ಹುಬ್ಬಳ್ಳಿ: ಉದ್ಯಮರಂಗ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಅತ್ಯುತ್ತಮ ಸಹಭಾಗಿತ್ವದಿಂದ ಮಾತ್ರ ರಾಜ್ಯ ಹಾಗೂ ದೇಶದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯ. ಈ ವಿಚಾರದಲ್ಲಿ ನಾವು ಅಮೆರಿಕವನ್ನು ನೋಡಿ ಕಲಿಯಬೇಕಾದ್ದು ಸಾಕಷ್ಟಿದೆ. ನಮ್ಮಲ್ಲಿ ಇಂತಹ ಸಹಭಾಗಿತ್ವದ ಸಂಸ್ಕೃತಿ ಇನ್ನೂ ಸಾಕಷ್ಟು ಬೆಳೆಯಬೇಕಾದ ಅಗತ್ಯವಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.
ಸೋಮವಾರ ಇಲ್ಲಿ ನಡೆಯಲಿರುವ ‘ಬಿಯಾಂಡ್ ಬೆಂಗಳೂರು’ ಸಮಾವೇಶಕ್ಕೆ ಪೂರ್ವಭಾವಿಯಾಗಿ, ವಿವಿಧ ಕಂಪನಿಗಳ ಸಿಇಒಗಳೊಂದಿಗೆ ಭಾನುವಾರ ಸಂಜೆ ನಡೆದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
ಉದ್ಯಮಗಳ ಬೆಳವಣಿಗೆಯಲ್ಲಿ ಸಂವಹನ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ವ್ಯವಸ್ಥೆ ಮುಖ್ಯ ಪಾತ್ರ ವಹಿಸುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದಲ್ಲಿ ನೂತನವಾಗಿ 6 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಹೆದ್ದಾರಿಗಳ ಕ್ಷೇತ್ರದಲ್ಲಿ ಮೂಲಸೌಲಭ್ಯ ಅಭಿವೃದ್ಧಿ ತ್ವರಿತಗತಿಯಲ್ಲಿ ಆಗುತ್ತಿದೆ ಎಂದು ಅವರು ಉದ್ಯಮಿಗಳ ಗಮನಕ್ಕೆ ತಂದರು.
‘ಒಂದು ಜಿಲ್ಲೆ, ಒಂದು ಉತ್ಪನ್ನ’ ಉಪಕ್ರಮದಡಿ ರಾಜ್ಯದ 31 ಜಿಲ್ಲೆಗಳಿಂದಲೂ ಆಯಾ ಪ್ರದೇಶದ ವಿಶಿಷ್ಟ ಉತ್ಪನ್ನಗಳನ್ನು ಗುರುತಿಸಲಾಗಿದೆ. ಮಾರುಕಟ್ಟೆ ವಿಸ್ತರಣೆ ಮತ್ತಿತರ ನೆರವು ನೀಡಲಾಗುವುದು. ಈ ಮೂಲಕ ರಾಜ್ಯದ ನಿವ್ವಳ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕ ಕೊಡುಗೆ ಸಿಗುವಂತೆ ಮಾಡಲಾಗುವುದು ಎಂದು ಅವರು ವಿವರಿಸಿದರು.