ಉಡುಪಿ: ಉಡುಪಿ ಅಷ್ಟ ಮಠಗಳ ಪರ್ಯಾಯಕ್ಕೆ ಮಾರ್ಗಸೂಚಿ
ರೂಪಣೆ ಮತ್ತು ಪುತ್ತಿಗೆ ಮಠ ಪರ್ಯಾಯಕ್ಕೆ ತಡೆ ಕೋರಿ ಬೆಂಗಳೂರಿನ ಕೃಷ್ಣ ಭಕ್ತರೋರ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಎಎಲ್)ಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹ ಇದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ. ನ್ಯಾಯಮೂರ್ತಿಗಳು ಉತ್ತಮ ವಿಚಾರವನ್ನೇ ಹೇಳಿದ್ದಾರೆ.
ನಾವು ಯಾವುದೇ ದೇಶಿಕ ವಿಚಾರಕ್ಕೆ ಒಳಪಟ್ಟವರಲ್ಲ. ಆಧ್ಯಾತ್ಮಿಕ ವಿಚಾರದಲ್ಲಿ ಸೀಮೆ ಇರಕೂಡದು, ಅದು ಗಡಿ ದಾಟಿ ಇರಬೇಕು.
ದೇಶಿಕ ನಿರ್ಬಂಧಕ್ಕೆ ಧಾರ್ಮಿಕ ವಿಚಾರ ಒಳಗಾಗಬಾರದು. ಯಾವುದೇ ತಡೆ (ಬ್ಯಾರಿಕೇಡ್) ಇರಬಾರದು.ಒಳ್ಳೆಯ ವಿಚಾರ ಎಲ್ಲಾ ಕಡೆ ಪಸರಿಸಬೇಕು. ಸದ್ವಿಚಾರಗಳು ಪ್ರಪಂಚದಲ್ಲಿ ವ್ಯಾಪ್ತವಾಗಬೇಕು ಎಂದರು.
ಆಧ್ಯಾತ್ಮಿಕ ವಿಚಾರ ವಿಶ್ವವ್ಯಾಪಿ ಆಗಬೇಕು. ಧಾರ್ಮಿಕ ವಿಚಾರದಲ್ಲಿ ಕೋರ್ಟು ಮಧ್ಯಪ್ರವೇಶ ಮಾಡುವುದಿಲ್ಲ ಎಂದಿರುವುದು ಉತ್ತಮ ವಿಚಾರ.
ಧಾರ್ಮಿಕ ವಿಚಾರ, ಧಾರ್ಮಿಕ ವ್ಯಕ್ತಿಗಳಿಗೆ ಸಂಬಂಧಪಟ್ಟದ್ದು. ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದರು.
ಧರ್ಮ ಎನ್ನುವುದು ದೇಶಾತೀತ. ಪ್ರಪಂಚದಾದ್ಯಂತ ಹಿಂದುಗಳಿದ್ದಾರೆ ಎಂದೂ ಶ್ರೀಪಾದರು ಹೇಳಿದರು.