ಹಾವೇರಿ: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಕಾಂಗ್ರೆಸ್‌ನವರು ಬೊಮ್ಮಾಯಿಯವರನ್ನ ತೆಗಿತಾರೆ, ಹೋಗಿ ಬಿಡ್ತಾರೆ ಅಂತೆಲ್ಲಾ ಅಪಪ್ರಚಾರ ಮಾಡ್ತಾ ಬಂದಿದ್ದಾರೆ. ಆದರೆ, ಬೊಮ್ಮಾಯಿಯವರು ಯಶಸ್ವಿಯಾಗಿ, ಪ್ರಾಮಾಣಿಕವಾಗಿ, ದಕ್ಷವಾಗಿ ದಿನಕ್ಕೆ ೧೫ಗಂಟೆಗಳ ಕಾಲ ಕೆಲಸ ಮಾಡಿ ಜನಾನುರಾಗಿ ಸಿಎಂ ಆಗಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ಭಯ ಹುಟ್ಟಿದೆ. ಬೊಮ್ಮಾಯಿ ಮತ್ತು ಯಡಿಯೂರಪ್ಪನವರ ನೇತೃತ್ವದಲ್ಲಿ ಮುಂದೆ ಠೇವಣಿ ಕಳೆದುಕೊಳ್ಳುತ್ತೇವೆ ಎನ್ನುವ ಭಾವನೆ ಕಾಂಗ್ರೆಸ್ಸಿನವರಿಗೆ ಬಂದಿದೆ. ಕಾಂಗ್ರೆಸ್ಸಿನವರು ಎಷ್ಟು ಸತ್ಯ ಹರಿಶ್ಚಂದ್ರರು ಅಂತಾ ಅವರ ಆತ್ಮವನ್ನ ಮುಟ್ಟಿ ನೋಡಿಕೊಳ್ಳಲಿ, ಮುಂಜಾಗ್ರತಾ ಕ್ರಮವಾಗಿ ಪಿಎಫ್‌ಐ ಸಂಘಟಕರನ್ನ ಪೊಲೀಸರು ಬಂಧಿಸುತ್ತಿದ್ದಾರೆ. ಬ್ಯಾನ್ ಮಾಡುವ ವಿಚಾರವನ್ನ ಮುಂದೆ ಸರ್ಕಾರ ತೀರ್ಮಾನ ಮಾಡುತ್ತದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆಯಿಲ್ಲ, ದೇಶವನ್ನ ಉಳಿಸುವಂತದ್ದು, ಶಾಂತಿ ಕಾಪಾಡುವ ವ್ಯವಸ್ಥೆ ಮುಖ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.