ಅಪಘಾತ: ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಸಂತೋಷ್‌ ಲಾಡ್‌

Advertisement

ಧಾರವಾಡ : ಧಾರವಾಡ ಕೆಲಗೇರಿ ಸೇತುವೆ ಬಳಿ ಮೂರು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಚಿವ ಸಂತೋಷ್‌ ಲಾಡ್‌ ಅವರು ಅಪಘಾತವಾದ ಮಾರ್ಗದಲ್ಲೆ ಸಂಚರಿಸುತ್ತಿದ್ದರು. ಈ ವೇಳೆ ಮೂರು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿತ್ತು. ಮೂರು ಬೈಕ್‌ಗಳಲ್ಲಿ ಇಬ್ಬರು ಯುವತಿಯರು ಹಾಗೂ ನಾಲ್ವರು ಯುವಕರು ಗಾಯಗೊಂಡಿದ್ದರು. ಇದನ್ನು ಗಮನಿಸಿದ ಸಚಿವ ಲಾಡ್‌ ಅವರು ಕೂಡಲೇ ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಕರೆದೊಯ್ದು ಧಾರವಾಡದ ಸಿವಿಲ್‌ ಆಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆ ದೊರೆಯುವಂತೆ ಮಾಡಿದರು. ಗಾಯಾಳುಗಳನ್ನು ಅಪಘಾತದ ಸ್ಥಳದಿಂದ ಮೇಲೆತ್ತಿ ಆಸ್ಪತ್ರೆಯಲ್ಲಿ ಸ್ಟ್ರೇಚರ್‌ ಹಾಗೂ ವ್ಹೀಲ್‌ಚೇರ್ ಮೇಲೆ ಸಾಗಿಸಲು ಸಚಿವರೇ ಕೈಜೋಡಿಸಿದರು. ಧೈರ್ಯ ಹೇಳಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ನೀಡಲ ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿದರು. ಸಚಿವ ಸಂತೋಷ್‌ ಲಾಡ್‌ ಅವರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದ್ದು, ಅವರ ಸಮಯಪ್ರಜ್ಞೆಯನ್ನು ಆಸ್ಪತ್ರೆಯ ಆವರಣದಲ್ಲಿದ್ದವರು ಕೊಂಡಾಡಿದ್ದಾರೆ.