ಮನದ ಪಾವಿತ್ರ್ಯಕ್ಕೆ ಅನ್ನವೂ ಪವಿತ್ರವಾಗಿರಲಿ

Advertisement

ಮಹಾಭಾರತದ ಯುದ್ಧದಲ್ಲಿ ಪಾರ್ಥನ ಬಾಣಗಳಿಂದ ಆಹತರಾದ ಭೀಷ್ಮ ಪಿತಾಮಹರು ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣವನ್ನು ನಿರೀಕ್ಷಿಸುವ ಪ್ರಸಂಗ.
ಯುದ್ಧವೆಲ್ಲ ಅಂತ್ಯಗೊಂಡು ಹಸ್ತಿನಾಪುರ ಪಾಂಡವರ ಕೈವಶವಾಗಿತ್ತು. ಶರಶಯ್ಯೆಯಲ್ಲಿ ಮಲಗಿದ ಭೀಷ್ಮರು ಪಾಂಡವರನ್ನೆಲ್ಲ ಬರಲು ತಿಳಿಸಿದರು. ವಿಧೇಯರಾದ ಪಾಂಡವರು ಮಾತಾ ಕುಂತಿ ಮತ್ತು ಸತಿ ದ್ರೌಪದಿಯೊಡಗೂಡಿ ಪಿತಾಮಹರ ಬಳಿ ಬಂದು ಕೈಮುಗಿದು ‘ಪಿತಾಮಹರೆ! ನಮ್ಮನ್ನೆಲ್ಲ ಬರಹೇಳಿದಿರಂತೆ?’ ಎಂದರು. ಆಗ ಭೀಷ್ಮರು ಕ್ಷೀಣವಾದ ಧ್ವನಿಯಲ್ಲಿ ‘ಹೌದು, ನಿಮ್ಮನ್ನು ಬರಹೇಳಿದ್ದು ಧರ್ಮೋಪದೇಶ ಮಾಡಲು, ನಾನು ದೇಹವನ್ನು ಬಿಡುವ ಕಾಲ ಸನ್ನಿಹಿತವಾಗಿದೆ ಕಾರಣ ಧರ್ಮ ರಹಸ್ಯವನ್ನು ನಿಮಗೆ ಉಪದೇಶಿಸಬೇಕೆಂಬ ಬಯಕೆಯಿಂದ ನಿಮ್ಮನ್ನೆಲ್ಲ ಬರಹೇಳಿದೆ’ ಎಂದರು. ಎಲ್ಲರೂ ಉಪದೇಶವನ್ನಾಲಿಸಲು ಸಿದ್ಧರಾಗಿ ನಿಂತರು. ದ್ರೌಪದಿ ಮಾತ್ರ ಮುಖ ತಿರುಗಿಸಿ ನಗಲಾರಂಭಿಸಿದಳು. ಪಿತಾಮಹ ಭೀಷ್ಮರು ವಿಸ್ಮಯದಿಂದ ‘ಏಕೆ ನಗುತ್ತಿರುವೆ, ನಾನೇನಾದರು ಅನುಚಿತವಾಡಿದೆನೆ?’ ಎಂದು ಪ್ರಶ್ನಿಸಿದರು. “ಹಾಗೇನಿಲ್ಲ ತಾತ! ಅದೇಕೋ ನಗು ಬಂತು ಸುಮ್ಮನೆ ನಕ್ಕೆ ಅಷ್ಟೇ’ ಅಂದಳು. ಆಗ ಪಿತಾಮಹರು ‘ಮಗಳೆ! ನಗು ಸುಮ್ಮನೇ ಬರುವುದಿಲ್ಲ. ಅದಕ್ಕೆ ಏನಾದರೂ ಕಾರಣವಿದ್ದೇ ಇರುತ್ತದೆ. ಏಕೆ ನಕ್ಕೆ ಹೇಳು’ ಎಂದರು. “ತಾತಾ! ನೀವು ಕೇಳಲೇಬೇಕೆಂದು ಅಪೇಕ್ಷೆ ಪಟ್ಟ ಬಳಿಕ ಹೇಳುವುದು ನನ್ನ ಕರ್ತವ್ಯ. ಹಿಂದೊಮ್ಮೆ ಹಸ್ತಿನಾಪುರದ ಸಭೆಯಲ್ಲಿ ದುಷ್ಟ ದುರ್ಯೋಧನಾದಿಗಳು ನನ್ನ ವಸ್ತ್ರಾಪಹರಣ ಮಾಡಲು ಯತ್ನಿಸುವಾಗ ಆ ಸಭೆಯಲ್ಲಿ ಕುಳಿತ ನಿಮ್ಮನ್ನು ಧರ್ಮೋಪದೇಶ ನೀಡಿರೆಂದು ಅನನ್ಯಭಾವದಿಂದ ಬೇಡಿಕೊಂಡೆ. ಬಿಕ್ಕಿ ಬಿಕ್ಕಿ ಅತ್ತು ಧರ್ಮ ಭಿಕ್ಷೆ ಬೇಡಿದೆ. ಆಗ ನೀವು ಧರ್ಮದ ಒಂದು ಮಾತನ್ನೂ ದುರ್ಯೋಧನನಿಗೆ ಹೇಳಲಿಲ್ಲ. ಇಂದೋ ನಾಳೆಯೋ ಎಂದು ಸಾಯಲು ದಿನಗಳನ್ನು ಎಣಿಸುವ ಅವಸ್ಥೆಯಲ್ಲಿರುವ ನೀವು ಈಗ ಧರ್ಮ ಹೇಳಲು ಪ್ರಾರಂಭಿಸಿರುವಿರಿ. ಇಂದಿನ ಈ ಧರ್ಮೋಪದೇಶ ಅಂದು ಧರ್ಮ ನೀಡಿ, ಧರ್ಮ ನೀಡಿ ಎಂದು ಪ್ರಾರ್ಥಿಸುವಾಗ ಎಲ್ಲಿ ಹೋಗಿತ್ತು. ಎಂದು ಆವೇಶಭರಿತಳಾಗಿಯೇ ನುಡಿದಳು ದ್ರೌಪದಿ. ತಾತನಿಗೆ ಹೀಗೇಕೆ ಮಾತನಾಡುತ್ತಿರುವಳಿವಳು? ಎಂದು ಎಲ್ಲರೂ ವಿಸ್ಮಿತರಾಗಿ ದ್ರೌಪದಿಯನ್ನು ನೋಡುತ್ತಿದ್ದರೆ ಭೀಷ್ಮರು ಕಣ್ಣಲ್ಲಿ ನೀರು ತಂದು “ನೀನು ಹೇಳಿದ ಮಾತು ನಿಜ ಮಗಳೆ! ಆದರೆ ಅದಕ್ಕೆ ಕಾರಣವಿಲ್ಲದಿಲ್ಲ. ಅಧರ್ಮಿ ದುರ್ಯೋಧನನ ಅನ್ನ ಉಂಡು ನನ್ನ ಧಾರ್ಮಿಕ ಮನಸ್ಸು ಅಧರ್ಮದಿಂದ ಆವರಿಸಲ್ಪಟ್ಟಿತು. ಆದ್ದರಿಂದ ಆಗ ಧರ್ಮದ ಮಾತು ಹೊರಬರಲಿಲ್ಲ. ಈಗ ಅರ್ಜುನನ ಬಾಣಗಳಿಂದ ಆ ಅಧರ್ಮ ಅನ್ನದಿಂದ ನಿರ್ಮಾಣಗೊಂಡ ರಕ್ತವೆಲ್ಲ ಹರಿದು ಹೊರ ಚೆಲ್ಲಿದೆ. ಧರ್ಮ ಮನಸ್ಸು ಜಾಗೃತಗೊಂಡು ಜೀವಂತವಾಗಿದೆ. ಅದು ನಿಮಗೆ ಧರ್ಮೋಪದೇಶ ಮಾಡುತ್ತಿದೆ’ ಎಂದು ಹೇಳಿದರು. ಇಲ್ಲಿ ಮಹಾಭಾರತದ ಈ ಪ್ರಸಂಗವನ್ನು ನಿರೂಪಿಸುವ ಕಾರಣವಿಷ್ಟೇ ಮನವು ಪವಿತ್ರವಾಗಬೇಕಾದರೆ ನಾವು ಸೇವಿಸುವ ಅನ್ನವು ಪವಿತ್ರವಾಗಿರಬೇಕು. ಅದನ್ನು ಶುದ್ಧಗೊಳಿಸಬೇಕು. ನಾವು ಸೇವಿಸುವ ಅನ್ನದ ಸೂಕ್ಷ್ಮಭಾಗವು ಮನಸ್ಸಾಗಿ ರೂಪುಗೊಳ್ಳುವುದರಿಂದ ಮನಸ್ಸನ್ನು ನಿರ್ಮಲಗೊಳಿಸಬೇಕಾದರೆ ಅದನ್ನು ಅನ್ನದಿಂದಲೇ ಪ್ರಾರಂಭಿಸಬೇಕು.