ಸಮಯ ಬಂದಾಗ ಹಾಲಿ-ಮಾಜಿಗಳ ಜತೆ ವಿದೇಶಕ್ಕೆ ಹೋಗ್ತೇನೆ

ಸತೀಶ ಜಾರಕಿಹೊಳಿ
Advertisement

ಬೆಳಗಾವಿ: ಸಮಯ ಬರಲಿ, ಬಂದಾಗ ಹಾಲಿ-ಮಾಜಿ ಶಾಸಕರನ್ನು ವಿದೇಶಕ್ಕೆ ಕೊಂಡೊಯ್ಯೋಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದುಬೈ ಪ್ರವಾಸದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿ ಎಲ್ಲದಕ್ಕೂ ಸೂಕ್ತ ಸಮಯ ಬರಬೇಕು ಎಂದು ಸೂಚ್ಯವಾಗಿ ಹೇಳಿದರು.
ಇನ್ನು ಜಾತಿಗಣತಿ ಬಗ್ಗೆ ಕಾಂತರಾಜು ವರದಿ ಸ್ವೀಕರಿಸಿದರೆ ಸರ್ಕಾರಕ್ಕೆ ತೊಂದರೆಯಾಗುತ್ತದೆಯಂತೆ. ಹೌದೇ, ಎಂಬ ಪ್ರಶ್ನೆಗೆ ನಮಗಿನ್ನೂ ಆ ವರದಿಯೇ ಬಂದಿಲ್ಲ. ವರದಿ ಕೈ ಸೇರಿದ ನಂತರ ಅದನ್ನು ಪೂರ್ತಿ ಮನನ ಮಾಡಿಕೊಂಡು ಅದರ ಬಗ್ಗೆ ಚರ್ಚೆ ನಡೆಸಬೇಕು. ಇದೆಲ್ಲಾ ಸುದೀರ್ಘ ಪ್ರಕ್ರಿಯೆ. ಮೊದಲು ವರದಿ ಬರಲಿ ಆ ಮೇಲೆ ನೋಡೋಣ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿದ್ದಾರೆ. ಅವರು ಈ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದಕ್ಕೆ ಹಕ್ಕು ಇದ್ದು, ಇದನ್ನು ಹತ್ತಿಕ್ಕುವ ಪ್ರಯತ್ನ ಮಾಡುವುದು ಸರಿಯಲ್ಲ. ಸುವರ್ಣಸೌಧದ ಬಳಿ ಪ್ರತಿಭಟನೆ ಕಡಿಮೆಯಾಗಬೇಕಾದರೆ ಆಯಾ ಇಲಾಖೆಯ ಸಚಿವರು ಅಧಿವೇಶನ ಮುಂಚಿತವಾಗಿಯೇ ಸಮಸ್ಯೆಯುಳ್ಳವರ (ಪ್ರತಿಭಟನಾಕಾರರ) ಮನವಿ ಸ್ವೀಕರಿಸುವಂತಾಗಬೇಕು. ಪ್ರತಿಭಟನೆ ಮಾಡಲು ಬರುವವರನ್ನು ಬರಬೇಡ ಎಂದು ಹೇಳುವುದು ಅಸಾಧ್ಯ ಎಂದು ಅವರು ಹೇಳಿದರು.