ಬೆಳಗಾವಿ: ಇಂದಿನ ವ್ಯಾವಹಾರಿಕ ಬದುಕಿನಲ್ಲಿ ಜನ ಆಸ್ತಿ ಮತ್ತು ಹಣದ ಮೋಹದಿಂದ ಏನೆಲ್ಲಾ ಮಾಡುವುದಕ್ಕೆ ಸಿದ್ಧವಾಗುತ್ತಾರೆ ಎಂಬುದಕ್ಕೆ ಪ್ರತ್ಯಕ್ಷ್ಯ ಸಾಕ್ಷಿ ಎಂಬಂತಹ ವಿಲಕ್ಷಣ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.
ವಯೋವೃದ್ಧೆಯೊಬ್ಬರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಾ ಆಸ್ಪತ್ರೆಯ ಐಸಿಯು ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿಯೇ ಆಸ್ತಿ ನೋಂದಣಿ ಪತ್ರಕ್ಕೆ ಅವರ ಸಹಿ ಹಾಕುವುದಕ್ಕಾಗಿ ಅವರನ್ನು ಹಾಸಿಗೆಯಲ್ಲಿಯೇ ಆಸ್ಪತ್ರೆಯಿಂದ ಬೆಳಗಾವಿ ದಕ್ಷಿಣ ಉಪ ನೋಂದಣಾಧಿಕಾರಿಗಳ ಕಚೇರಿಗೆ (ಸಬ್ ರಿಜಿಸ್ಟರ್ ಕಚೇರಿ) ಕುಟುಂಬದ ಸದಸ್ಯರು ಕರೆತಂದ ಘಟನೆ ಶನಿವಾರ ನಡೆದಿದೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ನಿವಾಸಿ ಮಹಾದೇವಿ ಅಗಸಿಮನಿ(80) ಎಂಬ ಮಹಿಳೆ ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ದೇಹಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರ ಹೆಸರಿನಲ್ಲಿ ಹಿರೇಬಾಗೇವಾಡಿ ಗ್ರಾಮದಲ್ಲಿ ೨ ಎಕರೆ ೩೫ ಗುಂಟೆ ಜಮೀನಿದ್ದು, ಆ ಜಮೀನನ್ನು ಮಕ್ಕಳಾದ ವಿದ್ಯಾ ಹೊಸಮನಿ(೫೪) ಹಾಗೂ ರವೀಂದ್ರ ಗುರಪ್ಪ ಹೊಸಮನಿ(೫೧) ಎಂಬುವರಿಗೆ ಹಕ್ಕುಬಿಟ್ಟು ಕೊಡಲು ಅರ್ಜಿ ಸಲ್ಲಿಸಿದ್ದರು. ಆಸ್ತಿ ಹಂಚಿಕೆ ಹಕ್ಕುಪತ್ರಕ್ಕೆ ಅಜ್ಜಿಯ ಸಹಿ ಅಗತ್ಯವಿದ್ದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಐಸಿಯು ಬೆಡ್ನಲ್ಲಿ ಮಲಗಿದ್ದ ಅಜ್ಜಿಯನ್ನು ಹಾಸಿಗೆಯಲ್ಲಿಯೇ ಸಬ್ ರಿಜಿಸ್ಟರ್ ಕಚೇರಿಗೆ ಕರೆತರಲು ಮುಂದಾಗಿದ್ದಾರೆ.
ಅನಾರೋಗ್ಯದಿಂದ ಅಜ್ಜಿ ಆಸ್ಪತ್ರೆಯಲ್ಲಿರುವ ಕಾರಣ ಉಪನೋದಣಿ ಅಧಿಕಾರಿಗಳೇ ಆಸ್ಪತ್ರೆಗೆ ಬರುವಂತೆ ಕುಟುಂಬ ಸದಸ್ಯರು ಮನವಿ ಮಾಡಿದರೂ ಇದಕ್ಕೆ ಪ್ರೈವೇಟ್ ಅರ್ಜಿಯನ್ನು ಸಲ್ಲಿಸದ ಕಾರಣಕ್ಕೆ ಅಧಿಕಾರಿಗಳು ಆಸ್ಪತ್ರೆಗೆ ಹೋಗದೆ ಅಜ್ಜಿಯನ್ನೇ ಕಚೇರಿಗೆ ಕರೆತರುವಂತೆ ಸೂಚಿಸಿದ್ದರು ಎಂಬ ಅಂಶವನ್ನು ಸಹಾಯಕ ಉಪನೋಂದಣಾಧಿಕಾರಿ ಸಚಿನ್ ಮಂಡೇದ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.