ಜನರ ಗೋಳಿಗೆ ಸೂಕ್ತ ಸ್ಪಂದನೆಗೂ ಬರವೇ?

Advertisement

ರಾಜ್ಯದಲ್ಲಿ ಬರಗಾಲ ಪರಿಹಾರಕ್ಕೆ ಕೇಂದ್ರ ನಯಾಪೈಸೆ ನೀಡಿಲ್ಲ. ನಮ್ಮ ಸಂಸದರು ಏನು ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ಪಕ್ಷ ರಾಜಕಾರಣ ಅಡ್ಡಿ ಆಗಬಾರದು.

ರಾಜ್ಯದಲ್ಲಿ ಬರಗಾಲ ಬಂದು ೪ ತಿಂಗಳಾದರೂ ಪರಿಹಾರ ಕಾಮಗಾರಿ ಆರಂಭಗೊಂಡಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮಾರ್ಗಸೂಚಿಯಂತೆ ತಾಲೂಕುವಾರು ಸಮೀಕ್ಷೆ ನಡೆಸಿ ೨೧೬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಅದು ಇದುವರೆಗೆ ಚಕಾರ ಎತ್ತಿಲ್ಲ. ವಿಧಾನಸಭೆಯ ಚುನಾವಣೆಯಲ್ಲಿ ಜನ ಬೇರೆ ತೀರ್ಮಾನ ಕೈಗೊಂಡರು ಎಂದು ಕೇಂದ್ರ ಉದಾಸೀನ ತೋರುವುದು ತರವಲ್ಲ. ಚುನಾವಣೆಯೇ ಬೇರೆ ಆಡಳಿತವೇ ಬೇರೆ. ಲೋಕಸಭೆಗೆ ಕರ್ನಾಟಕದಿಂದ ಚುನಾಯಿತರಾದವರಲ್ಲಿ ಬಿಜೆಪಿಯವರೇ ಹೆಚ್ಚು. ಅವರ ಈಗ ದಿವ್ಯಮೌನ ಸೋಜಿಗ ಎನಿಸುತ್ತದೆ. ಸರ್ಕಾರದ ತೀರ್ಮಾನಗಳಲ್ಲಿ ಪಕ್ಷ ರಾಜಕಾರಣ ಬರಬಾರದು. ಅದರಲ್ಲೂ ಬಿಜೆಪಿ ರಾಷ್ಟ್ರೀಯಚಿಂತನೆಯಲ್ಲಿ ಬೆಳೆದುಬಂದಿರುವ ಪಕ್ಷ. ಅದು ಸಂಕುಚಿತ ರಾಜಕಾರಣದಲ್ಲಿ ಮುಳುಗುವುದಿಲ್ಲ ಎಂಬ ಭಾವನೆ ಜನರಲ್ಲಿದೆ. ಚಿಲ್ಲರೆ ರಾಜಕೀಯಕ್ಕೆ ಅವಕಾಶ ಕೊಡಬಾರದು. ಬರಗಾಲ ಬಂದಿರುವುದು ಜನರಿಗೆ ಹೊರತು ಸರ್ಕಾರಕ್ಕಲ್ಲ. ಕೇಂದ್ರ ಮಾರ್ಗಸೂಚಿಯಂತೆ ಸಮೀಕ್ಷೆ ನಡೆಸಿದಾಗ ಒಟ್ಟು ೩೩,೭೦೦ ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಕೇಂದ್ರಕ್ಕೆ ಮನವಿ ಸಲ್ಲಿಸಿಯಾಗಿದೆ. ಆದರೂ ಕೇಂದ್ರ ಉದಾಸೀನ ತೋರುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಬಂದು ಸ್ಥಳ ಪರಿಶೀಲನೆ ನಡೆಸಿ ಹೋಗಿದೆ. ವರದಿ ಸಲ್ಲಿಸಲು ಎಷ್ಟು ದಿನ ಬೇಕೋ ತಿಳಿಯದು. ಯಾವುದಕ್ಕೂ ಕಾಲಮಿತಿ ಬೇಕು. ಜನ ಈಗಾಗಲೇ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ದನಕರುಗಳನ್ನು ಸಾಕಲು ಸಾಧ್ಯವಾಗದೇ ಕಸಾಯಿಖಾನೆಗೆ ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಗೋಮಾತೆಯ ರಕ್ಷಣೆ ಸರ್ಕಾರ ನೀತಿ ಎನ್ನುವವರು ಬರಗಾಲದಲ್ಲಿ ನೆರವು ನೀಡುವುದಿಲ್ಲ ಎನ್ನುವುದು ವಿಪರ್ಯಾಸವಾಗಿ ಕಾಣುತ್ತದೆ. ಕೇಂದ್ರ ಸರ್ಕಾರ ವಿಳಂಬ ಮಾಡಿದರೂ ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಬರುವುದಿಲ್ಲ ಗೋಶಾಲೆಗಳನ್ನು ತೆರೆಯಬೇಕು. ದನಕರುಗಳಿಗೆ ಮೇವು ಸರಬರಾಜು ಮಾಡುವ ಹಾಗೂ ಜನರಿಗೆ ನರೇಗಾ ಯೋಜನೆಯಲ್ಲಿ ಕೆಲಸ ಕೊಡುವ ಕೆಲಸ ನಡೆಯಬೇಕು. ಜನ ಗುಳೇ ಹೋಗುವುದನ್ನು ತಪ್ಪಿಸಬೇಕು. ಇದೆಲ್ಲಕ್ಕೂ ಕೇಂದ್ರದ ನೆರವು ಬೇಕೇ ಬೇಕು. ಬರಗಾಲ ಬಂದಾಗ ಪಕ್ಷ ರಾಜಕಾರಣಕ್ಕೆ ಆಸ್ಪದ ಕೊಡಬಾರದು. ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಬರುತ್ತದೆ. ಆಗ ಜನರ ಮುಂದೆ ಮತ ಕೇಳಲು ಹೋಗಲೇಬೇಕು ಎಂಬುದನ್ನು ಅವರು ಮರೆಯಬಾರದು. ಬರಗಾಲ ಎಂದೂ ಬಯಸಿ ಬರುವುದಲ್ಲ. ನೈಸರ್ಗಿಕ ವಿಕೋಪ. ಅದನ್ನು ಗ್ರಾಮೀಣ ಜನ ಎದುರಿಸಲು ಸರ್ಕಾರದ ಆಸರೆ ಬೇಕೇ ಬೇಕು.
ಬರಗಾಲ ಪೀಡಿತ ತಾಲೂಕುಗಳಿಗೆ ಉಸ್ತುವಾರಿ ಸಚಿವರು ಹೋಗಿ ವಾಸ್ತವ್ಯ ಹೂಡಿ ಪರಿಹಾರ ಕಾಮಗಾರಿಗಳು ಸಮರ್ಪಕವಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು. ಅವರೊಂದಿಗೆ ಕ್ಷೇತ್ರದ ಸಂಸದರು ಪ್ರವಾಸ ಮಾಡಿ ಜನರಲ್ಲಿ ಆತ್ಮವಿಶ್ವಾಸ ತುಂಬಬೇಕು. ಅದರಲ್ಲೂ ಉತ್ತರ ಕರ್ನಾಟಕದಲ್ಲೇ ಹೆಚ್ಚು ಜನ ಬರಗಾಲದಿಂದ ತತ್ತರಿಸಿದ್ದಾರೆ. ಮೊದಲೇ ಬಡತನ. ಅದರೊಂದಿಗೆ ಬರಗಾಲ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತೆ. ಅಪೌಷ್ಟಿಕತೆ ಕಾಡುತ್ತಿದೆ. ಮಹಿಳೆಯರು ಮತ್ತು ಮಕ್ಕಳು ರಕ್ತಹೀನತೆಯಿಂದ ಬಳಲುವುದು ಸಾಮಾನ್ಯವಾಗಿದೆ. ದೆಹಲಿಯಲ್ಲಿ ಕುಳಿತವರಿಗೆ ಇಲ್ಲಿಯ ದುರ್ಭರ ಸ್ಥಿತಿ ಅರ್ಥವಾಗುವುದಿಲ್ಲ. ಅದನ್ನು ಮನವರಿಕೆ ಮಾಡಿಕೊಡುವುದು ಸಂಸದರ ಕರ್ತವ್ಯ. ಅವರು ತಮ್ಮ ಕರ್ತವ್ಯ ಅರಿತು ನಡೆದುಕೊಳ್ಳಬೇಕು. ಹಿಂದೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಬೇರೆ ಬೇರೆ ಪಕ್ಷಗಳು ಆಡಳಿತದಲ್ಲಿದ್ದವು. ಆದರೆ ಬರಗಾಲ ಪರಿಹಾರ ಕಾಮಗಾರಿಗೆ ಅಡ್ಡಿಯಾಗಿರಲಿಲ್ಲ.