ಬೆಂಗಳೂರು: ಮಾಜಿ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಅವರು ಹೃದಯಾಘಾತದಿಂದ ಇಂದು ನಿಧನ ಹೊಂದಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಕೆ ಶಿವರಾಮ್ ನಟನಾಗಿ ಅಷ್ಟೇ ಅಲ್ಲದೇ ಉತ್ತಮ ರಾಜಕಾರಣಿಯಾಗಿಯೂ ಜನಪ್ರಿಯತೆ ಪಡೆದಿದ್ದರು.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯಲ್ಲಿ 1953 ರಲ್ಲಿ ಜನಿಸಿದ್ದ ಇವರು, 1985ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಳಿಕ, ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು, ಐಎಎಸ್ ಅಧಿಕಾರಿಯೂ ಆಗಿದ್ದರು. ಕನ್ನಡದಲ್ಲೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಕೀರ್ತಿ ಇವರಿಗೆ ಸಲ್ಲಿತ್ತು. ಕೆ.ಶಿವರಾಮ್ ಅವರು ರಾಜ್ಯದ ಹಲವು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1993 ರಲ್ಲಿ ತೆರೆಗೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕೆ.ಶಿವರಾಮ್ ಪ್ರವೇಶಿಸಿದ್ದರು. ‘ವಸಂತ ಕಾವ್ಯ’, ‘ಸಾಂಗ್ಲಿಯಾನಾ ಪಾರ್ಟ್ 3’, ‘ಪ್ರತಿಭಟನೆ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ಟೈಗರ್’ ಮುಂತಾದ ಕನ್ನಡ ಚಿತ್ರಗಳಲ್ಲಿ ಕೆ.ಶಿವರಾಮ್ ಅಭಿನಯಿಸಿದ್ದಾರೆ.