ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಬುಧವಾರ ಆರಂಭವಾಗಲಿದೆ. ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕಡೆಯ ಹಾಗೂ ಮಧ್ಯಂತರ ಮುಂಗಡಪತ್ರವನ್ನು ಫೆಬ್ರವರಿ ಒಂದರಂದು ಮಂಡಿಸಲಾಗುತ್ತದೆ.
ಹಿಂದಿನ ಅಧಿವೇಶನದಲ್ಲಿ ಪ್ರತಿಪಕ್ಷಗಳ ಲೋಕಸಭೆಯ ೧೦೦ ಸದಸ್ಯರು ಸೇರಿದಂತೆ ಒಟ್ಟು ೧೪೬ ಸಂಸದರ ಅಮಾನತು ರದ್ದುಗೊಳಿಸಲಾಗಿದ್ದು, ಅವರು ಹಾಜರಾಗಬಹುದಾಗಿದೆ. ಈ ಪೈಕಿ ೧೩೨ ಸಂಸದರನ್ನು ಕಳೆದ ಅಧಿವೇಶನ ಉಳಿದ ಅಂತ್ಯದವರೆಗೆ ಮಾತ್ರ ಅಮಾನತು ಮಾಡಲಾಗಿತ್ತು. ಅದು ಡಿಸೆಂಬರ್ ೨೧ರಂದು ಮುಕ್ತಾಯಗೊಂಡಿದೆ. ಉಳಿದ ೧೪ ಸಂಸದರ ಅಮಾನತನ್ನು ರದ್ದುಗೊಳಿಸುವಂತೆ ಉಭಯಸದನಗಳ ಹಕ್ಕುಬಾಧ್ಯತಾ ಸಮಿತಿ ಮಾಡಿರುವ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಎಲ್ಲ ಸಂಸದರೂ ಈ ಅಧಿವೇಶನದಲ್ಲಿ ಭಾಗಿಯಾಗಬಹುದಾಗಿದೆ.
ರಾಷ್ಟçಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನಕ್ಕೆ ಮುಂಚಿತವಾಗಿ ಮಂಗಳವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ, ಯಾವುದೇ ಘೋಷಣಾ ಫಲಕವನ್ನು ಪ್ರದರ್ಶಿಸದಂತೆ ಪ್ರತಿಪಕ್ಷಗಳನ್ನು ಮನವಿ ಮಾಡಿಕೊಳ್ಳಲಾಗಿದೆ.
ಲೋಕಸಭೆ ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವುದರಿಂದ ಇದು ಮಧ್ಯಂತರ ಬಜೆಟ್ ಆಗಿದೆ. ೨೦೧೮ರಿಂದ ರಾಷ್ಟ್ರಪತಿ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮುಂಗಡಪತ್ರವನ್ನೂ ಕೂಡ ಮಂಡಿಸಲಾಗುತ್ತದೆ. ಜೆಡಿಯು ಎನ್‌ಡಿಎ ತೆಕ್ಕೆಗೆ ವಾಪಸ್ಸಾಗಿದ್ದು, ಟಿಎಂಸಿ, ಆಪ್ ಜೊತೆ ಕಾಂಗ್ರೆಸ್ ಒಡಕು ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಗೆ ಸ್ಪಷ್ಟವಾಗಿ ಹಿನ್ನಡೆಯುಂಟಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಅಧಿವೇಶನದಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ ಇದೆ.