ಸೈಕಲ್ ಭಾಗ್ಯ ಯೋಜನೆ ಮತ್ತೆ ಪ್ರಾರಂಭವಾಗಲಿ

Advertisement

ಬಸ್ ಸಂಪರ್ಕ ಇಲ್ಲದ ಗ್ರಾಮಗಳ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಮುಂದುವರಿಸುವುದು ಅಗತ್ಯ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮಗೊಳ್ಳುತ್ತದೆ.

ಕಳೆದ ೩ ವರ್ಷಗಳಿಂದ ಸರ್ಕಾರ ಉಚಿತ ಸೈಕಲ್ ವಿತರಣೆ ನಿಲ್ಲಿಸಿದೆ. ೨೦೦೬ ರಿಂದ ೧೨ ವರ್ಷ ಈ ಯೋಜನೆ ನಿರಂತರವಾಗಿ ಜಾರಿಯಲ್ಲಿತ್ತು. ಕೊರೊನಾ ಕಾಲದಲ್ಲಿ ಶಾಲೆಗಳು ಮುಚ್ಚಿದ್ದವು ಎಂಬ ಕಾರಣದ ಮೇಲೆ ಈ ಯೋಜನೆಯನ್ನು ಕೈಬಿಡಲಾಯಿತು. ಅಮೇಲೆ ಅದನ್ನು ಹಣಕಾಸಿನ ಕೊರತೆಯಿಂದ ಕೈಬಿಡಲಾಯಿತು. ೨೦೧೯ ರಲ್ಲಿ ೫.೪ ಲಕ್ಷ ಮಕ್ಕಳಿಗೆ ಉಚಿತ ಸೈಕಲ್ ನೀಡಲಾಗಿತ್ತು. ಇದಕ್ಕೆ ಆಗ ೮೦೦ ಕೋಟಿ ರೂ. ವೆಚ್ಚವಾಗಿತ್ತು. ಈಗ ಸೈಕಲ್ ಬೆಲೆ ಅಧಿಕಗೊಂಡಿದೆ. ಮಕ್ಕಳ ಸಂಖ್ಯೆಯೂ ಬೆಳೆದಿದೆ. ಅದಕ್ಕಾಗಿ ಹಣಕಾಸು ಇಲಾಖೆ ಒಪ್ಪಿಲ್ಲ. ೮ನೇ ತರಗತಿ ಮಕ್ಕಳಿಗೆ ಇದನ್ನು ನೀಡುವ ಈ ಯೋಜನೆ ಮೊದಲಿನಿಂದಲೂ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದೂ ಜಾರಿಯಲ್ಲಿದೆ.
ಈ ಯೋಜನೆ ಪರ-ವಿರೋಧ ಎರಡೂ ಸಮೀಕ್ಷೆಗಳಿವೆ. ಇದನ್ನು ಆರಂಭಿಸಿದಾಗ ಇದ್ದ ಮೂಲ ಉದ್ದೇಶ ಎಂದರೆ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳು ಶಾಲೆ ಬಿಡುವ ಪ್ರಮಾಣ ಅಧಿಕಗೊಂಡಿದೆ. ಅವರಿಗೆ ಸೈಕಲ್ ನೀಡುವುದರಿಂದ ಶಾಲೆಗೆ ಬರುವುದಕ್ಕೆ ಉತ್ತೇಜನ ನೀಡಬಹುದು ಎಂಬ ಗುರಿ ಹೊಂದಲಾಗಿತ್ತು. ಈಗ ಸೈಕಲ್ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಮಕ್ಕಳಿಗೆ ನೀಡಿದ ಸೈಕಲ್ ದುರುಪಯೋಗ ಶೇಕಡ ೫೦ ರಷ್ಟು ಎಂಬ ಕಾರಣ ಈ ಯೋಜನೆಯನ್ನು ಕೈಬಿಡಲು ತೀರ್ಮಾನಿಸಲಾಯಿತು. ಆದರೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸೈಕಲ್ ಕಲಿಸುವುದು ಅಗತ್ಯ. ಅದರಲ್ಲೂ ಮಹಿಳೆಯರ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಮೋಟಾರು ವಾಹನಗಳ ಸಂಖ್ಯೆ ಹೆಚ್ಚಳವಾಗಿರಬಹುದು. ಆದರೂ ಇನ್ನೂ ಬಹುತೇಕ ಹಳ್ಳಿಗಳಿಗೆ ನಾವು ಬಸ್ ಸಂಪರ್ಕ ಕಲ್ಪಿಸಲು ಆಗಿಲ್ಲ. ಅಂಥ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ನಡೆದೇ ಹೋಗಬೇಕು. ಅವರಿಗೆ ಸೈಕಲ್ ಉಪಯುಕ್ತ ಎಂಬುದರಲ್ಲಿ ಸಂದೇಹವಿಲ್ಲ. ಎಲ್ಲ ಮಕ್ಕಳಿಗೂ ಇದರ ಅಗತ್ಯ ಇಲ್ಲದೆ ಇರಬಹುದು. ಬೆಟ್ಟಗುಡ್ಡ ಪ್ರದೇಶಗಳಲ್ಲಿ ಸೈಕಲ್ ಬಳಕೆ ಕಷ್ಟ. ಕೆಲವು ಕಡೆ ರಸ್ತೆಗಳ ದುರವಸ್ಥೆ ಕೂಡ ಸೈಕಲ್ ಬಳಕೆಗೆ ದೊಡ್ಡ ಅಡ್ಡಿ. ನಾರ್ವೆ ಅಂಥ ಪುಟ್ಟ ದೇಶಗಳಲ್ಲಿ ಸೈಕಲ್ ಬಳಕೆಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಕೆಲವು ವಿವಿ ಕ್ಯಾಂಪಸ್‌ಗಳಲ್ಲಿ ಸೈಕಲ್ ಬಳಸುವುದು ಸಾಮಾನ್ಯ ಸಂಗತಿಯಾಗಿದೆ. ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲಾ ಬಸ್‌ಗಳಲ್ಲಿ ಕಳುಹಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಸರ್ಕಾರ ನೀಡುವ ಸೈಕಲ್ ದುರುಪಯೋಗವಾಗುತ್ತದೆ ಎಂಬ ಏಕೈಕ ಕಾರಣದಿಂದ ಯೋಜನೆಯನ್ನೇ ಕೈಬಿಡುವುದು ಸರಿಯಲ್ಲ. ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಮಗುವಿಗೂ ಒಂದು ವಯಸ್ಸಿನಲ್ಲಿ ಸೈಕಲ್ ಹೊಡೆಯಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ತಂದೆತಾಯಿಗಳು ಹಣಕಾಸಿನ ಕೊರತೆಯಿಂದ ಸೈಕಲ್ ಕೊಡಿಸಿರುವುದಿಲ್ಲ. ಅದರಲ್ಲೂ ಕಡು ಬಡವರ ಮಕ್ಕಳಿಗೆ ಅದು ಕನಸಿನ ಮಾತು. ಇಂಥ ಮಕ್ಕಳಿಗೆ ಸರ್ಕಾರ ಸೈಕಲ್ ನೀಡಿದರೆ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂಬುದಂತೂ ನಿಜ. ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಅಧಿಕಗೊಳ್ಳುತ್ತದೆ ಎಂಬುದು ಸಂಪೂರ್ಣ ನಿಜವಲ್ಲ ಎಂಬುದು ಸಮೀಕ್ಷೆಯಿಂದ ಕಂಡು ಬಂದಿದ್ದರೂ ಸೈಕಲ್ ನೀಡಲು ಸರ್ಕಾರ ವೆಚ್ಚ ಮಾಡುವ ಹಣ ವ್ಯರ್ಥವೇನೂ ಆಗುವುದಿಲ್ಲ ಎಂಬುದು ನಿಜ. ಸೈಕಲ್ ತಯಾರಿಕೆಯಲ್ಲೂ ಈಗ ಬಹಳ ಸಂಶೋಧನೆಗಳು ನಡೆದಿವೆ. ಅತ್ಯಂತ ಹಗುರವಾದ ಸೈಕಲ್ ಬಂದಿವೆ. ಸೈಕಲ್ ಬಳಸುವ ಹವ್ಯಾಸ ಒಮ್ಮೆ ಒಂದು ಮಗುವಿಗೆ ಬಂದಲ್ಲಿ ಅದು ಜೀವನಪರ್ಯಂತ ಇದ್ದೇ ಇರುತ್ತದೆ. ಮುಂದೆ ಆ ಮಗು ದ್ವಿಚಕ್ರ ವಾಹನ ಬಳಸುವಾಗ ಸೈಕಲ್ ಬಳಕೆಯ ಅನುಭವ ಉಪಯೋಗಕ್ಕೆ ಬರುತ್ತದೆ. ಇಂದಿನ ಪರಿಸರ ಮಾಲಿನ್ಯ ಯುಗದಲ್ಲಿ ಮಕ್ಕಳಲ್ಲಿ ಸೈಕಲ್ ಮೇಲೆ ಹೆಚ್ಚಿನ ಪ್ರೀತಿ ಬೆಳೆಯುವಂತೆ ಮಾಡಿದಲ್ಲಿ ಶುದ್ಧ ಪರಿಸರವನ್ನು ಕಾಪಾಡಲು ಸಾಧ್ಯ. ಸರ್ಕಾರ ಯೋಜನೆ ಕೈಗೊಳ್ಳುವಾಗ ಹಣದ ವೆಚ್ಚಲೆಕ್ಕ ಹಾಕುವುದರೊಂದಿಗೆ ಜನರ ಮೇಲಾಗುವ ಆರೋಗ್ಯದ ಲಾಭಗಳನ್ನೂ ನೋಡಬೇಕು. ಸೈಕಲ್ ಕಲಿಯುವುದಕ್ಕೂ ಒಂದು ವಯಸ್ಸು ಇದೆ. ಅದು ಮೀರಿದರೆ ಮತ್ತೆ ಕಲಿಯಲು ಆಗುವುದಿಲ್ಲ. ಮಗುವಿಗೆ ಸೈಕಲ್ ನೀಡುವುದು ಶಿಕ್ಷಣದ ಒಂದು ಭಾಗವೇ ಹೊರತು ಹೆಚ್ಚುವರಿ ವೆಚ್ಚವಲ್ಲ.