ರಬಕವಿ-ಬನಹಟ್ಟಿ: ಪಿಎಫ್ಐ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ 5 ವರ್ಷಗಳ ಕಾಲ ನಿಷೇಧ ವಿಧಿಸುವ ಮೂಲಕ ಸಮಾಜದ ವಿಘಟನೆ ಹಾಗೂ ದೇಶ ಅಸ್ಥಿರಗೊಳಿಸಲು ಪ್ರಯತ್ನಿಸುವ ವಿಚ್ಛಿದ್ರಕಾರಿ ಶಕ್ತಿಗಳ ಸಂಚು ಫಲಿಸದು ಎಂಬ ಸ್ಪಷ್ಟ ಸಂದೇಶ ನೀಡಿದೆ. ಇದರೊಂದಿಗೆ ದೇಶಾದ್ಯಂತ ಭಯೋತ್ಪಾದನೆ ಹಾಗೂ ಜಿಹಾದಿಗಳ ಉತ್ಪಾದನಾ ಕಂಪನಿಗಳಾಗಿ ಬೆಳೆಯುತ್ತಿರುವ ಮದರಸಾಗಳನ್ನು ನಿಷೇಧಿಸಬೇಕೆಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಗುಡುಗಿದರು.
ಬನಹಟ್ಟಿಯಲ್ಲಿ ಭಗತ್ ಸಿಂಗ್ರ 115ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2014ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 36 ಹಿಂದೂ ಕಾರ್ಯಕರ್ತರ ಕೊಲೆ ನಡೆದಿವೆ. ಅದರಲ್ಲಿ 13 ಪ್ರಕರಣಗಳ ಪ್ರಾಥಮಿಕ ವರದಿಯಲ್ಲಿ ಎಸ್ಪಿಡಿಐ ಹಾಗೂ ಪಿಎಫ್ಐ ಸಂಘಟನೆಗಳ ಮತಾಂಧರದ್ದೇ ಇದೆ. ದೇಶದ 23 ರಾಜ್ಯಗಳಲ್ಲಿ ಈ ಸಂಘಟನೆಗಳ ಅಕ್ರಮದ ಬೇರು ಬಿಟ್ಟಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಆಕ್ರಮಿಸಿಕೊಂಡಿತ್ತು. ಕೇಂದ್ರದ ನಿರ್ಧಾರದಿಂದ ಮುಸ್ಲಿಂ ದೇಶದ್ರೋಹಿಗಳಿಗೆ ತಲ್ಲಣವುಂಟಾಗಿದೆ. ಮುಸ್ಲಿಂ ಯುವಕರು ದಾರಿ ತಪ್ಪುವದನ್ನು ಹಿರಿಯರು ಬೆಂಬಲಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಅವರ ಮೇಲೂ ಕ್ರಮ ಕೈಗೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲವೆಂದು ಮುತಾಲಿಕ್ ತಿಳಿಸಿದರು.
ಪಾಕ್ನಲ್ಲಿಯೇ ಮದರಸಾಗಳು ನಿಷೇಧಗೊಂಡಿವೆ. ಇಂತಹ ಅಪಾಯಕಾರಿ ವ್ಯವಸ್ಥೆಯು ದೇಶದಲ್ಲಿ 3 ಲಕ್ಷ ಮದರಸಾಗಳು ಕಾರ್ಯನಿರ್ವಹಿಸುತ್ತಿವೆ. ಉತ್ತರ ಪ್ರದೇಶ, ಆಸ್ಸಾಂ ರಾಜ್ಯಗಳಂತೆ ಜಿಹಾದಿ ಮಾನಸಿಕತೆ ತುಂಬುತ್ತಿರುವ ಮದರಸಾಗಳನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧ ಹೇರಬೇಕೆಂದರು.