ಶಾಂತಿ ಕದಡಲು ಯತ್ನಿಸಿದರೆ ಕ್ರಮ: ಡಿಸಿ ಶೆಟ್ಟೆಣ್ಣವರ

ಗಣೇಶ ವಿಸರ್ಜನೆ
Advertisement

ರಾಣೇಬೆನ್ನೂರು: ಹಬ್ಬಗಳ ಆಚರಣೆ ನೆಪದಲ್ಲಿ ಸಮಾಜದಲ್ಲಿ ಶಾಂತಿ ಕದಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಹೇಳಿದರು.
ನಗರದ ತಾಪಂ ಸಭಾಭವನದಲ್ಲಿ ಶುಕ್ರವಾರ ಸಂಜೆ ಸೆ. 28ರಂದು ನಡೆಯಲಿರುವ ವಂದೇಮಾತರಂ ಸ್ವಯಂ ಸೇವಾ ಸಂಘದ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಅದನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸೆ. 20ರಂದು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಜರುಗಿದ ಗಲಾಟೆ ನಗರಕ್ಕೆ ಕಪ್ಪು ಚುಕ್ಕೆಯಾಗಿದೆ. ಇಲ್ಲಿಯವರೆಗೂ ನಗರದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೆ. 28ರಂದು ನಡೆಯಲಿರುವ ವಂದೇಮಾತರಂ ಸ್ವಯಂ ಸೇವಾ ಸಂಘದ ಗಣೇಶ ವಿಸರ್ಜನೆ ಮೆರವಣಿಗೆಗೆ ಜವಾಬ್ದಾರಿ ಸ್ಥಾನದಲ್ಲಿರುವವರು, ಸಮಿತಿ ಸದಸ್ಯರು, ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ನಗರದ ಪ್ರಮುಖರನ್ನು ಒಳಗೊಂಡ ಗಣೇಶ ವಿಸರ್ಜನೆ ಸಮಿತಿ ರಚಿಸಿಕೊಂಡು ಪೊಲೀಸ್ ಇಲಾಖೆಗೆ ಮುಚ್ಚಳಿಕೆ ಪತ್ರ ಬರೆದುಕೊಡಬೇಕು ಎಂದರು.