದುಕೊಳ್ಳದೇ ಬಿಡದು. ಇದಕ್ಕೆ ಪಾಕಿಸ್ತಾನ, ಆಫಘಾನಿಸ್ತಾನಗಳಲ್ಲದೆ ಅನೇಕ ರಾಷ್ಟçಗಳೇ ನಿದರ್ಶನ. ಲಾಡೆನ್ ಅಮೇರಿಕದ ಸೃಷ್ಟಿ. ಕೊನೆಗೆ ಅವನು ಅಮೇರಿಕಾದ ಅಸ್ಮಿತೆಯಾಗಿದ್ದ ವಿಶ್ವ ವ್ಯಾಪಾರ ಕೇಂದ್ರಗಳ ಮೇಲೆ ದಾಳಿ ಮಾಡಿದ! ಭಾರತದ ನೆಲದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾದ ಪಾಕಿಸ್ತಾನ ಈಗ ದಿವಾಳಿಯ ಅಂಚಿಗೆ ಬಂದು ನಿಂತಿದೆ.