ಜನಪ್ರತಿನಿಧಿಗಳ ತಿಕ್ಕಾಟ ದಿಕ್ಕುತಪ್ಪಿದ ಜನತಾದರ್ಶನ

ಸಂಪಾದಕೀಯ
Advertisement

ಕೋಲಾರದ ಜನತಾ ದರ್ಶನದಲ್ಲಿ ಶಾಸಕ- ಸಂಸದರ ತಿಕ್ಕಾಟವೇ ತಲೆ ತಗ್ಗಿಸುವಂಥ ವಿಚಾರ. ಸಂಸದರು ಪೊಲೀಸ್ ಅಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಲಿದೆ.

ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಜನತಾದರ್ಶನದಲ್ಲಿ ಸಂಸದ ಹಾಗೂ ಶಾಸಕರ ನಡುವೆ ತಿಕ್ಕಾಟ ಇಡೀ ಜನತಾದರ್ಶನದ ಮೂಲ ಉದ್ದೇಶವನ್ನೇ ದಿಕ್ಕು ತಪ್ಪುವಂತೆ ಮಾಡಿದೆ. ಶಾಸಕ ಹಾಗೂ ಸಂಸದರು ಜನರ ಕುಂದುಕೊರತೆಗಳನ್ನು ನಿವಾರಿಸಲು ಮುಂದಾಗಬೇಕು. ಅದನ್ನು ಬಿಟ್ಟು ವೇದಿಕೆಯ ಮೇಲೆ ಇಬ್ಬರೂ ಕೈಕೈಮಿಲಾಯಿಸುವ ಹಂತಕ್ಕೆ ಹೋದಾಗ ಪೊಲೀಸರು ಮಧ್ಯಪ್ರವೇಶಿಸಿ ಸಂಸದರನ್ನು ವೇದಿಕೆಯಿಂದ ಕೆಳಗೆ ಬಲವಂತವಾಗಿ ಕಳುಹಿಸಿದ್ದಾರೆ. ಇದರ ಬಗ್ಗೆ ಹಕ್ಕುಚ್ಯುತಿ ಮಂಡಿಸುವುದಾಗಿ ಸಂಸದರು ಹೇಳಿದ್ದಾರೆ.
ಇದು ಹಕ್ಕುಚ್ಯುತಿಗೆ ಬರುವುದೇ ಅನುಮಾನ. ಮೊದಲು ಸಂಸದರು ತಮ್ಮ ಕರ್ತವ್ಯ ಅರಿತು ಅದರಂತೆ ನಡೆದುಕೊಳ್ಳಬೇಕು. ಇವರು ಜನರಿಗೆ ಮಾದರಿವ್ಯಕ್ತಿಗಳಾಗಿ ವರ್ತಿಸಬೇಕು. ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಯಾವ ರೀತಿ ವರ್ತಿಸಬೇಕು ಎಂಬ ಶಿಷ್ಟಾಚಾರವನ್ನು ಜನಪ್ರತಿನಿಧಿಗಳು ತಿಳಿದು ಅದರಂತೆ ನಡೆದುಕೊಳ್ಳಬೇಕು. ಸಂಸದರು ನಿಜವಾದ ದೂರಿನಿಂದ ಬಂದಿದ್ದರೆ ಉಸ್ತುವಾರಿ ಸಚಿವರು ಅವರನ್ನು ಕರೆಸಿ ವಿಚಾರಿಸಬೇಕಿತ್ತು. ಅದೇರೀತಿ ವೇದಿಕೆಯ ಮೇಲಿದ್ದ ಶಾಸಕರ ಮೇಲೆ ವೈಯಕ್ತಿಕ ಆರೋಪಗಳನ್ನು ಮಾಡುವುದು. ಅದಕ್ಕೆ ಪ್ರತಿಯಾಗಿ ಶಾಸಕರು ಏಕವಚನದಲ್ಲಿ ದೂಷಿಸುವುದು ಸದ್ವರ್ತನೆಯಲ್ಲ. ಶಾಸಕರು ಮತ್ತು ಸಂಸದರು ತಮ್ಮ ಕರ್ತವ್ಯ ನಿರ್ವಹಿಸಲು ಯಾರಾದರೂ ಅಡ್ಡಿ ಮಾಡಿದರೆ ಆಗ ಅದು ಹಕ್ಕುಚ್ಯುತಿಗೆ ಬರುತ್ತದೆ. ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್ ಅವರನ್ನು ಕೇಳಬಹುದು. ಆದರೆ ಸಾರ್ವಜನಿಕ ಸಭೆಯಲ್ಲಿ ಶಾಸಕರೊಂದಿಗೆ ನೇರ ಹೋರಾಟಕ್ಕೆ ಇಳಿದಾಗ ಪೊಲೀಸರು ತಿಕ್ಕಾಟ ತಪ್ಪಿಸುವುದು ಅವರ ಕರ್ತವ್ಯ. ಅದನ್ನು ಹಕ್ಕುಚ್ಯುತಿ ಎಂದು ಕರೆಯಲು ಬರುತ್ತದೆಯೇ ಎಂಬುದೇ ಅನುಮಾನ. ಜನಪ್ರತಿನಿಧಿಗಳು ಮೊದಲು ಸತ್ಪçಜೆಯಾಗಿ ವರ್ತಿಸುವುದು ಬಹಳ ಮುಖ್ಯ. ನಾವು ಜನಪ್ರತಿನಿಧಿಗಳಿಗೆ ಕೆಲವು ವಿಶೇಷ ಅಧಿಕಾರಗಳನ್ನು ನೀಡಿದ್ದೇವೆ. ಅದರಿಂದ ಅವರಿಗೆ ಸಮಾಜಸೇವೆ ಮಾಡಲು ಅನುಕೂಲವಾಗುತ್ತದೆ. ಸದನದಲ್ಲಿ ಅವರು ಮುಕ್ತವಾಗಿ ಮಾತನಾಡಬಹುದು. ಅವರು ಅಲ್ಲಿ ಮಾತನಾಡಿದ್ದರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಬರುವುದಿಲ್ಲ. ಅಲ್ಲದೆ ಅವರು ಸಾರ್ವಜನಿಕ ಹಿತಾಸಕ್ತಿಯಿಂದ ಎಲ್ಲ ಕಡೆ ಹೋಗಲು ಮುಕ್ತ ಅವಕಾಶ ಇದೆ. ಆದರೆ ವಾತಾವರಣ ಇನ್ನೂ ತಿಳಿಯಾಗದೇ ಇರುವಾಗ ಅವರ ಭೇಟಿ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗುತ್ತದೆ ಎಂದು ಅಧಿಕಾರಿಗಳು ಹೇಳಿದಾಗ ಜನಪ್ರತಿನಿಧಿ ಸಹಕರಿಸುವುದು ಅಗತ್ಯ. ಗಲಭೆಪೀಡಿತ ಪ್ರದೇಶಗಳಲ್ಲಿ ಇದು ಸಾಮಾನ್ಯ. ಇದು ಹಕ್ಕುಚ್ಯುತಿಯಲ್ಲಿ ಬರುವುದಿಲ್ಲ. ಸಾರ್ವಜನಿಕ ಶಾಂತಿ ಕಾಪಾಡುವುದು ಪೊಲೀಸರ ಕರ್ತವ್ಯ.
ದೇಶದ ಹಲವು ಕಡೆ ಈಗಲೂ ಶಾಂತಿ ಕದಡುವ ಕೆಲಸಗಳು ನಡೆಯುತ್ತಿರುತ್ತವೆ. ಅಲ್ಲಿಗೆ ಜನಪ್ರತಿನಿಧಿಗಳು ಹೋಗುವುದು ಕಷ್ಟ. ಆಗ ಪೊಲೀಸರ ಸಲಹೆಯಂತೆ ವರ್ತಿಸುವುದು ಅನಿವಾರ್ಯ. ಕೋಲಾರದಲ್ಲಿ ಆ ಘಟನೆಯನ್ನು ತಪ್ಪಿಸಬಹುದಾಗಿತ್ತು. ಹಿಂದೆ ಹಲವು ಸಂದರ್ಭಗಳಲ್ಲಿ ಈ ರೀತಿ ಸಂಘರ್ಷ ನಡೆಯುವುದನ್ನು ಪೊಲೀಸರು ಚಾಕಚಕ್ಯತೆಯಿಂದ ಪರಿಹರಿಸಿದ್ದಾರೆ. ಜನತಾ ದರ್ಶನ ಇರುವುದೇ ಜನರ ದೂರುದುಮ್ಮಾನ ಕೇಳುವುದಕ್ಕೆ. ಅದು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳ ಕರ್ತವ್ಯ. ಸಾರ್ವಜನಿಕ ವೇದಿಕೆಯಲ್ಲಿ ವೈಯಕ್ತಿಕ ದ್ವೇಷವನ್ನು ಬಹಿರಂಗಪಡಿಸುವುದು ಸರಿಯಲ್ಲ. ಎಲ್ಲೇ ತಪ್ಪುಗಳು ನಡೆದಿದ್ದರೆ ಅದರ ಬಗ್ಗೆ ಜವಾಬ್ದಾರಿಯುತ ವ್ಯಕ್ತಿಗಳ ಗಮನ ಸೆಳೆಯುವುದಕ್ಕೆ ರೀತಿ-ನೀತಿಗಳಿವೆ. ಜನಪ್ರತಿನಿಧಿಗಳ ರಾಜಕೀಯ ಪಕ್ಷಗಳು ಬೇರೆ ಬೇರೆ ಇರಬಹುದು. ಆದರೆ ಉದ್ದೇಶ ಸಾರ್ವಜನಿಕ ಹಿತ ಎಂದಾದಾಗ ಅದಕ್ಕೆ ತಕ್ಕಂತೆ ವರ್ತಿಸುವುದೂ ಜನಪ್ರತಿನಿಧಿಗಳ ಕರ್ತವ್ಯ. ಕೆಲವು ಬಾರಿ ಪೊಲೀಸ್ ಅಧಿಕಾರಿಗಳು ಮಿತಿ ಮೀರಿ ವರ್ತಿಸುವುದುಂಟು. ಆಗ ಅವರಿಗೆ ಬುದ್ಧಿವಾದ ಹೇಳುವುದೂ ಜನಪ್ರತಿನಿಧಿಗಳ ಕರ್ತವ್ಯ.