NIA ದಾಳಿ: 20 ಮಂದಿ ವಶಕ್ಕೆ

NIA Raid
Advertisement

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಪೊಲೀಸರು ಮಿಂಚಿನ ದಾಳಿ ನಡೆಸಿ ಎಸ್‌ಡಿಪಿಐ, ಪಿಎಫ್‌ಐನ ೨೦ ಪ್ರಮುಖರನ್ನು ಬಂಧಿಸಿದ್ದಾರೆ. ಗುರುವಾರ ನಸುಕಿನಲ್ಲಿ ದಾಳಿ, ಶೋಧ ಕಾರ್ಯ ನಡೆದಿರಿಂದ ಸಂಘಟನೆಯಲ್ಲಿವರು ಬೆಚ್ಚಿಬಿದ್ದಿದ್ದಾರೆ ಸಾರ್ವತ್ರಿಕ ತಲ್ಲಣವುಂಟಾಗಿದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ, ಮಂಗಳೂರು, ಶಿವಮೊಗ್ಗ, ಕೊಪ್ಪಳ, ರಾಯಚೂರು, ಹೀಗೆ ನಾನಾ ಕಡೆ ಪಿಎಫ್‌ಐ ಮತ್ತಿತರ ಸಂಘಟನೆಯ ಕಚೇರಿಗಳು ಹಾಗೂ ಪ್ರಮುಖರ ಮನೆಗಳ ಮೇಲೆ ದಾಳಿ ನಡೆಸಿ ಪಿಎಫ್‌ಐ ಪ್ರಮುಖರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೆಲವೆಡೆ ಭಾರಿ ನಗದು ಹಣ, ಲ್ಯಾಪ್‌ಟಾಪ್, ಮೊಬೈಲ್, ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್ ಸೇರಿದಂತೆ ಹಲವು ಪ್ರಮುಖ ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ, ಡಿಸಿಪಿಗಳಾದ ಡಾ. ಭೀಮಾಶಂಕರ್ ಗುಳೇದ್ ಮತ್ತು ಡಾ. ಎಸ್.ಡಿ. ಶರಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ೧೪ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಐವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಯಾಸಿರ್ ಹಸನ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿಗೆ ಕರೆದೊಯ್ದು ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು.
ಕಲಬುರಗಿಯಲ್ಲಿ ೧೪ ಲಕ್ಷ ರೂ. ವಶಕ್ಕೆ:
ಮಂಗಳೂರು ಜಿಲ್ಲೆಯ ೧೧ ಕಡೆ ದಾಳಿ ನಡೆದಿದ್ದು ಐವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಲಬುರಗಿಯಲ್ಲಿ ಪಿಎಫ್‌ಐ ಜಿಲ್ಲಾ ಅಧ್ಯಕ್ಷö ಏಜಾಜ್ ಅಲಿಯನ್ನು ಬಂಧಿಸಿ ೧೪ ಲಕ್ಷö ರೂ. ವಶಪಡಿಸಿಕೊಳ್ಳಲಾಗಿದೆ. ರಾಜ್ಯ ಖಜಾಂಚಿ ಶಾಹೀದ್ ನಾಸೀರ್ ಪರಾರಿಯಾಗಿದ್ದಾರೆ. ದಾವಣಗೆರೆಯಲ್ಲಿ ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಇಮಾದುದ್ದೀನ್‌ನನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಗಂಗಾವತಿಯಲ್ಲಿ ವಾಸವಾಗಿರುವ ಕೊಪ್ಪಳ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಂಗಳೂರಿನ ಡಿಜೆ ಹಳ್ಳಿ ಠಾಣೆಯ ಕೇಸ್‌ನಲ್ಲಿ ಬೇಕಾದ ಆರೋಪಿ ಮನೆಗಳ ಮೇಲೆ ದಾಳಿ ಮಾಡಿ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಕೆಲವರನ್ನು ಬಂಧಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್‌ ತಿಳಿಸಿದ್ದಾರೆ. ಜಪ್ತಿ ಮಾಡಿಕೊಂಡಿರುವ ವಸ್ತುಗಳು ಸೇರಿ ಎಲ್ಲ ಬಂಧಿತರನ್ನು ಡಿಜೆ ಹಳ್ಳಿ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.