ಭಾರತ ವನಿತೆಯರ ಶುಭಾರಂಭ

Advertisement

ಸ್ಯಾಂಟಿಯಾಗೊ(ಚಿಲಿ): ಮೂವರ ‘ಹ್ಯಾಟ್ರಿಕ್’ಗಳ ನೆರವಿನೊಡನೆ ಕೆನಡಾದ ಎದುರು ಬರೋಬ್ಬರಿ ಒಂದು ಡಜನ್ ಗೋಲುಗಳ ಗೆಲುವು ದಾಖಲಿಸಿದ ಭಾರತ ಇಲ್ಲಿ ನೆಡೆದಿರುವ ಎಫ್ಐಎಚ್ ಮಹಿಳೆಯರ ಜ್ಯೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಶುಭಾರಂಭಗೈದಿದೆ.
‘ಸಿ’ ಗುಂಪಿನಲ್ಲಿ ತಾನಾಡಿದ ಮೊದಲ ಪಂದ್ಯದುದ್ದಕ್ಕೂ ಸಂಪೂರ್ಣ ಹಿಡಿತ ಸಾಧಿಸಿದ್ದ ಭಾರತದ ಪರ ಮುಮ್ತಾಜ್ ಖಾನ್(೨೬, ೪೧, ೫೪ ಹಾಗೂ ೬೦ನೇ ನಿಮಿಷ) ನಾಲ್ಕು ಗೋಲು ಬಾರಿಸಿದರೆ, ದೀಪಿಕಾ ಸೊರೆಂಗ್(೩೪, ೫೦ ಹಾಗೂ ೫೪ನೇ ನಿಮಿಷ) ಹಾಗೂ ಅನ್ನು(೪, ೬ ಹಾಗೂ ೩೯ನೇ ನಿಮಿಷ) ಇಬ್ಬರೂ ಭರ್ಜರಿ ‘ಹ್ಯಾಟ್ರಿಕ್’ ಪೂರೈಸಿದರು. ದಿಪಿ ಮೊನಿಕಾ ಟೊಪ್ಪೊ(೨೧ ನೇ ನಿಮಿಷ) ಹಾಗೂ ನೀಲಮ್(೪೫ನೇ ನಿಮಿಷ) ತಲಾ ಒಂದೊಂದು ಯಶ ಕಂಡರು, ಈ ಗೆಲುವು ಭಾರತದ ವನಿತೆಯರಿಗೆ ಮೂರು ಪಾಯಿಂಟ್‌ಗಳ ನೀಡಿತಲ್ಲದೇ ಹನ್ನೆರಡು ಗೋಲುಗಳ ಅಂತರವನ್ನೂ ನೀಡಿತು.
ಪಂದ್ಯಾವಳಿಯಲ್ಲಿ ಆಡುತ್ತಿರುವ ಹದಿನಾರು ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರತ-ಕೆನಡಾಗಳ ಹೊರತಾಗಿ ಜರ್ಮನಿ ಹಾಗೂ ಬೆಲ್ಜಿಯಂಗಳು ‘ಸಿ’ ಗುಂಪಿನಲ್ಲಿವೆ. ‘ಎ’ ಗುಂಪಿನಲ್ಲಿ ಚಿಲಿ, ಆಸ್ಟ್ರೇಲಿಯಾ, ನೆದರ್ಲೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾಗಳಿದ್ದರೆ, ‘ಬಿ’ ಗುಂಪು ಕೊರಿಯಾ, ಅರ್ಜೆಂಟಿನಾ, ಸ್ಪೇನ್ ಹಾಗೂ ಜಿಂಬಾಬ್ವೆಗಳಿವೆ. ಇಂಗ್ಲೆಂಡ್, ಜಪಾನ, ನ್ಯೂಜಿಲೆಂಡ್ ಹಾಗೂ ಅಮೇರಿಕಗಳನ್ನು ‘ಡಿ’ ಗುಂಪಿನಲ್ಲಿರಿಸಲಾಗಿದೆ.
ಭಾರತ ೨೦೨೨ರ ಪಂದ್ಯಾವಳಿಯಲ್ಲಿ ಗೌರವಯುತ ನಾಲ್ಕನೇ ಸ್ಥಾನ ಸಂಪಾದಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.