ಹಳೇ ವೈಷಮ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

Advertisement

ಬೆಳಗಾವಿ: ಹಳೇ ವೈಷಮ್ಯ ಹಿನ್ನೆಲೆ ಪೆಟ್ರೋಲ್ ಬಂಕ್​​ನಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಭಾನುವಾರ ರಾತ್ರಿ ಜಿಲ್ಲೆಯ ಗೋಕಾಕ್ ದಲ್ಲಿ ನಡೆದಿದೆ. ಗೋಕಾಕ್​ ಪಟ್ಟಣದ ಆದಿಜಾಂಬವ ನಗರದ ನಿವಾಸಿ ಶಾನೂರು ಪೂಜಾರಿ (27) ಕೊಲೆಯಾದ ಯುವಕ ಎಂದು ಗೊತ್ತಾಗಿದೆ.
ಘಟನೆಯಿಂದ ಕೆರಳಿದ ಮೃತ ಯುವಕನ ಕುಟುಂಬಸ್ಥರು ಅಲ್ಲಿನ ಶಂಕಿತ ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ 1 ಬೈಕ್, 1 ಕಾರು ಜಖಂಗೊಂಡಿವೆ. ನೂರಕ್ಕೂ ಹೆಚ್ಚು ಜನರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗೋಕಾಕ್​ ಶಹರ್ ಠಾಣಾ ಪೊಲೀಸರು ಉದ್ರಿಕ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಈ ವೇಳೆ ಆರೋಪಿಗಳನ್ನು ಬಂಧಿಸುವಂತೆ ಮೃತನ ಕುಟುಂಬಸ್ಥರು ಪಟ್ಟು ಹಿಡಿದು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.