ಹುಬ್ಬಳ್ಳಿ: ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಹುಬ್ಬಳ್ಳಿ ಮಂದಿಗೆ ವರುಣದೇವ ಮಂಗಳವಾರ ತಂಪೆರೆದಿದ್ದಾನೆ.
ಮಂಗಳವಾರ ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಆರ್ಭಟ ಆರಂಭಿಸಿದ ಮಳೆರಾಯ ಸತತ ಮೂರು ತಾಸುಗಳ ಕಾಲ ಎಡೆಬಿಡದೇ ಸುರಿದ. ಆರಂಭಿಕ ಹಂತದಲ್ಲಿ ಭೋರ್ಗರೆದ ಮಳೆಯಿಂದ ನಗರದ ರಸ್ತೆ, ಒಳಚರಂಡಿ ಮತ್ತು ಗಟಾರಗಳು ಸಂಪೂರ್ಣ ಜಲಾವೃತವಾಗಿದ್ದವು.
ತಗ್ಗು ಪ್ರದೇಶದ ಮನೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ನುಗ್ಗು ಜನ ಆತಂಕ ಪಡುವಂತಾಗಿತ್ತು. ಬಳಿಕ ಮಳೆ ಪ್ರಮಾಣ ನಿಧಾನವಾಗಿ ಕಡಿಮೆ ಆಗಿ ಜನ ನಿಟ್ಟುಸಿರು ಬಿಡುವಂತಾಯಿತು.
ಅಚಾನಕ್ಕಾಗಿ ಸುರಿದ ಮಳೆಗೆ ದ್ವಿಚಕ್ರ ವಾಹನ ಸವಾರರು ಪರದಾಡಿದರು. ಮಳೆಯಿಂದ ತಪ್ಪಿಸಿಕೊಳ್ಳಲು ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಅಂಗಡಿ-ಮುಂಗಟ್ಟುಗಳಲ್ಲಿ ಆಶ್ರಯ ಪಡೆದಿದ್ದರು. ವಾಹನಗಳು ರಸ್ತೆ ಮೇಲೆ ಅಡ್ಡಾದಿಡ್ಡಿ ನಿಂತಿದ್ದರಿಂದ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಇದರಿಂದ ವಿದ್ಯಾನಗರ ಮುಖ್ಯ ರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಗೋಕುಲ ರಸ್ತೆ, ವಿದ್ಯಾನಗರ, ಕೊಪ್ಪೀಕರ ರಸ್ತೆ, ದುರ್ಗದ ಬಯಲು, ಹಳೇ ಹುಬ್ಬಳ್ಳಿಯ ಕೆಲ ಭಾಗ, ಉಣಕಲ್ಲ, ನ್ಯೂ ಕಾಟನ್ ಮಾರ್ಕೆಟ್ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಮಳೆ ಸುರಿದಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.